ತುಮಕೂರು:
ತುಮಕೂರು ನಗರದ ಠಾಣೆಗಳು ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಯ ಕೆಲ ಪೊಲೀಸ್ ಸಬ್ ಇನ್‍ಸ್ಪೆಕ್ಟರ್‍ಗಳನ್ನು ಸೋಮವಾರ ಸರ್ಕಾರ ವರ್ಗಾವಣೆ ಮಾಡಲಾಗಿದೆ. ಆವರಣದಲ್ಲಿರುವ ಹೆಸರು ಅಧಿಕಾರಿಗಳು ವರ್ಗಾವಣೆಯಾಗಿರುವ ಸ್ಥಳವಾಗಿದೆ.
ಹೆಬ್ಬೂರು ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಆಗಿದ್ದ ಎಸ್.ಶ್ರೀಕಾಂತ್, ತುಮಕೂರು ಹೊಸಬಡಾವಣೆ ಠಾಣೆಯ ಜಿ.ಕೆ.ರಾಘವೇಂದ್ರ (ಜಿಲ್ಲಾ ಪೊಲೀಸ್ ಕಚೇರಿ, ಅಪರಾಧ ದಾಖಲೆಗಳ ಬ್ಯುರೊ, ಡಿಸಿಆರ್‍ಬಿ), ತುಮಕೂರು ಬೆಸ್ಕಾಂ ಜಾಗೃತ ದಳದ ಎಚ್.ಎನ್.ಮಹಾಲಕ್ಷ್ಮಮ್ಮ (ಹೊಸ ಬಡಾವಣೆ ಠಾಣೆ), ಕೇಂದ್ರ ವಲಯ ಕಚೇರಿಯ ಸಿ.ರವಿಕುಮಾರ್ (ತುಮಕೂರು ಬೆಸ್ಕಾಂ ಜಾಗೃತ ದಳ) ವರ್ಗಾವಣೆಯಾಗಿದ್ದಾರೆ.
ತುಮಕೂರು ನಗರ ಠಾಣೆ ಅಪರಾಧ ವಿಭಾಗದ ಸಬ್‍ಇನ್‍ಸ್ಪೆಕ್ಟರ್ ಸಿ.ಆರ್.ಭಾಸ್ಕರ್ (ರಾಮನಗರ ಅಕ್ಕೂರು ಪೊಲೀಸ್ ಠಾಣೆ) ವರ್ಗಾವಣೆಯಾಗಿದ್ದಾರೆ.
ಪಾವಗಡ ಪೊಲೀಸ್ ಠಾಣೆಯ ಆರ್.ಮಧುಸೂದನ್ (ಚಿಕ್ಕಬಳ್ಳಾಪುರ ಬಟ್ಲಹಳ್ಳಿ ಪೊಲೀಸ್ ಠಾಣೆ) ಮಧುಗಿರಿ ಠಾಣೆ ಅಪರಾಧ ವಿಭಾಗದ ಐ.ಎ.ನಾಗರಾಜ್ (ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ), ಗೌರಿಬಿದನೂರು ನಗರ ಠಾಣೆಯ ಎಸ್.ಸುಂದರ್ (ಹೆಬ್ಬೂರು ಪೊಲೀಸ್ ಠಾಣೆ) ಅವರು ವರ್ಗಾವಣೆಗೊಂಡಿದ್ದಾರೆ.
ಮಾಜಿ ಶಾಸಕರ ಎಚ್ಚರಿಕೆ:
ಹೆಬ್ಬೂರು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಠಾಣೆ ಅಧಿಕಾರಿಗಳು, ಮೇಲಧಿಕಾರಿಗಳು ಏನೂ ಕ್ರಮ ಕೈಗೊಂಡಿಲ್ಲ. ಸರಣಿ ಕಳ್ಳತನ ಪ್ರಕರಣಗಳಿಂದ ಜನರು ಹಣ, ಆಭರಣ ಕಳೆದುಕೊಂಡು ಗೋಳಾಡುತ್ತಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡ ಈಚೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಪತ್ರಿಕಾಗೋಷ್ಠಿ ನಡೆಸಿ ಠಾಣೆ ಅಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ದೂರಿದ್ದರು. ಬಳಿಕ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರ ಬೆಂಬಲಿಗರ ಆರೋಪ ಪ್ರತ್ಯಾಪರೋಪ ನಡೆದು ಹೈಡ್ರಾಮಾಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಶಾಸಕ ಡಿ.ಸಿ.ಗೌರಿಶಂಕರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಮ್ಮ ಕ್ಷೇತ್ರದಲ್ಲಿ ಸರಣಿ ಕಳ್ಳತನ, ಅಪರಾಧ, ಅಪಘಾತ ಪ್ರಕರಣ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರು.
ಈ ಬೆಳವಣಿಗೆಯ ಬೆನ್ನಲ್ಲೇ ಹೆಬ್ಬೂರು ಠಾಣೆ ಸಬ್ ಇನ್‍ಸ್ಪೆಕ್ಟರ್ ವರ್ಗಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.