ತುಮಕೂರು :
ಸಾರ್ವಜನಿಕ ವಲಯದ ರೈಲು, ಭದ್ರಾವತಿ ಉಕ್ಕು ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಕಾರ್ಮಿಕರಿಗೆ ಕನಿಷ್ಟ ಕೂಲಿ 24,000 ನಿಗದಿ ಮಾಡುವಂತೆ ಹಾಗೂ ಸ್ಕೀಂ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ತುಮಕರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕಾರ್ಮಿಕ ಕಾನೂನುಗಳನ್ನು ಸಂಹಿತೆಗಳಾಗಿ ಪರಿವರ್ತಿಸುವುದು ಸಾಮಾಜಿಕ, ಸ್ವಭಾವಿಕ ನ್ಯಾಯಕ್ಕೆ ವಿರುದ್ದವಾಗಿದೆ. ದೇಶದ ಜನರ ಶ್ರಮದ ದುಡ್ಡಿನಲ್ಲಿ ಕಟ್ಟಿದ ಸಾರ್ವಜನಿಕ ವಲಯದ ರೈಲ್ವೆ, ಬಿಎಸ್‍ಎನ್‍ಎಲ್, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಕಾರ್ಮಿಕರಿಗೆ ಕಡ್ಡಾಯ ಖಾತ್ರಿ ಪಿಂಚಣಿ ಯೋಜನೆ ರೂಪಿಸಬೇಕು. ಕನಿಷ್ಠ ಪಿಂಚಣಿ ಮಾಸಿಕ 6000 ರೂಪಾಯಿ ನಿಗದಿಗೊಳಿಸಬೇಕು. ಬೀಡಿ, ಗಣಿ, ಸಿನಿಮಾ, ಮತ್ತಿತರೆ ಕಾರ್ಮಿಕರ ಸಂರಕ್ಷಣೆಗೆ ಇದ್ದ ಕಲ್ಯಾಣ ಮಂಡಳಿಯನ್ನು ನಾಶ ಮಾಡಲು ಹೊರಟಿರುವ ಕೇಂದ್ರದ ಕ್ರಮವನ್ನು ಖಂಡನೀಯ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ ಮಾತನಾಡಿ, ಸ್ಕೀಂ ನೌಕರರಾದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರದೆ ಸರ್ಕಾರ ವಂಚಿಸುತ್ತಿದೆ. ಸರ್ಕಾರ ಎಲ್ಲಾ ಶ್ಕೀಂ ನೌಕರರನ್ನು ಖಾಯಂ ಮಾಡುವ ಜೊತೆಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ 1996ರಲ್ಲಿ ಜಾರಿಯಾದ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾಯ್ದೆಗಳನ್ನು ಹೊಸ ಕೋಡ್‍ಗಳಲ್ಲಿ ದುರ್ಬಲಗೊಳಿಸದೆ ಮತ್ತಷ್ಟು ಬಲಯುತಗೊಂಡು ನೋಂದಣಿಯಾಗಿರುವ 4 ಕೋಟಿ ಕಾರ್ಮಿಕರಿಗೆ ರಕ್ಷಣೆ ನೀಡಿ ಸಾಮಾಜಿಕ ಭದ್ರತೆ ಒದಗಿಸಬೇಕು.
ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವಏತನವನ್ನು ನೀಡುತ್ತಿಲ್ಲ. ಅಂತಹ ಅಧಿಕಾರಿಗಳು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಚನ್ನಬಸವಯ್ಯ ಅವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಪಾರ್ವತಮ್ಮ, ಸುಜಿತ್ ನಾಯಕ್, ತುಮಕೂರು ತಾಲೂಕು ಸಿಐಟಿಯು ಕಾರ್ಯದರ್ಶಿ ರಂಗಧಾಮಯ್ಯ, ಸಿರಾ ಬೀಡಿ ಕಾರ್ಮಿಕರ ಸಂಘದ ನಿಸಾರ್ ಅಹಮದ್, ತಿಮ್ಮೇಗೌಡ, ಮಂಜಮ್ಮ, ಗುಬ್ಬಿಯ ಅನಸೂಯ, ಕುಣಿಗಲ್ ಶಾಂತಕುಮಾರಿ, ಬಿ.ಎಸ್.ಅನಸೂಯ, ಎಂಎಚ್‍ಐಎನ್ ರಘು, ಕಾಳೇಶ್ವರಿ ಕಾರ್ಮಿಕ ಸಂಘದ ಮುತ್ತುರಾಜು, ಲಕ್ಷ್ಮೀಕಾಂತ್, ಸಿದ್ದರಾಜ್ ಮೊದಲಾದವರು ಉಪಸ್ಥಿತರಿದ್ದರು.