ತುಮಕೂರು:
ಸರ್ಕಾರದಿಂದ ಮಂಜೂರಾದ ಕಾಮಗಾರಿಗಳನ್ನು ನಿರೀಕ್ಷಿತ ಅವಧಿಗೆ ಪೂರ್ಣಗೊಳಿಸದೆ ಅನುದಾನ ರದ್ದಾಗುವಂತೆ ಕರ್ತವ್ಯ ನಿರ್ಲಕ್ಷತೆ ತೋರಿದರೆ ನಾನು ಸಹಿಸುವುದಿಲ್ಲವೆಂದು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಇಲಾಖೆಗಳು ಪ್ರಸಕ್ತ ಸಾಲಿಗೆ ಮಂಜೂರಾದ ರಸ್ತೆ, ಕಟ್ಟಡ, ಮತ್ತಿತರ ಕಾಮಗಾರಿಗಳನ್ನು ಬರುವ 2020ರ ಫೆಬ್ರುವರಿಯೊಳಗೆ ಪೂರ್ಣಗೊಳಿಸಬೇಕು. ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಗಧಿತ ಅವಧಿಯೊಳಗೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಬೇಕು. ಇಲ್ಲದಿದ್ದರೆ ಅನುದಾನ ರದ್ದಾಗುತ್ತದೆ. ನಿಗಧಿತ ಸಮಯದಲ್ಲಿ ಬಿಲ್ ಸಲ್ಲಿಸದ ಕಾರಣ ಕೆಲವು ಲೆಕ್ಕಶೀರ್ಷಿಕೆಗಳಡಿ ಸುಮಾರು 3 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಸರಕಾರಕ್ಕೆ ವಾಪಸ್ಸಾಗಿದೆ. ಇದರಿಂದ ಮುಂದಿನ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ ಬೀಳಲಿದ್ದು, ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸೂಚಿಸಿದರು.
ಜಿ.ಪಂ.ಸದಸ್ಯರ ಗಮನಕ್ಕೆ ತರದಿದ್ದರೆ ಅನುಮೋದನೆ ಇಲ್ಲ:
ಜಿಲ್ಲಾ ಪಂಚಾಯಿತಿಯ ಅಧೀನದಲ್ಲಿ ಬರುವ ವಿವಿಧ ಇಲಾಖೆಗಳು 2019-20ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಕ್ರಿಯಾ ಯೋಜನೆ ಸಲ್ಲಿಸುವ ಮೊದಲು ಸಂಬಂಧಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತರಬೇಕು. ಇಲ್ಲದಿದ್ದಲ್ಲಿ ಸ್ಥಾಯಿ ಸಮಿತಿಯಿಂದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹೊರಗುತ್ತಿಗೆ ನೌಕರರಿಗೆ ಪಿ.ಎಫ್.,ಇಎಸ್‍ಐ ಕಡ್ಡಾಯ:
ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಾಗ ಸರ್ಕಾರದ ನಿಯಮಾವಳಿಯನ್ನು ಅನುಸರಿಸಬೇಕು. ಸರ್ಕಾರದಿಂದ ಮಂಜೂರಾದ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಸಿಬ್ಬಂದಿಗಳನ್ನು ಒದಗಿಸುವ ಏಜೆನ್ಸಿಗಳು ನಿಯಮಾನುಸಾರ ಪಿ.ಎಫ್. ಹಾಗೂ ಇಎಸ್‍ಐ ಹಣವನ್ನು ಕಡಿತಗೊಳಿಸುತ್ತಿದ್ದಾರೆಯೇ? ಇಲ್ಲವೇ? ಕನಿಷ್ಠ ವೇತನ ಪಾವತಿ ಮಾಡುತ್ತಿದ್ದಾರೆಯೇ? ಎಂಬುದನ್ನು ಗಮನಿಸಬೇಕೆಂದರಲ್ಲದೆ ನಿಯಮ ಪಾಲಿಸದ ಏಜೆನ್ಸಿಗಳ ಗುತ್ತಿಗೆಯನ್ನು ರದ್ದುಪಡಿಸಿ, ಬೇರೆ ಏಜೆನ್ಸಿಗಳಿಗೆ ಅವಕಾಶ ನೀಡಿ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಪ್ರೇಮಕುಮಾರ್ ಬಟವಾಡೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ಮಶಾನ ಅಭಿವೃದ್ಧಿಗೆ ಆದ್ಯತೆ ನೀಡಿ:
ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಸ್ಮಶಾನ ಭೂಮಿ ಗುರುತಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಹಲವಾರು ಹಳ್ಳಿಗಳಲ್ಲಿ ದಲಿತರಿಗೆ ಶವ ಹೂಳಲು ಸ್ಮಶಾನ ಭೂಮಿ ಇಲ್ಲ. ಸಮಾಜ ಕಲ್ಯಾಣ ಇಲಾಖೆಗೆ 2 ಕೋಟಿ ರೂ. ಅನುದಾನ ನೀಡಿ ಎರಡು ವರ್ಷ ಕಳೆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಜಿ.ಪಂ.ಉಪಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ದೇವರಾಜು, ಕಂದಾಯ ಇಲಾಖೆಯವರು ಹಲವು ಕಡೆ ಭೂಮಿಯ ಚೆಕ್‍ಬಂದಿ ಗುರುತಿಸಿಕೊಡುವಲ್ಲಿ ವಿಳಂಬಿಸಿದ್ದಾರೆ. ಇದರಿಂದ ಕೆಲವು ಕಡೆಗಳಲ್ಲಿ ಸ್ಮಶಾನ ಅಭಿವೃದ್ಧಿಯಾಗಿಲ್ಲ. ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಮಟ್ಟದ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆಯಲ್ಲಿ ಈಗಾಗಲೇ ಈ ವಿಚಾರಗಳು ಚರ್ಚೆಯಾಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿಗಾವಹಿಸಿ, ಆದಷ್ಟು ಬೇಗ ಸ್ಮಶಾನ ಭೂಮಿ ಗುರುತಿಸಲು ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.
ಸಮಗ್ರ ಮಾಹಿತಿಯೊಂದಿಗೆ ಬನ್ನಿ:
ಉಪಾಧ್ಯಕ್ಷರು ಮಾತನಾಡಿ ಅಧಿಕಾರಿಗಳು ಸ್ಥಾಯಿ ಸಮಿತಿ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಬೇಕು. ಸಾಮಾನ್ಯ ಸಭೆಗಳಲ್ಲಿ ಯಾವುದೇ ವಿಷಯವನ್ನು ವಿವರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ಕಷ್ಟಕರವಾಗಿರುವುದರಿಂದ ಸ್ಥಾಯಿ ಸಮಿತಿಗಳನ್ನು ರಚಿಸಲಾಗಿದೆ. ಸಂಬಂಧಿಸಿದ ಎಲ್ಲ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಸ್ಥಾಯಿಸ ಸಮಿತಿಗಳ ಸಭೆಗೆ ಹಾಜರಾಗಬೇಕೆಂದರಲ್ಲದೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಕಡತ ಮಂಡಿಸುವ ಮುನ್ನ ಸ್ಥಾಯಿ ಸಮಿತಿಗಳಲ್ಲಿ ಮಂಡಿಸಿ ವಿಸ್ಕøತ ಚರ್ಚೆ ನಡೆಸಿ, ಅನುಮೋದನೆ ಪಡೆದರೆ, ಸಾಮಾನ್ಯ ಸಭೆಯಲ್ಲಿ ಸುಲಭವಾಗಿ ಒಪ್ಪಿಗೆ ಪಡೆಯಬಹುದು ಎಂದು ತಿಳಿಸಿದರು.
ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿ:
ಸಮಿತಿ ಸದಸ್ಯ ತಮ್ಮಯ್ಯ ಮಾತನಾಡಿ ಜಿಲ್ಲೆಯ ಬಹುತೇಕ ಸರಕಾರಿ ಶಾಲೆಗಳಲ್ಲಿ ಶೌಚಾಲಯ ಇಲ್ಲದಿರುವ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಕೆಲವು ಕಡೆಗಳಲ್ಲಿ ಶಾಲೆ ಶಿಥಿಲಗೊಂಡು ಮರದ ಕೆಳಗೆ, ದೇವಾಲಯದಲ್ಲಿ ಶಾಲೆಗಳನ್ನು ನಡೆಸಲಾಗುತ್ತಿದೆ. ತಮ್ಮ ವ್ಯಾಪ್ತಿಯ ಪುರವರ ಹೋಬಳಿಯಲ್ಲಿರುವ 5 ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯಿಲ್ಲ. ವಿದ್ಯಾರ್ಥಿಗಳು ಬಯಲು ಶೌಚಾಲಯಕ್ಕೆ ಹೋಗುತ್ತಿರುವ ಪರಿಸ್ಥಿತಿಯಿದ್ದು, ಕೂಡಲೇ ಕ್ರಮಕೈಗೊಳ್ಳಬೇಕೆಂದು ಸಭೆಗೆ ತಿಳಿಸಿದಾಗ ಸ್ವಚ್ಚ ಭಾರತ್ ಅಭಿಯಾನದಲ್ಲಿ ಸಾಕಷ್ಟು ಅನುದಾನವಿದ್ದು, ಅದನ್ನು ಬಳಸಿಕೊಂಡು ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರುಗಳಿಗೆ ಶಾರದ ನರಸಿಂಹಮೂರ್ತಿ ಸಲಹೆ ನೀಡಿದರು.
ವಿಕಲಚೇತನಸ್ನೇಹಿ ಕಚೇರಿಗಳನ್ನಾಗಿಸಿ:
ವಿಕಲಚೇತನರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಲು ಅನುವಾಗುವಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರ್ಯಾಂಪ್, ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಮೂಲಕ ವಿಕಲಚೇತನಸ್ನೇಹಿ ಕಚೇರಿಗಳನ್ನಾಗಿಸಬೇಕು. ವಿಕಲಚೇತನರಿಗೆ ಮೀಸಲಿರಿಸುವ ಅನುದಾನ ರದ್ದಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಶಿಷ್ಠಾಚಾರ ಪಾಲಿಸಿ:
ಅಧಿಕಾರಿಗಳು ಯಾವುದೇ ಸರ್ಕಾರಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಶಿಷ್ಠಾಚಾರ ಪಾಲಿಸಬೇಕಲ್ಲದೆ ಕಾಮಗಾರಿ ಕೈಗೊಳ್ಳುವ ಬಗ್ಗೆ ಅವರ ಗಮನಕ್ಕೆ ತರಬೇಕೆಂದರು.
ಸಭೆಯಲ್ಲಿ ಸಾಮಾನ್ಯ ಸ್ಥಾಯಿ ಸಮಿತಿ ಸದಸ್ಯರಾದ ಶಿವಮ್ಮ ಡಾ.ನಾಗರಾಜು, ರೇಣುಕ, ಭಾರತಿ, ಭಾಗ್ಯಮ್ಮ, ಅಂಬುಜ ಎಸ್.ಆರ್.ಗೌಡ, ಮತ್ತಿತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.