ತುಮಕೂರು:

      ಅಂಗನವಾಡಿ ಕೇಂದ್ರಗಳಲ್ಲಿ ಕಲ್ಪಿಸಲಾಗುತ್ತಿರುವ ಐ.ಸಿ.ಡಿ.ಎಸ್ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಿದ್ಧಪಡಿಸಲಾಗಿರುವ ಸ್ನೇಹ ತಂತ್ರಾಂಶ(ಮೊಬೈಲ್ ಆ್ಯಪ್)ವನ್ನು ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಬಳಸಲು ತುಮಕೂರನ್ನು ಪೈಲೆಟ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ಸಿ.ಸ್ಟೆಪ್ (ತಂತ್ರಜ್ಞಾನ ಮತ್ತು ನೀತಿ ಸಂಶೋಧನಾ) ಸಂಸ್ಥೆಗಳ ಸಹಯೋಗದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು/ ಅಂಗನವಾಡಿ ಕಾರ್ಯಕರ್ತೆಯರು/ ಮೇಲ್ವಿಚಾರಕರಿಗಾಗಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿಂದು ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿ.ಸ್ಟೆಪ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸ್ನೇಹ ಮೊಬೈಲ್ ತಂತ್ರಾಂಶವನ್ನು ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸುವುದರಿಂದ ಏಕರೂಪದ ಮಾಹಿತಿ ಸಂಗ್ರಹಿಸಲು ಅನುವಾಗುತ್ತದೆ ಎಂದು ತಿಳಿಸಿದರು.

      ಸ್ನೇಹ ತಂತ್ರಾಂಶದ ಪರಿಣಾಮಕಾರಿ ಅಳವಡಿಕೆಗೆ ಜಿಲ್ಲೆಯಲ್ಲಿರುವ 4095 ಅಂಗನವಾಡಿ ಕೇಂದ್ರಗಳ ಎಲ್ಲ ಕಾರ್ಯಕರ್ತೆಯರಿಗೆ ಮೊಬೈಲ್(ಸ್ಮಾರ್ಟ್ ಫೋನ್) ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಶೇ. 25ರಷ್ಟು ಕಾರ್ಯಕರ್ತೆಯರು ಸ್ಮಾರ್ಟ್ ಫೋನ್ ಹೊಂದಿದ್ದು, ಉಳಿದ ಕಾರ್ಯಕರ್ತೆಯರಿಗೆ ಶೀಘ್ರದಲ್ಲೇ ಸ್ಮಾರ್ಟ್ ಫೋನ್‍ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮೊಬೈಲ್ ಮೂಲಕ ನೀಡುವ ತರಬೇತಿಯನ್ನು ಶ್ರದ್ಧೆಯಿಂದ ಕಲಿತು ಸದುಪಯೋಗಪಡಿಸಿಕೊಳ್ಳಬೇಕೆಂದು ಕಾರ್ಯಕರ್ತೆಯರಿಗೆ ಕಿವಿಮಾತು ಹೇಳಿದರು.

      ಅಂಗನವಾಡಿ ಕಾರ್ಯಕರ್ತೆಯರು ಪ್ರತಿನಿತ್ಯ ತಮ್ಮ ಕೇಂದ್ರಗಳ ಚಟುವಟಿಕೆ ಮಾಹಿತಿಯನ್ನು ಸ್ನೇಹ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಇದರಿಂದ ಮೇಲಧಿಕಾರಿಗಳು ಕುಳಿತಲ್ಲೆ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಣೆ ಮಾಡಲು ಹಾಗೂ ಕೇಂದ್ರಗಳಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಅನುಕೂಲವಾಗುತ್ತದೆ. ತಂತ್ರಾಂಶದ ಬಳಕೆಗೆ ಸಂಬಂಧಿಸಿದ ಸಂದೇಹಗಳಿದ್ದಲ್ಲಿ ತರಬೇತಿ ಕಾರ್ಯಕ್ರಮದಲ್ಲಿಯೇ ಪರಿಹರಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ಮಾತನಾಡಿ, ಸ್ನೇಹ ತಂತ್ರಾಂಶವು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ತಾಯಿ ಮತ್ತು ಮಗುವಿನ ಸೇವೆಗಳನ್ನು ಹಾಗೂ ಪ್ರತಿದಿನದ ಕಾರ್ಯಚಟುವಟಿಕೆಗಳನ್ನು ಸುಲಭವಾಗಿ ಕೈಗೊಳ್ಳಲು ಉಪಯುಕ್ತವಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ನೇಹ ತಂತ್ರಾಂಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯಾದ್ಯಂತ ಮಕ್ಕಳ ಮತ್ತು ತಾಯಂದಿರ ಏಕರೂಪದ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಅಲ್ಲದೇ ಮಕ್ಕಳ ಚುಚ್ಚುಮದ್ದು, ಗರ್ಭಿಣಿಯರ ಆರೈಕೆ ಹಾಗೂ ನೋಂದಣಿಗಳ ಏಕರೂಪದ ದಾಖಲಿಸುವಿಕೆ; ಮಗುವಿನ ತೂಕ, ಉದ್ದ, ಎತ್ತರದ ಬಗ್ಗೆ ನಿಖರ ಮಾಹಿತಿ ಹಾಗೂ ಮಾಸಿಕ ವರದಿಗಳ ಮಾಹಿತಿ ಸಂಗ್ರಹ; ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾಗುವ ಮಕ್ಕಳ ನಿಖರ ಮಾಹಿತಿ; ಭಾವಚಿತ್ರದ ಮೂಲಕ ಮಕ್ಕಳ ಹಾಜರಾತಿ ತಿಳಿಯಲು ಸಹಕಾರಿ; ವೈದ್ಯಕೀಯ ಸೇವೆ ಅಗತ್ಯವಿರುವ ಮಕ್ಕಳ ಗುರುತಿಸುವಿಕೆಗೆ ಸಂಬಂಧಿಸಿದಂತೆ ಜಿಲ್ಲೆಯ ಮಾಹಿತಿಯನ್ನು ಏಕಕಾಲದಲ್ಲಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

        ಸ್ನೇಹ ತಂತ್ರಾಂಶ ಬಳಕೆಯಿಂದ ಅಂಗನವಾಡಿ ಕೇಂದ್ರಗಳಲ್ಲಿರುವ ಲೋಪದೋಷ, ನ್ಯೂನ್ಯತೆ, ಮೂಲಭೂತ ಸೌಕರ್ಯಗಳ ಕೊರತೆ ಅರಿತು ಅಗತ್ಯ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸಲು ನೆರವಾಗುತ್ತದೆ. ಅಲ್ಲದೇ ಸಿಬ್ಬಂದಿಗಳಿಗೆ ಸಲಹೆ, ಸೂಚನೆ ನೀಡಲು ಅನುಕೂಲವಾಗುತ್ತದೆ. ತುಮಕೂರನ್ನು ಮಾತೃಪೂರ್ಣ ಯೋಜನೆ ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಂಡಂತೆ ಸ್ನೇಹ ತಂತ್ರಾಂಶ ಅನುಷ್ಠಾನಕ್ಕೂ ಪೈಲೆಟ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಯೋಜನೆಯ ಅನುಷ್ಠಾನವನ್ನು ಯಶಸ್ವಿಗೊಳಿಸುವ ಮೂಲಕ ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿಯನ್ನಾಗಿಸಬೇಕೆಂದು ತಿಳಿಸಿದರು.

       ಕಾರ್ಯಕ್ರಮದಲ್ಲಿ ಸಿ.ಸ್ಟೆಪ್ ಸಂಸ್ಥೆಯ ಮುಖ್ಯಸ್ಥೆ ಸುರಭಿ ಹಾಗೂ ರಾಜೇಶ್ ಅವರು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಸಿಡಿಪಿಓಗಳು, ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

(Visited 23 times, 1 visits today)