ಗುಬ್ಬಿ :
ತಾಲ್ಲೂಕಿನ ಎಸ್.ಕೊಡಗೀಹಳ್ಳಿ ಗ್ರಾಮದ ಶ್ರೀನಿವಾಸ ಪ್ರೌಢಶಾಲೆಯ 39 ವಿದ್ಯಾರ್ಥಿಗಳು ಹೊಟ್ಟೆನೋವು ಮತ್ತು ವಾಂತಿಯಿಂದ ಅಸ್ವಸ್ಥರಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಗಿತ್ತು. ಅದನ್ನು ನುಂಗಿದ ಕಾರಣ ನಮ್ಮ ಮಕ್ಕಳಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ ಎಂದು ಮಕ್ಕಳ ಪೋಷಕರು ತಿಳಿಸಿದ್ದಾರೆ. ಮಾತ್ರೆ ಸೇವಿಸಿದ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ಬಂದಾಗಲೆ ಹೊಟ್ಟೆನೋವು ಮತ್ತು ವಾಂತಿಯಿಂದ ಬಳಲುತ್ತಿದ್ದರು. ಕೂಡಲೆ ಪೋಷಕರು ಸಮೀಪದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಬೆಳಗ್ಗೆ ಶಾಲೆಗೆ ಬಂದಾಗ ಮತ್ತಷ್ಟು ವಿದ್ಯಾರ್ಥಿಗಳು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಕೂಡಲೆ ಆಂಬ್ಯುಲೆನ್ಸ್ ವಾಹನಗಳಲ್ಲಿ ತಾಲ್ಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ತ್ವರಿತವಾಗಿ ಚಿಕಿತ್ಸೆ ನೀಡಿದ ಕಾರಣ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಯಾಗದೆ ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆಂದು ತಾಲ್ಲೂಕು ವೈದ್ಯಾಧಿಕಾರಿ ಡಾ:ಬಿಂದೂಮಾದವ್ ತಿಳಿಸಿದ್ದಾರೆ.
ಸ್ಥಳಕ್ಕೆ ತಹಸೀಲ್ದಾರ್ ಎಂ.ಮಮತಾ ಭೇಟಿ ನೀಡಿ ಮಕ್ಕಳ ಆರೋಗ್ಯ ಪರಿಶೀಲಿಸಿದ ನಂತರ ಮಾತನಾಡಿ, ಯಾವ ಕಾರಣಕ್ಕೆ ಹೀಗೆ ಆಗಿದೆ ಎಂದು ಶಿಕ್ಷಕರನ್ನು ವಿಚಾರಣೆ ಮಾಡಿದರು. ಬೆಳಗ್ಗೆ ವಿದ್ಯಾರ್ಥಿಗಳಿಗೆ ಹಾಲು ನೀಡಲಾಗಿದೆ. ಮಂಗಳವಾರ ಕಬ್ಬಿಣಾಂಶದ ಮಾತ್ರೆ ನೀಡಲಾಗಿದೆ ಎಂಬ ಮಾಹಿತಿ ನೀಡಿದರು. ನಂತರ ಹಾಲಿನ ಪೌಡರ್ ಕುಡಿಯುವ ನೀರು ಹಾಗೂ ಮಾತ್ರೆಯನ್ನು ಪರೀಕ್ಷೆಗೆ ಒಳಪಡಿಸುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದರು.
ಇನ್ನೂ ಹೂಟ್ಟೆ ನೋವು ಹೆಚ್ಚಾದ ಕಾರಣ ಮತ್ತೆ ವಿದ್ಯಾರ್ಥಿಗಳನ್ನು ಗುಬ್ಬಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಒಟ್ಟು 67 ವಿದ್ಯಾರ್ಥಿಗಳು ಇದೂವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಎಲ್ಲರೂ ಸಹ ಸುರಕ್ಷತೆಯಿಂದ ಚಿಕಿತ್ಸೆ ಪಡೆದು ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ:ಬಿಂಧು ಮಾಧವ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಶಾಲೆಯಲ್ಲಿಯೆ ಇದ್ದು ವಿದ್ಯಾರ್ಥಿಗಳ ಮೇಲೆ ತೀವ್ರ ನಿಗಾ ಇಟ್ಟಿದ್ದರು. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಗುಬ್ಬಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಸಂಜೆಯ ವೇಳೆಗೆ ಮಕ್ಕಳು ತಮ್ಮ ಊರಿನ ಕಡೆ ತೆರಳಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಕ್ಷೇತ್ರಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗಾನಂದ್ ಅಸ್ವಸ್ಥರಾದ ವಿದ್ಯಾರ್ಥಿಗಳ ಆರೋಗ್ಯ ಪರಿಶೀಲಿಸಿ ತ್ವರಿತವಾಗಿ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಅಲ್ಲದೆ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಯಾಗಲು ಕಾರಣವೇನು ಎಂಬುದರ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಾಲೆಗೆ ಹೋದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ವಿಷಯ ತಿಳಿದ ಮಕ್ಕಳ ಪೋಷಕರು ಆಸ್ಪತ್ರೆಗೆ ಧಾವಿಸಿ ಬಂದು ಆರೋಗ್ಯ ವಿಚಾರಿಸಿದರು.