ತುಮಕೂರು :
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನಿಗಮಗಳ ವತಿಯಿಂದ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗಕ್ಕೆ ಸಹಾಯಧನ ಮತ್ತಿತರ ಸೌಲಭ್ಯಗಳನ್ನು ಅರ್ಹತೆಗನುಗುಣವಾಗಿ ನೀಡುವಂತೆ ಒತ್ತಾಯಿಸಿ ಹಾಗೂ ದಲಿತ ಮೇಲಿನ ಹಲ್ಲೆ, ದೌರ್ಜನ್ಯವನ್ನು ಖಂಡಿಸಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಳವಾಗಿದ್ದು ಸರ್ಕಾರ ಈ ದೌರ್ಜನ್ಯ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ನೀಡುವಲ್ಲಿ ವಿಫಲವಾಗಿದೆ. ತುಮಕೂರು ಜಿಲ್ಲೆಯ ಮಲ್ಲೇಕಾವು ಗ್ರಾಮದಲ್ಲಿ ದಲಿತರು ದೇವಾಲಯಕ್ಕೆ ಪ್ರವೇಶ ಮಾಡಿದರೆಂದು ಜಗದೀಶ್ ಎಂಬುವರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಆದರೂ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಲಿತರ ಮೇಲೆ ಹಲ್ಲೆ, ಅಸ್ಪೃಶ್ಯತಾ ಆಚರಣೆ ಜಾರಿಯಲ್ಲಿದ್ದು ಸರ್ಕಾರ ಇದನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಸರ್ಕಾರವು ದಲಿತರ ವಿಶೇಷ ಸಭೆ ಕರೆದು ಮುಂದೆ ಬರುವ ಅಧಿವೇಶನದಲ್ಲಿ ಚರ್ಚೆ ಮಾಡಿ ದೌರ್ಜನ್ಯ ನಡೆಯದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಎಸ್ಇಪಿ/ಟಿಎಸ್ಪಿ ಅನುದಾನವನ್ನು ದಲಿತರ ಅಭಿವೃದ್ಧಿಗಾಗಿ ಸಮರ್ಪಕವಾಗಿ ಬಳಸಬೇಕು. ಅರ್ಜಿ ಸಲ್ಲಿಸಿದ ಎಲ್ಲಾ ಬಡವರಿಗೂ ಗಂಗಾ ಕಲ್ಯಾಣ ಯೋಜನೆ, ಭೂಒಡೆತನ ಸ್ವಾಧೀನ, ಸ್ವಯಂ ಉದ್ಯೋಗ ಈ ರೀತಿ ಯೋಜನೆಗಳು ದಲಿತರ ಅಭಿವೃದ್ದಿಗಾಗಿ ಇದ್ದು ಅರ್ಹ ಫಲಾನುಭವಿಗಳಿಗೆ ನಿಗಮ ಮಂಡಳಿಗಳ ಮೂಲಕ ಸಮರ್ಪ ಸೌಲಭ್ಯ ವಿತರಣೆ ಮಾಡಬೇಕು ಎಂದರು.
ನಿಗಮ ಮಂಡಳಿಗಳು ಇತ್ತೀಚಿನ ದಿನಗಳಲ್ಲಿ ಅರ್ಹರಿಗೆ ಸೌಲಭ್ಯ ನೀಡುವ ಬದಲಾಗಿ, ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗೆ ದಲ್ಲಾಳಿಗಳಿಗೆ, ಮಧ್ಯವರ್ತಿಗಳಿಗೆ ಹಣದ ಆಮಿಷಗಳ ಮೂಲಕ ಈ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದನ್ನು ತಡೆಗಟ್ಟಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸಬೇಕಾಗಿದೆ ಎಂದು ಹೇಳಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ, ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ದಲಿತರಿಗೆ ತಲುಪಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಹಲ್ಲೆ ಮತ್ತು ದೌರ್ಜನ್ಯಗಳು ನಿರಂತರವಾಗಿ ಮುಂದುವರಿದಿವೆ. ಮೀಸಲಾತಿ ಮೂಲಕ ಗೆದ್ದ ಜನಪ್ರತಿನಿಧಿಗಳು ಸಹ ದಲಿತರ ಬಗ್ಗೆ ಕಾಳಿಜಿ ಹೊಂದಿಲ್ಲ. ಆದ್ದರಿಂದ ಹೋರಾಟದ ಮೂಲಕ ದೌರ್ಜನ್ಯವನ್ನು ಹಿಮ್ಮೆಟ್ಟಿಸಬೇಕು ಮತ್ತು ನಿಗಮ ಮಂಡಳಿಗಳ ಮೂಲಕ ದಲಿತರ ಅಭಿವೃದ್ಧಿಗಾಗಿ ಇರುವ ಸೌಲಭ್ಯಗಳನ್ನು ಹೋರಾಟದ ಮೂಲಕ ಪಡೆಯಬೇಕು ಎಂದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಎಸ್.ರಾಘವೇಂದ್ರ ಮಾತನಾಡಿ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾಋಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ದಾಳಿ ಮತ್ತು ದಬ್ಬಾಳಿಕೆಗಳು ಹೆಚ್ಚಳವಾಗಿವೆ. ದೇಶದ ಅಭಿವೃದ್ಧಿಗಿಂತ ಮುಖ್ಯವಾಗಿ ಧಾರ್ಮಿಕತೆಯ ಹೆಸರಿನಲ್ಲಿ ಕೋಮುವಾದವನ್ನು ಪ್ರಬಲವಾಗಿ ಬೆಳೆಸಲಾಗುತ್ತಿದೆ. ಆದ್ದರಿಂದ ಹೆಚ್ಚು ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕು. ಎಲ್ಲಾ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆ, ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಸಹ ಸಂಚಾಲಕ ಬಿ.ಉಮೇಶ್ ಮಾತನಾಡಿ, ರೈತರು ಹಾಗೂ ದಲಿತರ ಸಮಸ್ಯೆಗಳು ಒಂದೇ ರೀತಿಯವಾದರೂ ದಲಿತರ ಸಮಸ್ಯೆಗಳು ಜಾತಿ ಆಧಾರದ ಮೇಲೆ ಪರಿಗಣಿಸುವುದು ತಪ್ಪು. ಅವರು ಸಹ ಸಮಾಜದ ಒಂದು ಭಾಗವಾಗಿದ್ದು ಸಮಾನತೆಯಿಂದ ಕಾಣುವುದು ಪ್ರತಿಯೊಬ್ಬ ಕರ್ತವ್ಯವಾಗಿದೆ. ಅವರಿಗೂ ಬದುಕುವ ಹಕ್ಕು ಇದ್ದು ಮೇಲುಕೀಳು ಎನ್ನದೆ ಸಮಾನವಾಗಿ ನೋಡಬೇಕು ಎಂದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ದಲಿತರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ದಲಿತ ಹಕ್ಕುಗಳ ಸಮಿತಿಯು ದೇಶಾಧ್ಯಂತ ನಿರಂತರ ಪ್ರಯತ್ನಪಡುತ್ತಿದ್ದು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಹೋರಾಟವೊಂದೇ ಮಾರ್ಗವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಂಚಾಲಕರಾದ ರಾಜಣ್ಣ, ಜಗದೀಶ್, ರಾಜು ವೆಂಕಟಪ್ಪ, ನಾಗಣ್ಣ, ಸುರೇಶ, ಎಸ್.ಡಿ.ಪಾರ್ವತಮ್ಮ, ಮಮತ
ಮದಲೇಟಪ್ಪ, ನರಸಿಂಹಮೂರ್ತಿ ಮೊದಲಾದವರು ಅಪರ ಜಿಲ್ಲಾಧಿಕಾರಿ ಸಹಾಯಕರಿಗೆ ಮನವಿ ಪತ್ರ ಸಲ್ಲಿಸಿ ದಲಿತರ ಕುಂದುಕೊರತೆಯ ವಿಶೇಷ ಸಭೆ ಕರೆಯುವಂತೆ ಮನವಿ ಮಾಡಿದರು.