ತುಮಕೂರು:
ಬಿಜೆಪಿ ಸರ್ಕಾರ ರಚನೆ ಹಾಗೂ ಡಿಸಿಸಿ ಬ್ಯಾಂಕ್ ಸೂಪರ್‍ಸೀಡ್‍ಗೆ ತಡೆಯಾಜ್ಞೆ ಹೊರಬಂದ ಹಿನ್ನೆಲೆಯಲ್ಲಿ ಕೆ.ಎನ್.ರಾಜಣ್ಣ ಅಭಿಮಾನಿಗಳು ನಗರದ ಟೌನ್‍ಹಾಲ್‍ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಮಾತನಾಡಿದ ಊರುಕೆರೆ ವಿಎಸ್‍ಎಸ್‍ಎನ್ ಅಧ್ಯಕ್ಷ ಷಣ್ಮುಖ ಅವರು, ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಾಕಷ್ಟು ಶ್ರಮಿಸಿದ್ದಾರೆ, ಬ್ಯಾಂಕ್‍ನಿಂದ ಎಲ್ಲ ವರ್ಗದ ಜನರಿಗೂ ಅನುಕೂಲ ಮಾಡಿದ್ದಾರೆ, ಅಂತವರಿಗೆ ಬ್ಯಾಂಕ್ ಸೂಪರ್‍ಸೀಡ್ ಮಾಡುವ ಮೂಲಕ ತೊಂದರೆ ನೀಡಿದರು, ತೊಂದರೆ ನೀಡಿದವರೇ ಇಂದು ಅಧಿಕಾರವನ್ನು ಕಳೆದುಕೊಂಡಿದ್ದಾರೆ, ರಾಜಣ್ಣ ಅವರು ನುಡಿದಂತೆ ಒಂದು ವಾರದೊಳಗೆ ಡಿಸಿಸಿ ಬ್ಯಾಂಕ್‍ನಲ್ಲಿ ಅಧಿಕಾರವನ್ನು ಸ್ಥಾಪಿಸಿದ್ದಾರೆ ಎಂದರು.
ಜಿಲ್ಲೆಯ ಜನರು ಝೀರೋ ಟ್ರಾಫಿಕ್‍ನಿಂದ ಬೇಸತ್ತಿದ್ದರು, ಸರ್ಕಾರ ಬಿದ್ದು ಝೀರೋ ಟ್ರಾಫಿಕ್ ಕಳೆದುಕೊಂಡಿರುವುದರಿಂದ ತುಮಕೂರು ಜಿಲ್ಲೆಗೆ ಒಳಿತಾಗಿದೆ ಎಂದು ಪರೋಕ್ಷವಾಗಿ ಡಾ.ಜಿ.ಪರಮೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ರಾಜಣ್ಣ ಅವರು ಅಗತ್ಯವಾಗಿದ್ದಾರೆ, ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಜಿಲ್ಲೆಗೆ ಸುವರ್ಣ ಯುಗ ಪ್ರಾರಂಭವಾಗಿದ್ದು, ಝೀರೋ ಟ್ರಾಫಿಕ್ ಮುಕ್ತಗೊಂಡಿರುವುದು ಹೆಚ್ಚು ಸಂತಸವನ್ನುಂಟು ಮಾಡಿದೆ ಎಂದರು.
ಬೆಳ್ಳಾವಿ ವಿಎಸ್‍ಎಸ್‍ಎನ್ ಅಧ್ಯಕ್ಷ ಉಮೇಶ್ ಅವರು ಮಾತನಾಡಿ, ಕುಲಗೆಟ್ಟ ಸಮ್ಮಿಶ್ರ ಸರ್ಕಾರ ಬಿದ್ದು, ಝೀರೋ ಟ್ರಾಫಿಕ್ ಮುಕ್ತಗೊಂಡಿರುವುದು ತುಮಕೂರು ಜನರಿಗೆ ನೆಮ್ಮದಿಯನ್ನುಂಟು ಮಾಡಿದ್ದು, ಝೀರೋ ಟ್ರಾಫಿಕ್‍ನಿಂದ ತೊಂದರೆಗೆ ಒಳಗಾಗಿದ್ದ ರೋಗಿಗಳು, ಪೊಲೀಸರು, ಶಾಲಾ ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಉಳಿಯಲು ಕಾರಣವಾಗಿರುವ ಕೆ.ಎನ್.ರಾಜಣ್ಣ ಅವರ ದಕ್ಷ ಆಡಳಿತದಿಂದ ಬ್ಯಾಂಕ್ ಅಭಿವೃದ್ಧಿಯನ್ನು ಕಂಡಿದೆ, ಡಿಸಿಸಿ ಬ್ಯಾಂಕ್ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಬ್ಯಾಂಕಿಂಗ್ ವ್ಯವಹಾರ ಮಾಡುವಲ್ಲಿ ರಾಜಣ್ಣ ಅವರ ಪಾತ್ರ ದೊಡ್ಡದಿದೆ.
ಅಂತಹ ಅಧ್ಯಕ್ಷರನ್ನು ಸೂಪರ್‍ಸೀಡ್ ಮಾಡುವ ಮೂಲಕ ಕೆಟ್ಟ ರಾಜಕಾರಣ ಮಾಡಿದವರ ವಿರುದ್ಧವಾಗಿ ತಡೆಯಾಜ್ಞೆ ಸಿಕ್ಕಿರುವ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸುತ್ತಿರುವುದಾಗಿ ತಿಳಿಸಿದರು.
ವಿಜಯೋತ್ಸವದಲ್ಲಿ ಟಿಎಂಪಿಎಸ್ ನಿರ್ದೇಶಕ ಸುರೇಶ್, ಮುಖಂಡರಾದ ಮಹೇಶ್‍ಬಾಬು, ರಫೀವುಲ್ಲಾ, ಪಂಚಾಕ್ಷರಯ್ಯ, ಡಾ.ನಾಗಾರಾಜು, ಶಬ್ಬೀರ್ ಅಹ್ಮದ್, ಆಟೋ ರಾಜು, ಕೆಂಪಹನುಮಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.