ತುಮಕೂರು:

ತಿಲಕ್‍ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಿಪ್ಪೇಶ ಹಾಗೂ ಲಕ್ಷ್ಮಣ್ ಎಂಬುವವರ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದ ರಂಗಪ್ಪ, ಭೀಮಣ್ಣ ಬಿನ್ ನರಸಪ್ಪ ಹಾಗೂ ಭೀಮಣ್ಣ ಬಿನ್ ಯಲ್ಲಪ್ಪ ಎಂಬ ಮೂರು ಮಂದಿ ಆರೋಪಿಗಳಿಗೆ 4 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 15000 ರೂ.ಗಳ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನಲೆ:-

ಮೂವರು ಆರೋಪಿಗಳು ಸೇರಿ 2018ರ ಮಾರ್ಚ್ 10ರಂದು ತಿಲಕ್‍ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿ ರಿಂಗ್ ರಸ್ತೆಯಲ್ಲಿರುವ ಡಿ.ಎ.ಟಿ ಮಸೀದಿ ಬಳಿ ತಿಪ್ಪೇಶ ಮತ್ತು ಲಕ್ಷ್ಮಣ ಎಂಬುವವರನ್ನು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡಬೇಕೆಂಬ ಉದ್ದೇಶದಿಂದ ಇಬ್ಬರಿಗೂ ಇಟ್ಟಿಗೆಯಿಂದ ಹಣೆ, ಕೆನ್ನೆ, ಹೊಟ್ಟೆ, ಎದೆ, ಕಿವಿ ಭಾಗಕ್ಕೆ ಹೊಡೆದು ತೀವ್ರ ಸ್ವರೂಪದ ಗಾಯಪಡಿಸಿ ಪ್ರಾಣಬೆದರಿಕೆ ಹಾಕಿರುವುದು ತನಿಖೆಯಿಂದ ಸಾಬೀತಾಗಿದೆ.

ಆರೋಪ ರುಜುವಾತಾದ ಕಾರಣ ರಂಗಣ್ಣ, ಭೀಮಣ್ಣ ಬಿನ್ ನರಸಪ್ಪ, ಭೀಮಣ್ಣ ಬಿನ್ ಯಲ್ಲಪ್ಪ ಅವರಿಗೆ 4 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 15 ಸಾವಿರ ರೂ. ದಂಡದೊಂದಿಗೆ ಕಲಂ 324 ಐಪಿಸಿ ಅಪರಾಧಕ್ಕಾಗಿ 6 ತಿಂಗಳ ಶಿಕ್ಷೆ ಹಾಗೂ ತಲಾ 3 ಸಾವಿರ ರೂ.ಗಳ ದಂಡವನ್ನು ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 25 ಸಾವಿರ ರೂ.ಗಳನ್ನು ಗಾಯಾಳು ಲಕ್ಷ್ಮಣ ಅವರಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ತೀರ್ಪು ನೀಡಿದೆ. ತನಿಖಾಧಿಕಾರಿ ಲಕ್ಷ್ಮಯ್ಯ ಎಂ.ಬಿ ಅವರು ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಅಭಿಯೋಜಕಿ ಕೆ.ಹೆಚ್.ಶ್ರೀಮತಿ ವಾದ ಮಂಡಿಸಿದ್ದರು.

(Visited 15 times, 1 visits today)