ತುಮಕೂರು:

      ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ 22 ಕಾಮಗಾರಿಗಳು ಪೂರ್ಣಗೊಂಡಿದ್ದು, 47 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು.

      ಸ್ಮಾರ್ಟ್ ಸಿಟಿ ಕಛೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದ ಅನುದಾನದಲ್ಲಿ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪೈಕಿ ನಗರದಲ್ಲಿ 21.89 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಇ-ಟಾಯ್ಲೆಟ್, ಇಂಟರ್ ಮೀಡಿಯೇಟ್ ಪ್ಯಾರಾ ಟ್ರ್ಯಾನ್ಸಿಟ್ ಆಟೋ ಸ್ಟಾಂಡ್, ಸಿದ್ಧಗಂಗಾ ಬಸ್ ನಿಲ್ದಾಣದ ಮರು ನಿರ್ಮಾಣ, ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ಮಾರ್ಟ್ ಪಾರ್ಕ್, ಕುಡಿಯುವ ನೀರು ಸರಬರಾಜು ಯೋಜನೆಗಳು, ಅಮಾನಿಕೆರೆಯಲ್ಲಿ ನರ್ಸರಿ ಅಭಿವೃದ್ಧಿ ಹಾಗೂ ಸ್ಮಾರ್ಟ್ ಲಾಂಜ್, ಸೋಲಾರ್ ಬೀದಿದೀಪ, ಅಮಾನಿಕೆರೆ ಒತ್ತುವರಿ ತೆರವು ಹಾಗೂ ಗಿಡ-ಮರ ಬೆಳೆಸುವ ಉಪ್ಪಾರ ಹಳ್ಳಿ ಫ್ಲೈಓವರ್, ಕೆಳಸೇತುವೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಒಟ್ಟು 22 ವಿವಿಧ ಸಣ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೆ 515.43 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ 47 ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, 255.40 ಕೋಟಿ ರೂ. ವೆಚ್ಚದ 17 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಹಾಗೂ ಈ 135.75 ಕೋಟಿ ರೂ. ವೆಚ್ಚದ 17 ಕಾಮಗಾರಿಗಳು ಡಿಪಿಆರ್ ಹಂತದಲ್ಲಿವೆ ಎಂದು ಅವರು ತಿಳಿಸಿದರು.

      ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯು ಒಟ್ಟು 1000 ಕೋಟಿ ರೂ.ಗಳ ವೆಚ್ಚದಲ್ಲಿ 5 ವರ್ಷಗಳ ಅವಧಿಯಲ್ಲಿ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ 270.73 ಕೋಟಿ ರೂ.ಗಳ ವೆಚ್ಚದ 5 ಯೋಜನೆಗಳನ್ನು ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಯೋಜನೆಗಳಾಗಿ ಹಾಗೂ 549 ಕೋಟಿ ರೂ. ವೆಚ್ಚದ 4 ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ ಶೈಕ್ಷಣಿಕ ಅಭಿವೃದ್ಧಿಗಾಗಿ 31ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಕೃತಿಕ ಪುನರುಜ್ಜೀವನ ಹಾಗೂ ಸಮಗ್ರ ಅಭಿವೃದ್ಧಿ ಕಾರ್ಯ, ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಆಡಿಟೋರಿಯಂ, ಪ್ರಯೋಗಾಲಯ, ಲೈಬ್ರರಿ, ಸ್ಮಾರ್ಟ್ ತರಗತಿ; 114.20ಕೋಟಿ ರೂ. ವೆಚ್ಚದಲ್ಲಿ ನಗರದ ವರ್ತುಲರಸ್ತೆ ಅಭಿವೃದ್ಧಿ; 245.42ಕೋಟಿ ರೂ. ವೆಚ್ಚದಲ್ಲಿ ಉತ್ತಮ ಪಾದಚಾರಿ ಮಾರ್ಗ, ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್, ಅಂಡರ್ ಗ್ರೌಂಡ್ ಡಕ್ಟಿಂಗ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್ ರಸ್ತೆಯನ್ನಾಗಿ ಪರಿವರ್ತನೆ; 59.59ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‍ಮೆಂಟ್ ಹಾಗೂ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್; 93.78ಕೋಟಿ ರೂ. ವೆಚ್ಚದಲ್ಲಿ ಹಳೆಯ ಬಸ್ ನಿಲ್ದಾಣ ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಬಹುಮಹಡಿ ಪಾರ್ಕಿಂಗ್, ಲಿಫ್ಟ್ ಸೌಲಭ್ಯ, ಎಸ್ಕಲೇಟರ್, ವಾಣಿಜ್ಯ ಮಳಿಗೆಗಳುಳ್ಳ ಬಸ್‍ನಿಲ್ದಾಣ; 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ, ಎಟಿಎಂ, ಕಾಫಿ ಶಾಪ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಹಾಗೂ ತುಮಕೂರು ಒನ್‍ನಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳುಳ್ಳ ಸ್ಮಾರ್ಟ್ ಲಾಂಜ್, 56 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್; 30.41ಕೋಟಿ ರೂ. ವೆಚ್ಚದಲ್ಲಿ ಅಮಾನಿಕೆರೆಯನ್ನು ಪ್ರವಾಸ ತಾಣವಾಗಿಸಲು ಸರ್ವಾಂಗೀಣ ಅಭಿವೃದ್ಧಿ; 56.55ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ಶುದ್ಧೀಕರಣ ಘಟಕ ಸೇರಿದಂತೆ ಅಮಾನಿಕೆರೆಗೆ ಹೇಮಾವತಿ ನೀರು ತುಂಬಿಸುವುದು; 25 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನಗಳ ಅಭಿವೃದ್ಧಿ; 49.97 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದ ಪುನರಭಿವೃದ್ಧಿ; 12.33 ಕೋಟಿ ರೂ. ವೆಚ್ಚದಲ್ಲಿ ಮಾರಿಯಮ್ಮ ನಗರ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು; ಸಾರ್ವಜನಿಕ ಮತ್ತು ಖಾಸಗಿ ಪಾಲುಗಾರಿಕೆಯಡಿ 60 ಕೋಟಿ ರೂ. ವೆಚ್ಚದಲ್ಲಿ ಹಳೆಯ ವಿನಾಯಕ ಮಾರುಕಟ್ಟೆ ಪ್ರದೇಶದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ನಿರ್ಮಾಣ; ಎಲ್‍ಇಡಿ ಬೀದಿ ದೀಪಗಳ ಅಳವಡಿಕೆ; ನಗರದ ಸೌಂದರ್ಯೀಕರಣ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ ಅನುಷ್ಠಾನವಾಗುವ ಎಲ್ಲಾ ಕಾಮಗಾರಿಗಳನ್ನು ಪಾರದರ್ಶಕವಾಗಿ ಕೈಗೊಳ್ಳಲಾಗುತ್ತಿದ್ದು, ತುಮಕೂರು ನಗರವು 2ನೇ ಹಂತದಲ್ಲಿ ಗುರುತಿಸಿರುವ ಕರ್ನಾಟಕದ 4 ಸ್ಮಾರ್ಟ್ ಸಿಟಿಗಳ ಪೈಕಿ ಮೊದಲನೇ ಸ್ಥಾನದಲ್ಲಿ ಹಾಗೂ ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ 22ನೇ ಸ್ಥಾನದಲ್ಲಿದೆ. ಎಲ್ಲಾ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಕೈಗೊಳ್ಳಲಾಗುತ್ತಿದ್ದು, ಅಮಾನಿಕೆರೆ ಆವರಣದಲ್ಲಿ ನಿರ್ಮಿಸಿರುವ ಸ್ಮಾರ್ಟ್ ಲಾಂಜ್‍ಅನ್ನು ಉತ್ತಮ ನವೋತ್ಮಕ ಯೋಜನೆಯಾಗಿ ಗುರುತಿಸಿ ಇತ್ತೀಚೆಗೆ ಸ್ಮಾರ್ಟ್ ಸಿಟಿ ಇಂಡಿಯಾ ಅವಾರ್ಡ್ ದೊರೆತಿರುವುದರಿಂದ ಇದೇ ರೀತಿ ನಗರದ ಇನ್ನು 4 ವಿವಿಧ ಸ್ಥಳಗಳಲ್ಲಿ ಸ್ಮಾರ್ಟ್ ಲಾಂಜ್‍ಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಜೆಎಂಡಿ ಅಜಯ್ ವಿಠಲ್, ತಾಂತ್ರಿಕ ಸಲಹೆಗಾಗಿ ಪಿ.ಕೆ.ಸೈನಿ ಮತ್ತಿತರರು ಉಪಸ್ಥಿತರಿದ್ದರು.

(Visited 31 times, 1 visits today)