ತುಮಕೂರು:

      ಕಚೇರಿ ಕರ್ತವ್ಯದ ಅವಧಿಯಲ್ಲಿ ಕಚೇರಿಯಲ್ಲಿರದೇ, ಯಾರಿಗೂ ತಿಳಿಸದೇ ಬೆಂಗಳೂರಿಗೆ ಹೋಗುವ ಆರ್‍ಟಿಒ ಅವರನ್ನು ವರ್ಗಾವಣೆ ಮಾಡುವ ಮೂಲಕ ಸಾರ್ವಜನಿಕರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕಿದೆ ಎಂದು ತುಮಕೂರು ನಗರ ಆಟೋ ಡೀಲರ್ಸ್ ಏಜೆಂಟ್ಸ್ ಮತ್ತು ಫೈನಾನ್ಸಿಯರ್ಸ್ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಟಿ.ಆರ್.ಸುರೇಶ್ ಒತ್ತಾಯಿಸಿದರು.

      ಆರ್‍ಟಿಒ ಕಚೇರಿಗೆ ಸಂಘದ ಮುಖಂಡರೊಂದಿಗೆ ತೆರಳಿದ ಟಿ.ಆರ್.ಸುರೇಶ್ ಅವರು ವಾಯು ಮಾಲಿನ್ಯ ತಪಾಸಣೆಯಿಂದ ಕೆಲ ತಾಲ್ಲೂಕುಗಳಿಗೆ ವಿನಾಯಿತಿ ನೀಡುವಂತೆ ಕಳೆದ ತಿಂಗಳು ಮನವಿ ಸಲ್ಲಿಸಿದರು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಹಣವಿಲ್ಲದೇ ಆರ್‍ಟಿಒ ಯಾವುದೇ ಕೆಲಸವನ್ನು ಮಾಡುತ್ತಿಲ್ಲ, ಜಿಲ್ಲಾ ಮಟ್ಟದ ಅಧಿಕಾರಿ ಜಿಲ್ಲಾಕೇಂದ್ರದಲ್ಲಿರದೇ, ಯಾವಾಗಲೂ ಬೆಂಗಳೂರಿನಲ್ಲಿರುತ್ತಾರೆ, ಸಾರ್ವಜನಿಕರು ದೂರವಾಣಿ ಮೂಲಕ ಸಂಪರ್ಕಿಸಿದರೆ ಉದ್ಧಟತನದಿಂದ ವರ್ತಿಸುತ್ತಾರೆ ಎಂದು ದೂರಿದರು.

      ಆಟೋ ರಿಕ್ಷಗಳಿಗೆ ವಾಯು ಮಾಲಿನ್ಯ ತಪಾಸಣಾ ಪತ್ರವನ್ನು ಹೊಂದಿರುವುದು ಕಡ್ಡಾಯಗೊಳಿಸಲಾಗಿದ್ದು, ಗುಬ್ಬಿ, ನಿಟ್ಟೂರು,ಕುಣಿಗಲ್ ಹಾಗೂ ಶಿರಾದಲ್ಲಿ ತಪಾಸಣಾ ಕೇಂದ್ರಗಳು ಇಲ್ಲದೇ ಇರುವುದರಿಂದ ಅಲ್ಲಿನ ವಾಹನಗಳು ತುಮಕೂರು ನಗರಕ್ಕೆ ಬರಬೇಕಾಗಿದ್ದು, ತಮ್ಮ ವ್ಯಾಪ್ತಿಯನ್ನು ಬಿಟ್ಟು ಹೊರಬರುವ ಆಟೋಗಳನ್ನು ಹಿಡಿದು ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

      ರಹದಾರಿ ವ್ಯಾಪ್ತಿಯನ್ನು ಮೀರಿ ಹೊರಬರುವ ಆಟೋ ರಿಕ್ಷಾಗಳಿಗೆ ವಾಹನ ವಿಮೆಯನ್ನು ನೀಡುವುದಿಲ್ಲ ಹಾಗಾಗಿ ಸಾರಿಗೆ ಮತ್ತು ಪೊಲೀಸ್ ಇಲಾಖೆಯವರು ಈ ಊರುಗಳಿಂದ ಬರುವ ಆಟೋ ರಿಕ್ಷಗಳ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಅನುಮತಿ ಪಡೆದುಕೊಳ್ಳುವಂತೆ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಆರ್‍ಟಿಒ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಇದರಿಂದ ಆಟೋ ಮಾಲೀಕರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

      ಮುಖಂಡರಾದ ನಾಗಾರಾಜ್ ಗೌಡ ಮಾತನಾಡಿ, ಆರ್‍ಟಿಒ ಅಧಿಕಾರಿಗಳಿಗೆ ಕರ್ತವ್ಯ ಪ್ರಜ್ಞೆ ಇಲ್ಲ, ಸಾರ್ವಜನಿಕರ ಕೆಲಸಕ್ಕೆ ಇಲ್ಲಸಲ್ಲದ ನೆಪ ಹೇಳುತ್ತಾರೆ, ಮನವಿ ಸಲ್ಲಿಸಿ ತಿಂಗಳು ಕಳೆದರು ಯಾವುದೇ ಕ್ರಮ ಕೈಗೊಳ್ಳದೇ ಉದಾಸೀನ ತೋರುವುದಲ್ಲದೆ, ಸಾರ್ವಜನಿಕರೊಂದಿಗೆ ದುರ್ನಡತೆ ತೋರುತ್ತಾರೆ, ದರ್ಪದಿಂದ ವರ್ತಿಸುತ್ತಾರೆ ಎಂದು ಆರೋಪಿಸಿದರು.

      ಪ್ರತಿಭಟನೆಯಲ್ಲಿ ಮುಖಂಡರಾದ ಕುಮಾರ್ ಸೇರಿದಂತೆ ತುಮಕೂರು ನಗರ ಆಟೋ ಡೀಲರ್ಸ್ ಏಜೆಂಟ್ಸ್ ಮತ್ತು ಫೈನಾನ್ಸಿಯರ್ಸ್ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಪಾಲ್ಗೊಂಡಿದ್ದರು.

(Visited 8 times, 1 visits today)