ತುಮಕೂರು:

      ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ನಲವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ 40 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಒಳಗೊಂಡ `ವಿಶೇಷ ಕಲ್ಪತರು ಪಡೆ’ಯನ್ನು ಜಿಲ್ಲಾ ಪೊಲೀಸ್ ಇಲಾಖೆ ರಚಿಸಿದೆ.

      ಈ ವಿಶೇಷ ಪಡೆ ಆಯಾ ಪೊಲೀಸ್ ಉಪ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ. ಪ್ರಮುಖವಾಗಿ ಬಂದೋಬಸ್ತ್ ಕರ್ತವ್ಯ, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣ ಮೇಲೆ ತುರ್ತು ನಿಗಾವಹಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತದೆ. ಮಹಿಳೆಯರು ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದ್ದಾರೆ.

      ಈ ತಂಡಕ್ಕೆ ಜು.26ರಿಂದ ಆ.8ರವರೆಗೆ ಒಟ್ಟು 11 ದಿನ ವಿವಿಧ ರೀತಿಯ ತರಬೇತಿ ನೀಡಲಾಗಿದೆ. ಮೊದಲ 5 ದಿನ ದುರ್ಗಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಬೃಂದಾ ಅಡಿಗ ಅವರು ತಮ್ಮ ತಂಡದೊಂದಿಗೆ ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಮಹಿಳೆ ಮತ್ತು ಸಮಾಜದ ಸಂಬಂಧ, ಪೊಕ್ಸೊ ಕಾಯ್ದೆ, ಐಟಿಪಿ ಕಾಯ್ದೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಆಯಸಿಡ್ ದಾಳಿ ಪ್ರಕರಣ ಹಾಗೂ ಇತರೆ ಕಾನೂನು ವಿಚಾರಗಳ ಬಗ್ಗೆ ತರಬೇತಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಈ ಪ್ರಶಿಕ್ಷಣಾರ್ಥಿಗಳಿಗೆ ದೈಹಿಕ, ಮಾನಸಿಕ ಮತ್ತು ಆರೋಗ್ಯ ಬಲಪಡಿಸುವ ನಿಟ್ಟಿನಲ್ಲಿ 6 ದಿನ ಯೋಗ ತರಬೇತಿ, 7 ದಿನ ಕರಾಟೆ ತರಬೇತಿ, 3 ದಿನ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

      ನಗರದ ಎಂಪ್ರೆಸ್, ಸಿದ್ಧಗಂಗಾ ಮಹಿಳಾ ಕಾಲೇಜು, ವಿದ್ಯಾವಾರಿಧಿ ಕಾಲೇಜು, ವಿದ್ಯಾನಿಕೇತನ ಕಾಲೇಜು, ಸರ್ವೋದಯ ಕಾಲೇಜುಗಳಿಗೆ ತರಬೇತಿ ಪಡೆದ ಈ ತಂಡವು ಭೇಟಿ ನೀಡಿತ್ತು. ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷತೆಯ ಕುರಿತು, ತಮ್ಮನ್ನು ತಾವು ಅಪರಾಧಗಳಿಂದ ರಕ್ಷಿಸಿಕೊಳ್ಳುವ ಬಗ್ಗೆ ತಿಳಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.

(Visited 16 times, 1 visits today)