ಕೊರಟಗೆರೆ:
ಕಾರು ಚಾಲಕನ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯಿಂದ ಆಹಾರಕ್ಕಾಗಿ ಗ್ರಾಮಕ್ಕೆ ಬಂದು ರಸ್ತೆ ದಾಟುತ್ತಿದ್ದ ವೇಳೆ ಚಿರತೆಗೆ ಡಿಕ್ಕಿ ಹೊಡೆದು, ಚಿರತೆಯ ತಲೆ, ಹೊಟ್ಟೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿ ಚಿರತೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ಸೋಮವಾರ ನಡೆದಿದೆ.
ಊರ್ಡಿಗೆರೆ ಸಮೀಪದ ದೇವರಾಯನದುರ್ಗ ಅರಣ್ಯ ಪ್ರದೇಶದಿಂದ ಎಲೆರಾಂಪುರ ಗ್ರಾಪಂ ಸಮೀಪದ ಹೊಸಪಾಳ್ಯದ ಕಡೆಗೆ ಆಹಾರ ಅರಸಿ ಬಂದಿರುವ ಚಿರತೆ ಭಾನುವಾರ ರಾತ್ರಿ ರಸ್ತೆ ದಾಟುವ ವೇಳೆಯಲ್ಲಿ ಅತಿ ವೇಗವಾಗಿ ಬಂದಿರುವ ಕಾರಿನಿಂದ ಅಪಘಾತವಾಗಿದೆ. ಅಪಘಾತ ನಡೆದ ಕೂಡಲೆ ತಿರುಗಿಯೂ ಸಹ ನೋಡದೆ ಕಾರು ಚಾಲಕ ಸ್ಥಳದಿಂದ ಪರಾರಿ ಆಗಿದ್ದಾರೆ. ಹೊಸಪಾಳ್ಯಕ್ಕೆ ತೆರಳುವ ವೇಳೆ ಯುವಕರಿಗೆ ಸೋಮವಾರ ಮುಂಜಾನೆ ಚಿರತೆಯ ದರ್ಶನವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಭಾನುವಾರ ರಾತ್ರಿಯೇ ಚಿರತೆಗೆ ಅಪಘಾತವಾಗಿ ರಸ್ತೆ ಬದಿಯ ಬೇಲಿಗೆ ಬಿದ್ದು ಹಾರಾಟ ಚೀರಾಟ ನಡೆಸಿದೆ.
ಬೇಲಿಯಲ್ಲಿನ ಮುಳ್ಳುಗಳು ಸಹ ಚುಚ್ಚ್ಚಿಕೊಂಡಿವೆ. ತನ್ನ ಜೀವವನ್ನು ಉಳಿಸಿಕೊಳ್ಳಲು ಪರದಾಡಿದೆ. ಅರಣ್ಯ ವ್ಯಾಪ್ತಿಯಲ್ಲಿ ಎಚ್ಚರಿಕೆ ನಾಮಫಲಕ ಮತ್ತು ಅತಿವೇಗದ ಚಾಲನೆಗೆ ದಂಡ ವಿಧಿಸುವ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಬೇಕಾಗಿದೆ. ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ದಾಬಸ್‍ಪೇಟೆ-ಊರ್ಡಿಗೆರೆ-ಕೊರಟಗೆರೆ ಮಾರ್ಗದ ರಾಜ್ಯ ಹೆದ್ದಾರಿ ಸುಮಾರು 25 ಕಿಮೀ ದೂರ ವ್ಯಾಪ್ತಿಯಿದೆ. ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ಹಗಲು-ರಾತ್ರಿ ವೇಳೆ ಪ್ರಾಣಿಗಳು ಚಲಿಸುತ್ತವೆ. ಅತಿ ವೇಗದಿಂದ ಮತ್ತು ಅಜಾಗರೂ ಕತೆಯಿಂದ ವಾಹನ ಚಾಲಕರು ವಾಹನ ಚಲಾಯಿಸುತ್ತಾರೆ. ಇದೇ ಮಾರ್ಗದಲ್ಲಿ ಹಲವು ಕಾಡು ಪ್ರಾಣಿಗಳು ಮೃತಪಟ್ಟಿವೆ. ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.ಸ್ಥಳಕ್ಕೆ ತುಮಕೂರು ಗ್ರಾಮಾಂತರ ಅರಣ್ಯ ಇಲಾಖಾಧಿಕಾರಿ ಮಹೇಶಮಾಲವತ್ತಿ ಮತ್ತು ಅರವಳಿಕೆ ತಜ್ಞ ಮಂಜುನಾಥ ಸೇರಿದಂತೆ ಸಿಬ್ಬಂದಿವರ್ಗ ಕಾರ್ಯಚರಣೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಚಿರತೆಯನ್ನು ಸೆರೆ ಹಿಡಿದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಸಮೀಪದ ಬನ್ನೆರುಘಟ್ಟ ಅರಣ್ಯದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಪೆÇೀಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.