ತುರುವೇಕೆರೆ :
ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಹಿಂದೇಟು ಹಾಕುವ ಹಾಗೂ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವವರಿಗೆ ಸಿಂಹಸ್ವಪ್ನದಂತಿರಬೇಕಾದ ಭ್ರಷ್ಠಾಚಾರ ನಿಗ್ರಹ ದಳದ ಪತ್ರಕ್ಕೆ ತಾಲೂಕಿನ ಹಲವಾರು ಸರ್ಕಾರಿ ಕಛೇರಿಗಳು ಕವಡೆ ಕಿಮ್ಮತ್ತನ್ನೂ ನೀಡುತ್ತಿಲ್ಲ ಎಂಬ ಸಂಗತಿ ಇಂದು ಬಾಣಸಂದ್ರದಲ್ಲಿ ನಡೆದ ಎಸಿಬಿ ಸಾರ್ವಜನಿಕರ ಸಭೆಯ ವೇಳೆ ಪ್ರಸ್ತಾಪವಾಯಿತು.
ತಾಲೂಕಿನ ಎಂ.ಮಂಚೇನಹಳ್ಳಿಯ ಕೃಷ್ಣಮೂರ್ತಿ ಎಂಬುವವರು ಕಳೆದ 28-11- 18 ರಂದು ಎಸಿಬಿ ಗೆ ತುರುವೇಕೆರೆ ತಾಲೂಕು ಕಛೇರಿಯಲ್ಲಿ ಕಾನೂನು ಬಾಹಿರವಾಗಿ ಖಾತೆ ಬದಲಾವಣೆ ಮಾಡಲಾಗಿದೆ. ಈ ಕುರಿತು ಸಾಕಷ್ಟು ಬಾರಿ ಮನವಿ ಹಾಗೂ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ತೊಂದರೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ಸಂಬಂಧ ತಾಲೂಕು ಕಛೇರಿಗೆ ಅಂದೇ ಜಿಲ್ಲಾ ಭ್ರಷ್ಠಾಚಾರ ನಿಗ್ರಹ ದಳದ ಅಧಿಕಾರಿಗಳು ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿ ದೂರುದಾರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದೂ ಹಾಗೂ ಆ ಕುರಿತಂತೆ ದೂರುದಾರರಿಗೆ ಮತ್ತು ತಮಗೆ ಇನ್ನು 15 ದಿನಗಳೊಳೆಗೆ ತಮಗೂ ಮತ್ತು ದೂರುದಾರರಿಗೂ ಸೂಕ್ತ ಉತ್ತರವನ್ನು ಲಿಖಿತವಾಗಿ ನೀಡಬೇಕೆಂದು ಆದೇಶಿಸಿತ್ತು.
ಆದರೆ ಏಳೆಂಟು ತಿಂಗಳು ಕಳೆದರೂ ಸಹ ತಮಗೂ ಮತ್ತು ಎಸಿಬಿ ಗೂ ಯಾವುದೇ ಉತ್ತರ ಬಂದಿಲ್ಲ ಎಂದು ದೂರುದಾರ ಕೃಷ್ಣಮೂರ್ತಿ ಎಸಿಬಿ ಇನ್ಸ್ ಪೆಕ್ಟರ್ ರಮೇಶ್ ರವರಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ರಮೇಶ್, ಸಾರ್ವಜನಿಕರಿಗೆ ಸರ್ಕಾರಿ ನೌಕರರಿಂದ ಆಗುತ್ತಿರುವ ಕಿರುಕುಳ, ಲಂಚಕ್ಕೆ ಆಗ್ರಹ, ಆದಾಯಕ್ಕಿಂತ ಹೆಚ್ಚಿಗೆ ಹಣ ಇದ್ದು ಅಕ್ರಮವಾಗಿ ಸಂಪಾದಿಸಿ ಆಸ್ತಿ ಪಾಸ್ತಿ ಮಾಡಿದಲ್ಲಿ ಅದನ್ನು ಪತ್ತೆಹಚ್ಚಿ ಶಿಕ್ಷಿಸುವುದು ಎಸಿಬಿ ಯ ಮುಖ್ಯ ಉದ್ದೇಶವಾಗಿದೆ.
ಸಾರ್ವಜನಿಕರಿಗೆ ಭ್ರಷ್ಠಾಚಾರ ನಿಯಂತ್ರಣ ಮಾಡುವ ಕುರಿತು ಜಾಗೃತಿಗೊಳಿಸುವುದು ಇದರ ಉದ್ದೇಶವಾಗಿದೆ. ಸಭೆಗೆ ಬರುವ ಜನರು ಹೊತ್ತು ತರುವ ಸಮಸ್ಯೆಗಳನ್ನು ಮಾನವೀಯ ದೃಷ್ಠಿಯಿಂದ ತಮ್ಮ ವ್ಯಾಪ್ತಿಗೆ ಬಾರದಿದ್ದರೂ ಸಹ ಸಂಬಂಧಿಸಿದ ಸರ್ಕಾರಿ ಕಛೇರಿಗಳಿಗೆ ವರ್ಗಾಯಿಸಿ ಕೂಡಲೇ ಕ್ರಮ ಕೈಗೊಳ್ಳಿ ಎಂದು ಆದೇಶಿಸುವುದು ಸಾಮಾನ್ಯವಾಗಿದೆ ಎಂದು ರಮೇಶ್ ತಿಳಿಸಿದರು.
ನಿಮಗೇ ಹೀಗಾದರೆ ಎಸಿಬಿ ಅಧಿಕಾರಿಗಳಿಗೇ ಸರ್ಕಾರಿ ಕಛೇರಿಯ ಸಿಬ್ಬಂದಿ ಸೂಕ್ತ ಉತ್ತರ ನೀಡಿಲ್ಲವೆಂದರೆ ಜನಸಾಮಾನ್ಯರ ಗತಿ ಏನು ಎಂದು ಕೃಷ್ಣಮೂರ್ತಿ ಎಸಿಬಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಸರ್ಕಾರಿ ಅಧಿಕಾರಿಗಳಿಗೆ ಯಾರ ಭಯವೂ ಇಲ್ಲದಾಗಿದೆ. ಇದರಿಂದಾಗಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಇಲ್ಲದ ಬೇಡಿಕೆಗಳನ್ನು ಇಡುತ್ತಾರೆ. ಬೇಡಿಕೆ ಪೂರೈಸದಿದ್ದಲ್ಲಿ ವಿನಾಕಾರಣ ಕಿರುಕುಳ ನೀಡುತ್ತಾರೆ ಎಂದು ಕೃಷ್ಣಮೂರ್ತಿ ಎಸಿಬಿ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ಕೃಷ್ಣಮೂರ್ತಿಯವರ ಮನವಿಯ ಮೇರೆಗೆ ಮತ್ತೊಮ್ಮೆ ತಾಲೂಕು ಕಛೇರಿಗೆ ಪತ್ರ ಬರೆದು ದೂರುದಾರರಿಗೆ ಸೂಕ್ತ ಉತ್ತರ ನೀಡಬೇಕೆಂಬ ಆಗ್ರಹಾಪೂರ್ವ ಪತ್ರ ಬರೆಯುವುದಾಗಿ ರಮೇಶ್ ತಿಳಿಸಿದರು.
ಬಾಣಸಂದ್ರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಮೂರು ದೂರುಗಳು ಸಲ್ಲಿಕೆಯಾದವು. ಎಲ್ಲವೂ ತಾಲೂಕು ಕಛೇರಿಗೆ ಸಂಬಂಧಿಸಿದ ದೂರುಗಳೇ ಆಗಿದ್ದು ವಿಶೇಷವಾಗಿತ್ತು.
ಸಭೆಯಲ್ಲಿ ಇಓ ಜಯಕುಮಾರ್, ಪಿಡಿಓ ಜ್ಯೋತಿ, ಕಾರ್ಯದರ್ಶಿ ಮಂಜುಳಾ, ತಾಲೂಕಿನ ಹಲವು ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.