ತುಮಕೂರು:

       ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ನಡೆದ ಆಯ-ವ್ಯಯ ಸಭೆಯಲ್ಲಿ 3.47ಕೋಟಿ ರೂ. ಉಳಿತಾಯ ಬಜೆಟನ್ನು ಮಂಡನೆ ಮಾಡಲಾಯಿತು.

      ಹಣಕಾಸು ಮತ್ತು ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿಯ ಅಧ್ಯಕ್ಷ ಲಕ್ಷ್ಮಿನರಸಿಂಹರಾಜು ಅವರು ಇಂದು ಪಾಲಿಕೆಯ 2019-20ನೇ ಸಾಲಿನ ಕಾಗದ ರಹಿತ ಇ-ಬಜೆಟ್ ಅನ್ನು ಮಂಡಿಸುತ್ತಾ, ಪಾಲಿಕೆಯು ತನ್ನ ಆರ್ಥಿಕ ಇತಿಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಯ-ವ್ಯಯ ಅಂದಾಜನ್ನು ತಯಾರಿಸಿದೆ. ಈ ಆಯವ್ಯಯದ ಅನ್ವಯ ಒಟ್ಟು 22230.91ಲಕ್ಷ ರೂ.ಗಳ ಸ್ವೀಕೃತಿ ಹಣದಲ್ಲಿ 2019-20 ಸಾಲಿನಲ್ಲಿ 21883.69 ಲಕ್ಷ ರೂ.ಗಳ ಅಂದಾಜು ವೆಚ್ಚ ಮಾಡಲು ಬಜೆಟ್ ಮಂಡನೆ ಮಾಡಲಾಗಿದ್ದು, 347.22ಲಕ್ಷ ರೂ.ಗಳು ಮಿಗತೆಯಲ್ಲಿದೆ ಎಂದು ತಿಳಿಸಿದ ಅವರು ತುಮಕೂರು ನಗರ ನಿವಾಸಿಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗಿದೆ ಎಂದು ಹೇಳಿದರು.

      ಈ ವರ್ಷದ ಆಯವ್ಯಯದಲ್ಲಿ ನಾಗರಿಕರಿಗೆಲ್ಲರಿಗೂ ಕುಡಿಯುವ ನೀರು, ಉತ್ತಮ ಆರೋಗ್ಯ, ಸ್ವಚ್ಛ ತುಮಕೂರು, ಬೀದಿ ದೀಪ, ಒಳಚರಂಡಿ, ರಸ್ತೆ ಮತ್ತು ಚರಂಡಿಗಳ ವ್ಯವಸ್ಥೆ, ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಉತ್ತಮ ಸಾರಿಗೆ, ಸಿಸಿ ಟಿವಿಗಳ ಅಳವಡಿಕೆ, 24*7 ನೀರಿನ ಸೌಲಭ್ಯ, ಗ್ಯಾಸ್‍ಲೈನ್ ಜೋಡಣೆ, ವಿದ್ಯುತ್ ಕೇಬಲ್ ಸಂಪರ್ಕ, ಮತ್ತಿತರ ಸಾರ್ವಜನಿಕ ಸಹಭಾಗಿತ್ವದ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಹಣಕಾಸು ನಿರ್ವಹಣೆ :-

      ಪ್ರಸಕ್ತ ಸಾಲಿನಲ್ಲಿ ಪಾಲಿಕೆಯಿಂದ 11077.90ಲಕ್ಷ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು, ರಾಜಸ್ವ ವೆಚ್ಚವನ್ನು 10869.19ಲಕ್ಷ ರೂ.ಗಳಿಗೆ ಮಿತಿಗೊಳಿಸಿ ರಾಜಸ್ವ ಖಾತೆಯಲ್ಲಿ 208.71ಲಕ್ಷ ರೂ.ಗಳ ಮಿಗತೆಯನ್ನು ಅಂದಾಜಿಸಲಾಗಿದೆ ಹಾಗೂ ಆಯ-ವ್ಯಯ ಅಂದಾಜಿನ ಬಂಡವಾಳ ಖಾತೆಯಲ್ಲಿ 65.14ಕೋಟಿ ರೂ.ಗಳ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ. ಹೊಸ ಆಸ್ತಿಗಳ ನಿರ್ಮಾಣ ಮತ್ತು ಇತರೆ ಬಂಡವಾಳ ವೆಚ್ಚಕ್ಕಾಗಿ 10287.57ಲಕ್ಷ ರೂ.ಗಳ ವೆಚ್ಚವನ್ನು ಭರಿಸಲು ಅಂದಾಜಿಸಲಾಗಿದೆ. ಬಂಡವಾಳ ಖಾತೆಯಲ್ಲಿ ಕೊರತೆಯಾಗಿರುವ 3773.55ಲಕ್ಷ ರೂ.ಗಳನ್ನು ರಾಜಸ್ವ ಖಾತೆಯಲ್ಲಿ ಉಳಿಕೆಯಾಗುವ 208.71ಲಕ್ಷ ರೂ. ಹಾಗೂ ಆರಂಭಿಕ ಶಿಲ್ಕು 3618.98ಲಕ್ಷ ರೂ.ಗಳೊಂದಿಗೆ ಹೊಂದಾಣಿಕೆ ಮಾಡಿ ವೆಚ್ಚಗಳನ್ನು ಭರಿಸಲು ಉದ್ದೇಶಿಸಲಾಗಿದೆ. ಇದರಿಂದ ಯಾವುದೇ ಸಾಲವನ್ನು ಪಡೆಯದೆ ರಾಜಸ್ವ ಖಾತೆ ಉಳಿತಾಯ ಹಾಗೂ ಆರಂಭಿಕ ಶಿಲ್ಕುಗಳಿಂದ ಸರಿದೂಗಿಸಲಾಗಿದೆ. ಒಟ್ಟಾರೆ ಆರಂಭಿಕ ಶಿಲ್ಕು 3618.98ಲಕ್ಷ ರೂ., ರಾಜಸ್ವ ಸ್ವೀಕೃತಿ 11077.90ಲಕ್ಷ ರೂ. ಹಾಗೂ ಬಂಡವಾಳ ಸ್ವೀಕೃತಿ 6514.02ಲಕ್ಷ ರೂ. ಸೇರಿ 21210.90ಲಕ್ಷ ರೂ.ಗಳನ್ನು ಅಂತಿಮವಾಗಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

      ಆಸ್ತಿ ತೆರಿಗೆಯು ಪಾಲಿಕೆಯ ಪ್ರಮುಖ ಆದಾಯ ಮೂಲವಾಗಿದ್ದು, ಕಟ್ಟಡ ಮತ್ತು ಭೂಮಿ ಮೇಲಿನ ಆಸ್ತಿ ತೆರಿಗೆಯಿಂದ 28ಕೋಟಿ ರೂ.(ಸೆಸ್ ಸೇರಿ)ಗಳನ್ನು ನಿರೀಕ್ಷಿಸಲಾಗಿದ್ದು, ಆಸ್ತಿ ತೆರಿಗೆ ಮೇಲಿನ ದಂಡದ ರೂಪದಲ್ಲಿ 3ಕೋಟಿ ರೂ.ಗಳನ್ನು ಸಂಗ್ರಹಿಸಲು ಅಂದಾಜಿಸಲಾಗಿದೆ. ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ನೈರ್ಮಲ್ಯ ಉಪಕರದಿಂದ 170ಲಕ್ಷ ರೂ.; ನೀರಿನ ಕಂದಾಯ, ಕೊಳಾಯಿ ಜೋಡಣೆ, ಅನಧಿಕೃತ ಕೊಳಾಯಿಗಳ ಸಕ್ರಮೀಕರಣ, ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಮಾರಾಟದಿಂದ 1183ಲಕ್ಷ ರೂ.; ಒಳಚರಂಡಿ ಶುಲ್ಕ ಮತ್ತು ಸಂಪರ್ಕದಿಂದ 201ಲಕ್ಷ ರೂ.; ಅಂಗಡಿ ಕಟ್ಟಡಗಳ ಬಾಡಿಗೆಯಿಂದ 109ಲಕ್ಷ ರೂ.; ಆಸ್ತಿ ಹಕ್ಕು ಬದಲಾವಣೆಯಿಂದ 70ಲಕ್ಷ ರೂ.; ಕಟ್ಟಡ ಪರವಾನಗಿ ಶುಲ್ಕ ವಸೂಲಿಯಿಂದ 100ಲಕ್ಷ ರೂ.; ಉದ್ದಿಮೆ ಪರವಾನಗಿ ಶುಲ್ಕದಿಂದ 150ಲಕ್ಷ ರೂ.; ಕೆರೆಗಳ ಪುನರುಜ್ಜೀವನ ಶುಲ್ಕ ವಸೂಲಾಗಿಯಿಂದ 20ಲಕ್ಷ ರೂ.; ಉದ್ದಿಮೆ ಪರವಾನಗಿ ಶುಲ್ಕವಾಗಿ 150ಲಕ್ಷ ರೂ.; ಜಾಹೀರಾತು ತೆರಿಗೆ ರೂಪದಲ್ಲಿ 13ಲಕ್ಷ ರೂ.; ಅಧಿಭಾರ ಶುಲ್ಕದಿಂದ (ಸ್ಟಾಂಪ್ ಡ್ಯೂಟಿ) 50ಲಕ್ಷ ರೂ.; ಅಭಿವೃದ್ಧಿ ಮತ್ತು ಸುಧಾರಣಾ ಶುಲ್ಕದಿಂದ 9ಲಕ್ಷ ರೂ.; ರಸ್ತೆ ಕಡಿತ ಶುಲ್ಕದಿಂದ 300 ಲಕ್ಷ ರೂ.; ವಿವಿಧ ಬ್ಯಾಂಕ್‍ಗಳಲ್ಲಿ ಪಾಲಿಕೆ ಹೊಂದಿರುವ ಖಾತೆಗಳಲ್ಲಿ ನಿರ್ವಹಿಸಿದ ಹಣದ ಮೇಲೆ 1ಕೋಟಿ ರೂ.ಗಳ ಬಡ್ಡಿ; ಜನನ-ಮರಣ ಪ್ರಮಾಣ ಪತ್ರ ವಿತರಣೆಯಿಂದ 2ಲಕ್ಷ ರೂ.; ಟೆಂಡರ್ ಫಾರಂ ವಿತರಣೆ, ಮಾರುಕಟ್ಟೆ ಶುಲ್ಕ, ಘನತ್ಯಾಜ್ಯ ಸಂಸ್ಕರಣಾ ಮಾರಾಟ, ಮತ್ತಿತರ ದಂಡಗಳಿಂದ 133.25ಲಕ್ಷ ರೂ.ಗಳನ್ನು ಈ ಆಯವ್ಯಯದಿಂದ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಅನುದಾನಗಳು :-

      ಪಾಲಿಕೆಗೆ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿವಿಧ ಅನುದಾನಗಳನ್ನು ನಿರೀಕ್ಷಿಸಲಾಗಿದ್ದು, ಅಧಿಕಾರಿ/ ಸಿಬ್ಬಂದಿ ವರ್ಗದವರಿಗೆ ವೇತನ ಮತ್ತಿತರೆ ಸೌಲಭ್ಯಗಳ ಎಸ್‍ಎಫ್‍ಸಿ ವೇತನದಡಿ 16ಕೋಟಿ ರೂ., ನಗರದ ಅಭಿವೃದ್ಧಿಗಾಗಿ ಎಸ್‍ಎಫ್‍ಸಿ ಮುಕ್ತ ನಿಧಿಯಡಿ 10ಕೋಟಿ ರೂ.ಗಳಲ್ಲದೆ ಎಸ್‍ಎಫ್‍ಸಿ ವಿಶೇಷ ಅನುದಾನವಾಗಿ 1ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನಿರೀಕ್ಷಿಸಲಾಗಿದೆ. ಬಿಡುಗಡೆಯಾಗುವ ಅನುದಾನಗಳನ್ನು ಸರ್ಕಾರದ ಮಾರ್ಗಸೂಚಿಗಳಂತೆ ಒಳಚರಂಡಿ, ರಸ್ತೆ, ತೆರೆದ ಚರಂಡಿ, ನೀರು ಸರಬರಾಜು, ಘನತ್ಯಾಜ್ಯ ವಿಲೇವಾರಿ, ಬೀದಿದೀಪ, ಉದ್ಯಾನವನಗಳ ಅಭಿವೃದ್ಧಿ, ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.

      ಪಾಲಿಕೆ ವ್ಯಾಪ್ತಿಯಲ್ಲಿನ ನೀರು ಸರಬರಾಜು ಸ್ಥಾವರ, ಬೀದಿ ದೀಪ, ಒಳಚರಂಡಿ ಶುದ್ಧೀಕರಣ ಘಟಕಗಳ ವಿದ್ಯುತ್ ಶುಲ್ಕ ಪಾವತಿಗಾಗಿ 27.40ಕೋಟಿ ರೂ.ಗಳ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ 300ಲಕ್ಷ ರೂ., ಕೇಂದ್ರ ಪುರಸ್ಕøತ ಅಮೃತ್ ಯೋಜನೆಯಡಿ 8.16ಕೋಟಿ ರೂ., ಪಾಲಿಕೆ ವ್ಯಾಪ್ತಿಯ ಬಡಜನರ ಸಬಲೀಕರಣಕ್ಕಾಗಿ ಡೇ-ನಲ್ಮ್ ಯೋಜನೆಯಡಿ 66.25ಲಕ್ಷ ರೂ., 14ನೇ ಹಣಕಾಸು ಆಯೋಗದಡಿ 18.13ಕೋಟಿ ರೂ.ಗಳ ಸಾಮಾನ್ಯ ಮೂಲ ಅನುದಾನ ಹಾಗೂ 300ಲಕ್ಷ ರೂ.ಗಳ ಕಾರ್ಯಾಧಾರಿತ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದರು.

      ಸ್ಥಳೀಯ ಶಾಸಕರ ಮತ್ತು ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ 65ಲಕ್ಷ ರೂ., ಪೌರಕಾರ್ಮಿಕರ ಮನೆಗಳ ನಿರ್ಮಾಣಕ್ಕಾಗಿ 144ಲಕ್ಷ ರೂ., ಪಾಲಿಕೆ ವ್ಯಾಪ್ತಿಯ ರಸ್ತೆ ನಿರ್ಮಾಣ ಹಾಗೂ ಅಗಲೀಕರಣ, ಸಿಮೆಂಟ್ ಬಿಲ್ಲೆಗಳ ನೆಲಹಾಸು, ಮತ್ತಿತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 30ಕೋಟಿ ರೂ., ತುರ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 2ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗಾಗಿ 1ಕೋಟಿ ರೂ., ಇಂದಿರಾ ಕ್ಯಾಂಟೀನ್ ನಿರ್ವಹಣೆಗಾಗಿ 50ಲಕ್ಷ ರೂ.ಗಳ ಅನುದಾನವನ್ನು ಸರ್ಕಾರದಿಂದ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.

ವೆಚ್ಚಗಳು:-

      ಪಾಲಿಕೆಯು 2019-20ನೇ ಸಾಲಿನಲ್ಲಿ ಮಾನವ ಸಂಪನ್ಮೂಲದ ವೇತನ ಮತ್ತು ಸೌಲಭ್ಯಗಳ ಪಾವತಿಗಾಗಿ 16ಕೋಟಿ ರೂ.; ಹೊರಗುತ್ತಿಗೆ ಮಾನವ ಸಂಪನ್ಮೂಲಕ್ಕಾಗಿ 65ಲಕ್ಷ ರೂ.; ರಾಷ್ಟ್ರೀಯ ಹಬ್ಬ, ನಾಡಹಬ್ಬ, ಕಲೆ, ಕ್ರೀಡೆ, ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳ ಆಚರಣೆಗಾಗಿ 59ಲಕ್ಷ ರೂ.; ಕಾಯಿದೆ ವೆಚ್ಚಕ್ಕಾಗಿ 20ಲಕ್ಷ ರೂ.; ಆಯುಷ್ಮಾನ್ ಯೋಜನೆಗಾಗಿ 60ಲಕ್ಷ ರೂ.; ಪ್ರಕೃತಿ ವಿಕೋಪದಡಿ ಗಾಳಿ, ಮಳೆ, ಬೆಂಕಿ ಆಕಸ್ಮಿಕಗಳಿಂದ ಆಸ್ತಿಪಾಸ್ತಿ ಹಾಗೂ ಪ್ರಾಣ ಹಾನಿಗಾಗಿ 10ಲಕ್ಷ ರೂ.ಗಳ ಸಹಾಯಧನ; ಸಾಂಕ್ರಾಮಿಕ ರೋಗ ತಡೆಗಟ್ಟುವ, ಅಕ್ರಮ ನಲ್ಲಿ ಸಂಪರ್ಕ ಅಗೆಯುವ, ಫ್ಲೆಕ್ಸ್ ಹಾಗೂ ಬ್ಯಾನರ್‍ಗಳನ್ನು ತೆರವುಗೊಳಿಸುವ ಕಾರ್ಯಕ್ಕಾಗಿ 40ಲಕ್ಷ ರೂ.; ಇಂದಿರಾ ಕ್ಯಾಂಟೀನ್ ನಿರ್ವಹಣೆಗಾಗಿ 300ಲಕ್ಷ ರೂ.; ನಗರದ ಅಭಿವೃದ್ಧಿಯಲ್ಲಿ ಜನರ ನೇರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ವಾರ್ಡ್ ಕಮಿಟಿ ರಚನೆಗಾಗಿ 10ಲಕ್ಷ ರೂ.; ತುರ್ತು ಕಾಮಗಾರಿಗಳನ್ನು ನಿರ್ವಹಿಸಲು ಮಹಾಪೌರರ ವಿವೇಚಾನುದಾನವಾಗಿ 2ಕೋಟಿ ರೂ.; ವೈಜ್ಞಾನಿಕ ಕಸ ವಿಲೇವಾರಿಗಾಗಿ 35.34ಕೋಟಿ ರೂ.; ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ 51.01ಕೋಟಿ ರೂ.; ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕಾಗಿ 120ಲಕ್ಷ ರೂ.; ಸಾರ್ವಜನಿಕ ಬೀದಿ ದೀಪ ವ್ಯವಸ್ಥೆಗಾಗಿ 14.62 ಕೋಟಿ ರೂ.; ಹಸಿರು-ಉಸಿರು ಯೋಜನೆಯಡಿ ಮಾದರಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು 751.50ಲಕ್ಷ ರೂ.; ಸಾರ್ವಜನಿಕ ಆರೋಗ್ಯಕ್ಕಾಗಿ 32ಲಕ್ಷ ರೂ.; ಶೌಚಾಲಯ ನಿರ್ಮಾಣಕ್ಕಾಗಿ 63ಲಕ್ಷ ರೂ.; ಸಾರ್ವಜನಿಕ ಸ್ಮಶಾನ ಅಭಿವೃದ್ಧಿಗಾಗಿ 90ಲಕ್ಷ ರೂ.ಗಳ ವೆಚ್ಚ ಭರಿಸಲು ಕಾಯ್ದಿರಿಸಿದೆ.

ವಸತಿ ರಹಿತ ಪತ್ರಕರ್ತರಿಗೆ ನಿವೇಶನ :

      ತುಮಕೂರು ನಗರದ ನಿವಾಸಿಗಳಾದ ನಿವೇಶನ ಸಹಿತ ವೃತ್ತಿ ನಿರತ ಪತ್ರಕರ್ತರಿಗೆ ವಸತಿ ನಿರ್ಮಾಣಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ 3.50ಲಕ್ಷ ರೂ. ಹಾಗೂ ಹಿಂದುಳಿದ ವರ್ಗದ ಪತ್ರಕರ್ತರಿಗಾಗಿ 2.50ಲಕ್ಷ ರೂ.ನಂತೆ ಸಹಾಯಧನ ಒದಗಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಸಾರ್ವಜನಿಕ ಮೂಲಭೂತ ಆಸ್ತಿಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ 60.55ಕೋಟಿ ರೂ.; ಪಾಲಿಕೆಯ ಆಸ್ತಿ ಸಂರಕ್ಷಣೆಗಾಗಿ 20ಲಕ್ಷ ರೂ.; ಮಾರುಕಟ್ಟೆ ಅಭಿವೃದ್ಧಿಗಾಗಿ 50ಲಕ್ಷ ರೂ.; ಪ.ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ 375.50ಲಕ್ಷ ರೂ.; ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 112.96ಲಕ್ಷ ರೂ.; ದಿವ್ಯಾಂಗ ಚೇತನರ ನೆರವಿಗಾಗಿ 77.90ಲಕ್ಷ ರೂ.; ಗಣಕೀಕೃತ ಮತ್ತು ಕಾಗದ ರಹಿತ ಕಛೇರಿಗಾಗಿ 60ಲಕ್ಷ ರೂ.; ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ದಿಬ್ಬೂರು ಬಳಿಯ 2 ಎಕರೆ ಪ್ರದೇಶದಲ್ಲಿ ಜಿ+2 ಮಾದರಿಯ ಮನೆಗಳ ನಿರ್ಮಾಣಕ್ಕಾಗಿ 150ಲಕ್ಷ ರೂ.; ದೀನ್‍ದಯಾಳ್ ಅಂತ್ಯೋದಯ ಯೋಜನೆಯಡಿ 32ಲಕ್ಷ ರೂ.; ನಿರ್ಗತಿಕ ವಸತಿ ರಹಿತರಿಗೆ ನಿರ್ಮಿಸಲಾಗಿರುವ ಕಟ್ಟಡ ನಿರ್ವಹಣೆಗಾಗಿ 5ಲಕ್ಷ ರೂ. ಗಳ ವೆಚ್ಚ ಭರಿಸಲು ಆಯವ್ಯಯದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

      ಪಾಲಿಕೆ ಸದಸ್ಯ ರಮೇಶ್ ಮಾತನಾಡಿ, ಪ.ಜಾತಿ/ಪಂಗಡ, ಹಿಂದುಳಿದ ವರ್ಗದ ಪತ್ರಕರ್ತರಿಗೆ ವಸತಿ ನಿರ್ಮಾಣಕ್ಕಾಗಿ ಸಹಾಯಧನ ಒದಗಿಸುವಂತೆ ಎಲ್ಲಾ ವರ್ಗದ ಪತ್ರಕರ್ತರಿಗೂ ಸಹಾಯಧನ ಕಲ್ಪಿಸುವ ವ್ಯವಸ್ಥೆಯಾಗಬೇಕು. ಪಾಲಿಕೆಯಲ್ಲಿ ಖಾಲಿ ಇರುವ 1341 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡ ಸಿಬ್ಬಂದಿಗಳಿಗೆ ಪಾವತಿಸುವ ವೇತನವನ್ನು ಹೆಚ್ಚಿಸಬೇಕು. ಇಂದಿರಾ ಕ್ಯಾಂಟೀನ್‍ನಲ್ಲಿ ಪೌರ ಕಾರ್ಮಿಕರಿಗೆ ಉಚಿತ ಬೆಳಗಿನ ಉಪಹಾರ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಸಭೆಯ ಗಮನಕ್ಕೆ ತಂದರು.

      ಮೇಯರ್ ಲಲಿತಾ ರವೀಶ್ ಮಾತನಾಡಿ, ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಕಾನೂನು ಬಾಹಿರ ಕಟ್ಟಡದ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವಿಕೆಯನ್ನು ಆಯವ್ಯಯದಿಂದ ಕೈಬಿಡಲಾಗುವುದು ಎಂದು ಭರವಸೆ ನೀಡಿದರು. ಈ ಸಭೆಯಲ್ಲಿ ಪಾಲಿಕೆಯ ಉಪಮಹಾಪೌರರಾದ ರೂಪಶ್ರೀ, ಆಯುಕ್ತರಾದ ಭೂಬಾಲನ್ ಹಾಗೂ ಪಾಲಿಕೆ ಎಲ್ಲಾ ವಾರ್ಡ್‍ಗಳ ಸದಸ್ಯರು ಮತ್ತು ಅಧಿಕಾರಿಗಳು ಹಾಜರಿದ್ದರು.

(Visited 47 times, 1 visits today)