ಮಧುಗಿರಿ :
ಬಂಗಾರದ ಆಸೆಗಾಗಿ ಮಹಿಳೆಯೊಬ್ಬರನ್ನು ಕೊಲೆಗೈದು ಗುರುತು ಸಿಗದಂತೆ ಸುಟ್ಟು ಹಾಕಿದ್ದ ಪ್ರಕರಣವನ್ನು ತ್ವರಿತವಾಗಿ ಭೇದಿಸುವಲ್ಲಿ ತಾಲೂಕಿನ ಬಡವನಹಳ್ಳಿ ಪೋಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಧುಗಿರಿ ತಾಲೂಕಿನ ಬಿಜವರ ಗ್ರಾಮದ ಮಂಜುನಾಥ ಮತ್ತು ಕೊರಟಗೆರೆ ತಾಲೂಕಿನ ಮುಗ್ಗೊಂಡನಹಳ್ಳಿ ಗ್ರಾಮದ ಶಿವಕುಮಾರ ಬಂದಿತ ಆರೋಪಿಗಳು. ಜೂ. 6 ರಂದು ತಾಲೂಕಿನ ದೊಡ್ಡೇರಿ ಹೋಬಳಿಯ ಪುಲಮಘಟ್ಟ ಗ್ರಾಮದ ನಾರಾಯಣಪ್ಪನವರ ಜಮೀನಿನಲ್ಲಿ ಅಪರಿಚಿತ ಮಹಿಳೆಯನ್ನು ಕೊಲೆಗೈದು ಗುರುತು ಸಿಗದಂತೆ ಸುಟ್ಟು ಹಾಕಿದ್ದ ಬಗ್ಗೆ ಬಡವನಹಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಮಧುಗಿರಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಿ.ಐ ಕೆ. ಪ್ರಭಾಕರ್ ಮತ್ತು ಪಿಎಸೈ ನಾಗರಾಜು ಮತ್ತು ಸಿಬ್ಬಂದಿಯ ತಂಡ ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಕೊರಟಗೆರೆ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಬಂಗಾರದ ಅಸೆಗೆ ತುಂಬಾಡಿ ಗ್ರಾಮದ ವಾಸಿ ಗಿರಿಜಮ್ಮಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕೆಂಪ ಚಿನ್ನೇನಹಳ್ಳಿ ಗ್ರಾಮದ ಜಮೀನಿನಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಸಾಯಿಸಿ ನಂತರ ಪುಲಮಘಟ್ಟ ಗ್ರಾಮದ ಜಮೀನಿನಲ್ಲಿ ಶವವನ್ನು ಗುರುತು ಸಿಗದಂತೆ ಡೀಸಲ್ ಸುರಿದು ಸುಟ್ಟು ಹಾಕಿ ಕೊಲೆಗೈದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಕೊರಟಗೆರೆಯ ಮುತ್ತೂಟ್ ಫೈನಾನ್ಸ್‍ನಲ್ಲಿ ಹಾಗೂ ತೋವಿನಕೆರೆಯ ಭಾಗ್ಯಲಕ್ಷ್ಮೀ ಜ್ಯೂಯಲರ್ಸ್‍ನಲ್ಲಿ ಅಡವಿಟ್ಟಿದ್ದ ಒಟ್ಟು 1.83 ಲಕ್ಷ ರೂಗಳ ಆಕೆಯ ವಡವೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣವನ್ನು ತ್ವರಿತವಾಗಿ ಬೇದಿಸುವಲ್ಲಿ ಯಶಸ್ವಿಯಾದ ಪಿ.ಐ ಕೆ. ಪ್ರಭಾಕರ್ ಮತ್ತು ಪಿಎಸೈ ನಾಗರಾಜು ಮತ್ತು ಸಿಬ್ಬಂದಿಗಳಾದ ರಾಮಕೃಷ್ಣಯ್ಯ, ರಂಗನಾಥ, ಶ್ರೀರಂಗಯ್ಯ, ಸಿದ್ದಲಿಂಗಪ್ಪ ಮತ್ತು ಶೈಲಜಾ ರವರನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ ಅಭಿನಂದಿಸಿದ್ದಾರೆ.