ತುಮಕೂರು:

      ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ರೂಪಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕವು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.

      ಪ್ರತಿಭಟನೆಯಲ್ಲಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ಕುದುರೆ ವ್ಯಾಪಾರ ಮಾಡಿದಂತೆ ಶಾಸಕರನ್ನು ನೂರಾರು ಕೋಟಿಗಳ ಲೆಕ್ಕದಲ್ಲಿ ಖರೀದಿಸುತ್ತಿದೆ. ಕೋಟಿಗಳ ಲೆಕ್ಕದಲ್ಲಿ ಆಮಿಷ ಒಡ್ಡುತ್ತಿದೆ. ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು, ಆಯ್ಕೆಯಾದ ಜನಪ್ರತಿನಿಧಿಗಳು ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಅವರನ್ನು ರಾಜ್ಯದ ಜನರು ಎಂದಿಗೂ ಕ್ಷಮಿಸಲಾರರು ಎಂದು ಹರಿಹಾಯ್ದರು.

      ರಾಜೀನಾಮೆ ಕೊಟ್ಟಿರುವ ಶಾಸಕರು ಮುಂದಿನ ಪೀಳಿಗೆಗೆ ಕೆಟ್ಟ ರಾಜಕೀಯದ ಪರಿಪಾಟ ಹೇಳಿಕೊಡುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಅವರು ಮನಸ್ಸು ಬದಲಿಸಿಕೊಂಡು ಪಕ್ಷಕ್ಕೆ ಬಂದರೆ, ಸರ್ಕಾರ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದರು.

ಕಾಂಗ್ರೆಸ್‍ನ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ನಮ್ಮ ಪಕ್ಷದಿಂದ ಗೆದ್ದು ಅಧಿಕಾರ ಅನುಭವಿಸಿ, ಈಗ ಶಾಸಕರು ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ತೆವಲಿಗೆ ಪಕ್ಷ ಬಿಡುವುದು ಸರಿಯಲ್ಲ. ಶಾಸಕರು ಮರಳಿ ಪಕ್ಷಕ್ಕೆ ಬಂದರೆ, ಹಿರಿಯ ಮುಖಂಡರು ಸೂಕ್ತ ಸ್ಥಾನಮಾನ ನೀಡಲಿದ್ದಾರೆ ಎಂದರು.

      ಈ ರಾಜಕೀಯದ ಕೆಟ್ಟ ಬೆಳವಣಿಗೆಯ ಹಿಂದೆ ಪಾತ್ರವಿಲ್ಲ ಎಂದು ಬಿಜೆಪಿ ವಾದಿಸುತ್ತಿದೆ. ಹಾಗಾದರೆ, ಶಾಸಕರು ರಾಜೀನಾಮೆ ಬಳಿಕ ಶಾಸಕರು ಮುಂಬೈಗೆ ಹಾರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದವರು ಯಾರು, ಐಷಾರಾಮಿ ಹೋಟೆಲ್‍ನಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟು, ಆ ಹೋಟೆಲ್‍ನ ಸುತ್ತ ಪೊಲೀಸರ ಸರ್ಪಗಾವಲು ಹಾಕಿದವರು ಯಾರು ಎಂದು ಅವರು ಪ್ರಶ್ನಿಸಿದರು.

      ಪಕ್ಷದ ಮುಖಂಡರಾದ ಮುರುಳೀಧರ ಹಾಲಪ್ಪ, ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಮೂರ್ತಿ, ಮರಿಚನ್ನಮ್ಮ, ಗೀತಾ ರುದ್ರೇಶ್, ಕಾಂಗ್ರೆಸ್‍ನಿಂದ ಆಯ್ಕೆಯಾದ ಪಾಲಿಕೆಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

(Visited 8 times, 1 visits today)