ತುಮಕೂರು:

      ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್ ರಸ್ತೆ ಯೋಜನೆ ಪೂರ್ಣಗೊಂಡ ಬಳಿಕ ರಸ್ತೆ ಅಗೆಯುವ ಯಾವುದೇ ಕಾಮಗಾರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ತಿಳಿಸಿದರು.

      ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ಮಾರ್ಟ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಬಹುದಾದ ಕುಡಿಯುವ ನೀರು, ವಿದ್ಯುತ್, ಗ್ಯಾಸ್, ಬೀದಿ ದೀಪ, ನೀರಿನ ಸಂಪರ್ಕ, ಬಿಎಸ್‍ಎನ್‍ಎಲ್ ಕೇಬಲ್ ಅಳವಡಿಕೆ, ಯುಜಿಡಿ ಸಂಪರ್ಕ ಸೇರಿದಂತೆ ಮತ್ತಿತರ ರಸ್ತೆ ಅಗೆಯುವ ಕಾಮಗಾರಿಗಳನ್ನು ಪೂರ್ಣಗೊಳಿಸಿರಬೇಕು. ತದ ನಂತರ ಯಾವುದೇ ರಸ್ತೆ ಅಗೆಯುವ ಕಾಮಗಾರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡನಂತರ ಅತ್ಯಾವಶ್ಯಕ ಕಾಮಗಾರಿಗಳಿದ್ದಲ್ಲಿ ಸಂಬಂಧಪಟ್ಟವರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮನ್ವಯ ಸಮಿತಿಯಲ್ಲಿ ಮಂಡಿಸಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ ಅಂತಹ ಇಲಾಖೆಯ ಮುಖ್ಯಸ್ಥರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸೂಚಿಸಿದರು.

      ಪಾಲಿಕೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಿಎಸ್‍ಎನ್‍ಎಲ್, ಮತ್ತಿತರ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ತ್ವರಿತಗತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಅನುಷ್ಟಾನಕ್ಕೆ ಕೈಜೋಡಿಸಬೇಕು. ವರ್ತುಲ ರಸ್ತೆಯು ತುಮಕೂರು ನಗರಕ್ಕೆ ಅತಿ ಮುಖ್ಯ ಯೋಜನೆಯಾದ ಕಾರಣ ಲೈನ್ ಕ್ಲಿಯರೆನ್ಸ್ ತೆಗೆದುಕೊಂಡು ವರ್ತುಲ ರಸ್ತೆಯಲ್ಲಿರುವ ಬೆಸ್ಕಾಂ ಕಂಬಗಳನ್ನು ಹಾಗೂ ವಿದ್ಯುತ್ ಉಪಯುಕ್ತತೆಗಳನ್ನು ಸ್ಥಳಾಂತರಿಸಬೇಕೆಂದು ಬೆಸ್ಕಾಂ ಇಲಾಖೆಗೆ ಸೂಚಿಸಿದರು.

      ರಿಂಗ್ ರಸ್ತೆ ಪೇವ್‍ಮೆಂಟ್ ವ್ಯಾಪ್ತಿಯಲ್ಲಿ ಅಳವಡಿಸಿರುವ ಒಳಚರಂಡಿ ಯೋಜನೆಯ ಮ್ಯಾನ್‍ಹೋಲ್ ಹಾಗೂ ಕೊಳವೆ ಮಾರ್ಗವನ್ನು ಸ್ಥಳಾಂತರಿಸಬೇಕು ಎಂದು ಬೆಸ್ಕಾಂ ಹಾಗೂ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಕುಣಿಗಲ್ ಹಾಗೂ ಗುಬ್ಬಿ ರಸ್ತೆಯ ಕೆಲವು ಕಡೆ ಸ್ಥಳದ ವಿವಾದಗಳಿರುವ ಕಾರಣ, ಮತ್ತೊಮ್ಮೆ ಸರ್ವೆ ನಡೆಸಬೇಕು.

      ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು 15 ದಿನದೊಳಗೆ ಸರ್ವೆ ಮಾಡಿ, ಗಡಿ ಗುರುತು ಮಾಡಿಸಿ, ಕಲ್ಲುಗಳನ್ನು ನೆಡೆಸಿ ಕ್ರಮವಹಿಸಬೇಕೆಂದರಲ್ಲದೆ ಸರ್ವೆ ನಡೆಸಿದ ನಂತರ ಒತ್ತುವರಿಗಳಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕೆಂದು ಪಾಲಿಕೆ ಅಧಿಕಾರಿ ಹಾಗೂ ಸ್ಮಾರ್ಟ್ ಸಿಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಸೂಚನೆ ನೀಡಿದರು.

      ವರ್ತುಲ ರಸ್ತೆಯ ಮೇಲೆ ಹಾದುಹೋಗಿರುವ ಹೈಟೆನ್ಷನ್ ಕೇಬಲ್‍ಗಳನ್ನು ಕೆಪಿಟಿಸಿಎಲ್‍ನ ಎಂಪ್ಯಾನೆಲ್ಡ್ ಸರ್ವೇಯರ್‍ಗಳಿಂದ ಸರ್ವೆ ಮಾಡಿಸಿ ಸ್ಥಳಾಂತರಿಸಬೇಕೆಂದು ಕೆಪಿಟಿಸಿಎಲ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

      ರಿಂಗ್ ರಸ್ತೆ ಕಾಮಗಾರಿ ಪೂರ್ಣವಾದ ನಂತರ ಯಾವುದೇ ಇಲಾಖೆಯು ರಸ್ತೆಯನ್ನು ಅಗೆಯುವ ಕಾರ್ಯ ಕೈಗೊಂಡಲ್ಲಿ ಅಂತಹ ಇಲಾಖೆಗಳ ಮೇಲೆ ಸಾರ್ವಜನಿಕ ಹಣವನ್ನು ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ ಎಂದು ಪರಿಗಣಿಸಿ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದರು. ರಿಂಗ್ ರಸ್ತೆ ಕಾಮಗಾರಿಯನ್ನು ಮಾಡುತ್ತಿರುವ ಗುತ್ತಿಗೆದಾರರು ಕಾಮಗಾರಿ ಸಂದರ್ಭದಲ್ಲಿ ಹಾಳಾಗುವ ಮ್ಯಾನ್‍ಹೋಲ್‍ಗಳನ್ನು ರಿಂಗ್ ರಸ್ತೆ ಗುತ್ತಿಗೆದಾರರೇ ದುರಸ್ತಿ ಅಥವಾ ನೂತನವಾಗಿ ನಿರ್ಮಿಸಿಕೊಡಬೇಕೆಂದು ಸೂಚಿಸಿದರು.

      ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಹಿನ್ನಲೆಯಲ್ಲಿ ನಗರದ ವರ್ತುಲ ರಸ್ತೆ ಮತ್ತು ರಾಧಾಕೃಷ್ಣ ರಸ್ತೆಯಲ್ಲಿರುವ ಮರಗಳನ್ನು ಸ್ಥಳಾಂತರಿಸಲು/ತೆರವುಗೊಳಿಸಲು ಅರಣ್ಯ ಇಲಾಖೆಯು ಕೂಡಲೇ ಅನುಮತಿ ನೀಡಬೇಕು. ರಸ್ತೆ ಕಾಮಗಾರಿಯಲ್ಲಿ ಗ್ಯಾಸ್ ಪೈಪ್‍ಲೈನ್ ಅಳವಡಿಸುವವರು ಭಾರತ ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು.

      ಸ್ಮಾರ್ಟ್ ಸಿಟಿಯ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಹಾಗೂ ಯಾವುದೇ ಅನಾಹುತಗಳು ನಡೆದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರೇ ಸಂಪೂರ್ಣ ಜವಾಬ್ದಾರಿಯಾಗಿರುತ್ತಾರೆ ಎಂದು ಹೇಳಿದರು.

      ಭಾರತ ಸಂಚಾರ ನಿಗಮದ ಕೇಬಲ್‍ಗಳ ನಿಖರ ಮಾಹಿತಿ ನಿಗಮದ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿದಿಲ್ಲದಿರುವುದರಿಂದ ಸ್ಮಾರ್ಟ್ ರಸ್ತೆ ಕಾಮಗಾರಿಗಳು ನಿಧಾನವಾಗುತ್ತಿದೆ. ಈ ನಿಟ್ಟಿನಲ್ಲಿ ನಿಗಮದ ಅಧಿಕಾರಿಗಳು ಕೇಬಲ್‍ಗಳ ನಿಖರವಾದ ಮಾಹಿತಿಯನ್ನು ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ನೀಡಬೇಕು. ಸ್ಮಾರ್ಟ್ ರಸ್ತೆಯ ಪ್ರಗತಿ ಕಾರ್ಯದಲ್ಲಿ ಬಿಎಸ್‍ಎನ್‍ಎಲ್ ಕೇಬಲ್‍ಗಳು ಹಾಳಾದರೆ ಸ್ಮಾರ್ಟ್‍ಸಿಟಿ ಹೊಣೆಗಾರಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

      ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಭೂಬಾಲನ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ: ಶೋಭಾರಾಣಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 24 times, 1 visits today)