ತುಮಕೂರು:

      ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ತಾಂಡವವಾಡುತ್ತಿದ್ದರೂ ಸಹ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಮಂದಿ ರೈತರು ಸಮ್ಮಿಶ್ರ ಸರ್ಕಾರ ಹಾಗೂ ಶಾಸಕರು, ಸಚಿವರುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

      ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತ ಸಂಘದ ಆನಂದ್‍ಪಾಟೀಲ್ ಮಾತನಾಡಿ, ರಾಜ್ಯ ವಿಧಾನಸಭೆಯಲ್ಲಿ ಎಬ್ಬಿಸಿರುವ ಗಲಭೆಯನ್ನು ಗಮನಿಸಿದರೆ ರಾಷ್ಟ್ರದ ಮುಂದೆ ಕರ್ನಾಟಕದ ಜನತೆ ತಲೆತಗ್ಗಿಸುವಂತಹ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಂಗಾರು ಮಳೆ ಆಗದೇ ಸಕಾಲಕ್ಕೆ ಬೆಳೆಯೂ ಇಲ್ಲದೆ ರೈತರು ಬರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶಾಸಕರು, ಸಚಿವರುಗಳು ರಾಜ್ಯದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಗಮನ ಹರಿಸದೆ ತಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆಗಳಿಗಾಗಿ ರಾಜಕೀಯ ದೊಂಬರಾಟದಲ್ಲಿ ಮುಳುಗಿರುವುದು ನಾಚಿಕೆಗೇಡಿನ ಸಂಗತಿ ಎಂದರು.

      ತಮ್ಮ ಸ್ವಾರ್ಥ ಹಾಗೂ ಅಧಿಕಾರದ ಆಸೆಗಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಕತ್ತೆಗಳ ರೀತಿ ಮಾರಾಟವಾಗುತ್ತಿರುವ, ರೆಸಾರ್ಟ್‍ನಲ್ಲಿ ಮಜಾ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಲ್ಲ ಶಾಸಕರುಗಳಿಗೆ ಛೀ.. ಥೂ.. ಅಂತ ಉಗಿಯುವ ಚಳವಳಿ ಮಾಡುವುದರ ಮೂಲಕ ಅವರ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಬೇಕಾಗಿದೆ ಎಂದರು.

      ರೆಸಾರ್ಟ್ ರಾಜಕಾರಣದಲ್ಲಿ ನಿರತರಾಗಿರುವ ಸಚಿವರು, ಶಾಸಕರುಗಳು ಈಗಲಾದರೂ ರಾಜ್ಯದ ಜನರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಅವರು ಒತ್ತಾಯಿಸಿದರು.

      ಹಸಿರುಸೇನೆಯ ಕೆಂಕೆರೆ ಸತೀಶ್ ಮಾತನಾಡಿ, ಪ್ರಜಾಪ್ರಭುತ್ವದ ಆಶಯಗಳ ವಿರುದ್ಧವಾಗಿ ನಡೆದುಕೊಂಡಿರುವ, ಮತದಾರರ ಆಶಯಗಳನ್ನು ನಿರ್ಲಕ್ಷಿಸಿರುವ, ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಬುದ್ಧಿ ಹೇಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

      ಐತಿಹಾಸಿಕ ಸ್ಥಳ ವಿಧಾನಸೌಧದಲ್ಲಿ ನಾಯಿಗಳ ರೀತಿಯಲ್ಲಿ ಕಿತ್ತಾಡಿಕೊಂಡು ಕರ್ನಾಟಕವನ್ನು ಇಡೀ ದೇಶವೇ ನೋಡುವಂತಾಗಿದೆ. ಮೂರು ಪಕ್ಷಗಳ ಶಾಸಕರುಗಳಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ರೆಸಾರ್ಟ್‍ಗಳನ್ನು ತೊರೆದು ಕ್ಷೇತ್ರಗಳ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದರು. ರಾಜೀನಾಮೆ ಕೊಟ್ಟಿರುವ ಶಾಸಕರುಗಳ ಭಾವಚಿತ್ರವಿರುವ ಫ್ಲೆಕ್ಸ್‍ಗಳಿಗೆ ಚಪ್ಪಲಿಯಿಂದ ಹೊಡೆದು ಪೆಟ್ರೋಲ್ ಹಾಕಿ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಧನಂಜಯ ಆರಾಧ್ಯ, ದೇವರಾಜು, ಅನಿಲ್‍ಕುಮಾರ್, ಸಿದ್ದರಾಜು, ಲೋಕೇಶ್ ಬಂಡಿಮನೆ, ರಾಜಣ್ಣ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

(Visited 9 times, 1 visits today)