ತುಮಕೂರು:

      ಜಿಲ್ಲೆಯಲ್ಲಿರುವ ಕಲೆ, ಸಂಸ್ಕೃತಿ, ಸಾಮಾಜಿಕ ಜೀವನಕ್ಕೆ ಸಂಬಂಧಪಟ್ಟಂತಹ ಪುರಾತನ ಕಾಲದಲ್ಲಿ ಪ್ರಾಚ್ಯವಾಗಿ ಅಳಿದು ಉಳಿದಿರುವ ಕೋಟೆ-ಕೊತ್ತಲಗಳ ಕುರಿತು ಮಕ್ಕಳಿಗೆ ಪ್ರಾಚ್ಯ ಪ್ರಜ್ಞೆ ಮೂಡಿಸುವ ಸಲುವಾಗಿ ಕಿರುಚಿತ್ರ/ಸಾಕ್ಷ್ಯಚಿತ್ರ/ಭಾಷಣದ ರೂಪದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುವಂತೆ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಪ್ರಾಚ್ಯ ಸ್ಥಳಗಳ ಕುರಿತು ಭಾಷಣ, ಚಿತ್ರಕಲೆ ಸ್ಪರ್ಧೆ, ಚರ್ಚಾಸ್ಪರ್ಧೆ ರಸಪ್ರಶ್ನೆ ಕಾರ್ಯಕ್ರಮ ಕೈಗೊಂಡು ಈ ತಿಂಗಳ 15ರೊಳಗೆ ತಾಲ್ಲೂಕು ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಿ, ತಿಂಗಳ ಕೊನೆಯ ವಾರದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪ್ರದಾನ ಮಾಡುವಂತೆ ಸೂಚಿಸಿದರು.

       ಕರ್ನಾಟಕವು ಪ್ರಾಗೈತಿಕ ಇತಿಹಾಸದ ಪರಂಪರೆ ಹೊಂದಿರುವ ನಾಡು. ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು, ಮೈಸೂರು ಅರಸರು ಹೀಗೆ ಅನೇಕ ರಾಜ ಮನೆತನಗಳು ಆಳ್ವಿಕೆ ನಡೆಸಿ, ಹಲವಾರು ರಾಜ ಪರಂಪರೆ, ಸ್ಮಾರಕಗಳು, ಶಾಸನ, ಕೋಟೆ-ಕೊತ್ತಲುಗಳು, ದೇವಸ್ಥಾನ, ಮಸೀದಿ, ಚರ್ಚ್‍ಗಳು, ಗುಡಿ ಗೋಪುರಗಳ ರೂಪದಲ್ಲಿ ಕೊಡುಗೆಯಾಗಿ ನೀಡಿವೆ. ಇವುಗಳ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಪ್ರಾಚ್ಯಪ್ರಜ್ಞೆ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

      ಮುಂದಿನ ಪೀಳಿಗೆಗೆ ಪ್ರಾಚೀನ ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಸ್ಕøತಿ ಹಾಗೂ ಪರಂಪರೆಯ ಮಹತ್ವವನ್ನು ತಿಳಿಸುವುದು, ಅರಿವು ಮೂಡಿಸುವುದು ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದ ಉದ್ದೇಶವಾಗಿದೆ. ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಯೋಗದಲ್ಲಿ ವಿವಿಧ ಸ್ಪರ್ಧೆಗಳನ್ನು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಏರ್ಪಡಿಸಬೇಕು ಎಂದು ತಿಳಿಸಿದರು.

      ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಂತಾದವರು ಹಾಜರಿದ್ದರು.

(Visited 70 times, 1 visits today)