ಹುಳಿಯಾರು:

      ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡ್ಮೂರು ದಶಕಗಳಿಂದಲೂ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಮ್ಮನ್ನು ತೆರವು ಗೊಳಿಸಿ 15 ದಿನವಾಗಿದ್ದು ಜೀವನ ನಿರ್ವಹಣೆ ಕಷ್ಟವಾಗಿದ್ದು ಅತಂತ್ರ ಸ್ಥಿತಿಯಲ್ಲಿರುವ ನಮಗೆ ಪರ್ಯಾಯ ಜಾಗ ಕಲ್ಪಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಬಸ್ ನಿಲ್ದಾಣದ ಫುಟ್‍ಪಾತ್ ವ್ಯಾಪಾರಿಗಳು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

      ಕಳೆದ ವಾರದಿಂದಲೂ ತುಮಕೂರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬರುತ್ತಿದ್ದ ಫುಟ್ಪಾತ್ ವ್ಯಾಪಾರಿಗಳಿಗೆ ತಾವೇ ಖುದ್ದಾಗಿ ಹುಳಿಯಾರಿನ ಸ್ಥಳಕ್ಕೆ ಬಂದು ಪರಿಶೀಲಿಸುವ ಆಶ್ವಾಸನೆ ನೀಡಿದ್ದ ಹಿನ್ನೆಲೆಯಲ್ಲಿ ಡಾ. ಕೆ.ರಾಕೇಶ್ ಕುಮಾರ್ ಇಂದು ಹುಳಿಯಾರು ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿ ಫುಟ್ಪಾತ್ ವ್ಯಾಪಾರಿಗಳ ಅಹವಾಲು ಆಲಿಸಿದರು.

      ತಮ್ಮ ಸಮಸ್ಯೆ ಬಗ್ಗೆ ಕಣ್ಣೀರಿಟ್ಟ ಫುಟ್ಪಾತ್ ವ್ಯಾಪಾರಿಗಳು ಭಾವೋದ್ವೇಗದಿಂದ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದ ಘಟನೆ ಕೂಡ ಜರಗಿತು. ನೂರಕ್ಕೂ ಹೆಚ್ಚು ಸೇರಿದ್ದ ವ್ಯಾಪಾರಿಗಳ ಮನವಿ ಆಲಿಸಿದ ಜಿಲ್ಲಾಧಿಕಾರಿಗಳು ಪರ್ಯಾಯ ಸ್ಥಳ ಕಲ್ಪಿಸುವ ಬಗ್ಗೆ ಆಲೋಚಿಸುವುದಾಗಿ ತಿಳಿಸಿದರು. ಪಟ್ಟಣದ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣಕ್ಕೆ ಸನಿಹ ಇರುವ ಜಾಗವನ್ನು ಗುರುತಿಸಿ ವರದಿ ಕಳುಹಿಸಿದಲ್ಲಿ ತಾವು ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಸರಿಯಿದ್ದಲ್ಲಿ ಅನುಮೋದನೆ ಕೊಡುವುದಾಗಿ ಹೇಳಿದರು.

      ಅಧಿಕಾರಿಗಳು ಹಾಗೂ ವ್ಯಾಪಾರಸ್ಥರೊಂದಿಗೆ ಕೆರೆಯಂಗಳದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದಲ್ಲಿ ಬಸ್ ಶೆಲ್ಟರ್ ಕೆಳಗಿನ ಜಾಗವನ್ನು ಅವಲೋಕಿಸಿದ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಈ ಸ್ಥಳವನ್ನು ಮತ್ತೆ ವ್ಯಾಪಾರಗಳಿಗೆ ವ್ಯಾಪಾರ ಮಾಡಿಕೊಡಲು ಅನುವು ಮಾಡಕೂಡದು ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗೆ ಸೂಚಿಸಿದರು.

      ಕೆರೆ ಅಂಗಳದಲ್ಲಿ ಈ ಹಿಂದೆ ಎರಡು ಮೂರು ಬಾರಿ ಗ್ರಾಮ ಪಂಚಾಯಿತಿ ವತಿಯಿಂದ ಹೂವು, ಹಣ್ಣು ಮಾರಾಟಗಾರರಿಗೆ ಜಾಗ ತೋರಿಸಲಾಗಿತ್ತು. ಅದೇ ಜಾಗವನ್ನು ಇದೀಗ ಕೊಡಿಸಿಕೊಟ್ಟಲ್ಲಿ ಅನುಕೂಲವಾಗುವುದು ಎಂದು ವ್ಯಾಪಾರಿಗಳ ಪರವಾಗಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದರ ಮೇರೆಗೆ ಕೆರೆ ಅಂಗಳದ ಜಾಗವನ್ನು ಪರಿಶೀಲಿಸಿದರು.

       ನಾಳೆಯೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಕೆರೆಯ ಗಡಿ ಪ್ರದೇಶವನ್ನು ಗುರುತಿಸಿ ಕಲ್ಲು ಹಾಕಿಸಿ ಎಂದ ಜಿಲ್ಲಾಧಿಕಾರಿ ತದ ನಂತರ ಅದರ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಪರ್ಯಾಯಾ ವ್ಯವಸ್ಥೆ ಕಲ್ಪಿಸುವವರೆಗೂ ಯಾರು ಅಂಗಡಿ ಇಡುವುದು ಬೇಡ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಫುಟ್ಪಾತ್ ವ್ಯಾಪಾರಿಗಳಿಗೆ ಎಲ್ಲಾದರೂ ಸರಿ ಸೂಕ್ತ ಸ್ಥಳ ಕೊಡಿಸಿಕೊಡುವುದಾಗಿ ಭರವಸೆ ನೀಡಿದರು.

      ಈ ವೇಳೆ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಮಂಜುನಾಥ್, ಜುನೇದ್ ಶಿರಾದ್, ಫುಟ್ಪಾತ್ ಸಂಘದ ಅಧ್ಯಕ್ಷ ಹೂವಿನ ಬಸವರಾಜು, ಪಟ್ಟಣ ಪಂಚಾಯಿತಿ ಸದಸ್ಯ ರಾಘವೇಂದ್ರ, ಕೋಳಿ ಶ್ರೀನಿವಾಸ್, ಗೀತಾಬಾಬು, ಪ್ರಸನ್ನ ಕುಮಾರ್, ಉಮೇಶ್, ಬಾಳೆಕಾಯಿ ಲಕ್ಷ್ಮಿಕಾಂತ, ಇಮ್ರಾಜ್, ಹೂವಿನ ರಘು, ಚನ್ನಕೇಶವ, ಮೋಹನ್ ಕುಮಾರ್, ಹೂವಿನ ಶಾರದಮ್ಮ ಮೊದಲಾದವರಿದ್ದರು.

(Visited 13 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp