ತುರುವೇಕೆರೆ:
ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯಕ್ಕೆ ಅಡ್ಡಿ ಪಡಿಸುತ್ತಿರುವ ಬಿಜೆಪಿಯ ಕ್ರಮವನ್ನು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಖಂಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗ್ರಾಮವಾಸ್ತವ್ಯದಿಂದ ಜನರ ಸಮಸ್ಯೆಗಳು ದೂರಾಗುತ್ತವೆ ಅಲ್ಲದೇ ಗ್ರಾಮಗಳ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಗ್ರಾಮವಾಸ್ತವ್ಯ ಮಾಡುತ್ತಿರುವ ಕುಮಾರಸ್ವಾಮಿಯವರ ಕಾರ್ಯಕ್ರಮಕ್ಕೆ ಬಿಜೆಪಿಯವರು ವಿನಾಕಾರಣ ತೊಂದರೆಕೊಡುತ್ತಿದ್ದಾರೆ. ಈ ಗ್ರಾಮವಾಸ್ತವ್ಯ ಮುಂದುವರೆದಲ್ಲಿ ಕುಮಾರಸ್ವಾಮಿಯವರ ವರ್ಚಸ್ಸು ಹೆಚ್ಚುತ್ತದೆ ಅಲ್ಲದೇ ಜನರ ಮನಸ್ಸಿನಲ್ಲಿ ಕುಮಾರಸ್ವಾಮಿ ಉಳಿದುಬಿಡುತ್ತಾರೆ ಎಂಬ ಭಯದಿಂದ ಬಿಜೆಪಿಯವರು ಸಣ್ಣತನಕ್ಕೆ ಮುಂದಾಗಿದ್ದಾರೆ. ಇದೇ ಪ್ರವೃತ್ತಿಯನ್ನು ಬಿಜೆಪಿಯವರು ಮುಂದುವರೆಸಿದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಯವರಿಗೂ ತಕ್ಕ ಪಾಠ ಕಲಿಸಬೇಕಾದೀತು ಎಂದು ಎಚ್ಚರಿಸಿದರು.
ಜನ ಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸಿರುವ ಏಕೈಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯಾಗಿದ್ದಾರೆ. ಇಂತಹ ಉತ್ತಮ ಕಾರ್ಯ ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಸಹಕಾರ ನೀಡುವುದನ್ನು ಬಿಟ್ಟು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ಅವರ ಕೀಳು ಅಭಿರುಚಿಗೆ ಸಾಕ್ಷಿಯಾಗಿದೆ. ಇಂತಹ ಕೃತ್ಯಕ್ಕೆ ಕೈ ಹಾಕಬಾರದೆಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಬಿಜೆಪಿಯವರು ಇಂತಹ ಕೃತ್ಯಕ್ಕೆ ಕಡಿವಾಣ ಹಾಕದಿದ್ದಲ್ಲಿ ಬಿಜೆಪಿ ಮುಖಂಡ ಯಡಿಯೂರಪ್ಪ ಮತ್ತು ಕೇಂದ್ರ ಸಚಿವರುಗಳ ಕಾರ್ಯಕ್ರಮಗಳಿಗೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಯುಂಟು ಮಾಡುವರು. ಇಂತಹ ಘಟನೆಗಳಿಗೆ ಅವಕಾಶ ನೀಡಬಾರದೆಂದು ಹಾಗೂ ರಾಜಕೀಯ ಸಂಘರ್ಷಕ್ಕೆ ಅವಕಾಶ ನೀಡಬಾರದೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಗುತ್ತಿಗೆದಾರ ತ್ಯಾಗರಾಜು, ಕೋಳಾಲ ಗಂಗಾಧರ್, ಹೊಡಿಕೇಘಟ್ಟ ನಾಗರಾಜು, ಹುಲಿಕಲ್ ಲೋಕೇಶ್, ಯುವಜೆಡಿಎಸ್ ಅಧ್ಯಕ್ಷ ಬಾಣಸಂದ್ರ ರಮೇಶ್, ದೊಡ್ಡಾಘಟ್ಟ ಮಲೆಸೀಮೆ ಶ್ರೀನಿವಾಸ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.