ತುಮಕೂರು:
ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿಗೆ ಹೇಮಾವತಿ ಕುಡಿಯುವ ನೀರು ಸರಬರಾಜು ಮಾಡುವ ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ಬಳ್ಳಾಪುರ ಸಮೀಪವಿರುವ ಪಂಪ್‍ಹೌಸ್‍ನಲ್ಲಿ ಕಳ್ಳರು ಯಂತ್ರೋಪಕರಗಣಳನ್ನು ಕಳವು ಮಾಡಿದ್ದು, ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಸಂಸದ ಜಿ.ಎಸ್. ಬಸವರಾಜು ಅವರನ್ನು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್.ರಾಜೇಂದ್ರ ಅವರು ಕರೆದೊಯ್ದು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು ಅವರು, ಮಧುಗಿರಿ-ಕೊರಟಗೆರೆಗೆ ಹೇಮಾವತಿ ಕುಡಿಯುವ ನೀರು ಸರಬರಾಜಾಗುವ ತುಮಕೂರು ಗ್ರಾಮಾಂತರದ ಬಳ್ಳಾಪುರ ಪಂಪ್‍ಹೌಸ್‍ನಲ್ಲಿ ಯಂತ್ರೋಪಕರಣಗಳನ್ನು ಕಳ್ಳರು ಕಳವು ಮಾಡಿದ್ದು, ಈಗ ದುರಸ್ಥಿ ಕಾರ್ಯ ನಡೆಯುತ್ತಿದೆ. ಸಂಜೆ ವೇಳೆಗೆ ದುರಸ್ಥಿ ಕಾರ್ಯ ಮುಗಿದು ಕೊರಟಗೆರೆ ಅಗ್ರಹಾರ ಕೆರೆಗೆ ನೀರು ತಲುಪಲಿದ್ದು, ಮಂಗಳವಾರ ಸಂಜೆ ವೇಳೆಗೆ ಮಧುಗಿರಿ ಸಿದ್ಧಾಪುರ ಕೆರೆಗೆ ನೀರು ಹರಿಯಲಿದೆ ಎಂದು ತಿಳಿಸಿದರು.
ಈ ಭಾರಿ ಮಧುಗಿರಿಗೆ ಅಗತ್ಯಕ್ಕಿಂತ ಹೆಚ್ಚಿನ ಹೇಮಾವತಿ ನೀರು ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಸಂಜೆ ವೇಳೆಗೆ ಮಧುಗಿರಿ ಸಿದ್ಧಾಪುರ ಕೆರೆಗೆ ಹೇಮಾವತಿ ಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಪ್‍ಹೌಸ್‍ನಲ್ಲಿ ಸುಮಾರು 10 ಲಕ್ಷ ರೂ.ಗಳಷ್ಟು ಯಂತ್ರೋಪಕರಣಗಳು ಕಳುವಾಗಿದ್ದು, ಕಳುವಾಗಿರುವ ಯಂತ್ರೋಪಕರಣಗಳನ್ನು ತಂದು ದುರಸ್ಥಿ ಕಾರ್ಯ ಮಾಡಲಾಗುತ್ತಿದೆ. ಸೋಮವಾರಸಂಜೆ ವೇಳೆಗೆ ದುರಸ್ಥಿಕಾರ್ಯ ಮುಗಿಯಲಿದೆ ಎಂದು ಹೇಳಿದರು.
ಮಧುಗಿರಿ ಪುರಸಭೆ ಮತ್ತು ಕೊರಟಗೆರೆ ಪಟ್ಟಣ ಪಂಚಾಯಿತಿ ವತಿಯಿಂದ ಇಬ್ಬರು ವಾಚ್‍ಮೆನ್‍ಗಳನ್ನು ಪಂಪ್‍ಹೌಸ್‍ಗೆ ಖಾಯಂ ಆಗಿ ನೇಮಿಸಿ ಅವರ ಭದ್ರತೆಗಾಗಿ ಎರಡು ಬಂದೂಕು, ಹಾಗೂ ವಾಸವಿರಲು ವಸತಿ ಸೌಲಭ್ಯ ಮತ್ತು ಪಂಪ್‍ಹೌಸ್ ಸುತ್ತ ಕಾಂಪೌಂಡ್ ನಿರ್ಮಿಸಿ 24 ಗಂಟೆ ಭದ್ರತೆ ಕಲ್ಪಿಸಲು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಸದರು ಒತ್ತಾಯಿಸಿದರು.
ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಹಾಗೂ ಮಾರ್ಕೆಟಿಂಗ್ ಫೆಡರೇಷನ್ ನಿರ್ದೇಶಕರಾದ ಆರ್.ರಾಜೇಂದ್ರ ಮಾತನಾಡಿ, ತುಮಕೂರು ಗ್ರಾಮಾಂತರದ ಮಧುಗಿರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, 20 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಮಧುಗಿರಿ ಸಿದ್ಧಾಪುರ ಕೆರೆಗೆ ಹೇಮಾವತಿ ನೀರು ಸರಬರಾಜಾಗುವ ತುಮಕೂರು ಗ್ರಾಮಾಂತರದ ಬಳ್ಳಾಪುರ ಪಂಪ್‍ಹೌಸ್‍ನಲ್ಲಿ ಯಂತ್ರೋಪಕರಣಗಳು ಕಳುವಾಗಿದ್ದು, ದುರಸ್ತಿಕಾರ್ಯ ನಡೆಯುತ್ತಿದೆ. ಮಂಗಳವಾರ ಸಂಜೆ ವೇಳೆಗೆ ಸಿದ್ಧಾಪುರ ಕೆರೆಗೆ ನೀರು ಹರಿಯಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಮಧುಗಿರಿಯ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಲ್ಲಿನ ಶಾಸಕರಿಗೆ ಜವಾಬ್ದಾರಿಯಿರಬೇಕಿತ್ತು, ಇಲ್ಲಿ ಪಂಪ್‍ಹೌಸ್‍ನಲ್ಲಿ ಯಂತ್ರೋಪಕರಣಗಳು ಕಳುವಾಗಿ ಸಿದ್ಧಾಪುರ ಕೆರೆಗೆ ನೀರು ಹರಿಯಲು ವಿಳಂಬವಾಗುತ್ತಿದೆ. ಮಧುಗಿರಿಗೆ ನೀರು ಸರಬರಾಜಾಗುವ ಪಂಪ್‍ಹೌಸ್‍ಗೆ ಮಧುಗಿರಿ ಶಾಸಕರು ಸೌಜನ್ಯಕ್ಕಾದರೂ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ, ಶಾಸಕರಿಗೆ ಎಲ್ಲಿಂದ ನೀರು ಸರಬರಾಜಾಗುತ್ತದೆ ಎಂಬ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ, ಈ ವೇಳೆಗಾಗಲೇ ಸಿದ್ದಾಪುರ ಕೆರೆಗೆ ನೀರು ಹರಿಯಬೇಕಿತ್ತು. ಅಧಿಕಾರಿಗಳು ದುರಸ್ಥಿಕಾರ್ಯ ಕೈಗೊಂಡಿದ್ದಾರೆ. ಮಂಗಳವಾರ ಸಂಜೆ ವೇಳೆಗೆ ಮಧುಗಿರಿ ಜನತೆಗೆ ಹೇಮಾವತಿ ಕುಡಿಯುವ ನೀರು ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ಧಾಪುರ ಕೆರೆ ತುಂಬಿಸಿ ಮಧುಗಿರಿಗೆ ಹೆಚ್ಚಿನ ನೀರು ಬಿಡುಗಡೆ ಮಾಡುವ ವ್ಯವಸ್ಥೆ ಮಾಡುತ್ತೇನೆ ಎಂದು ಸಂಸದರಾದ ಜಿ.ಎಸ್. ಬಸವರಾಜು ಅವರು ಭರವಸೆ ನೀಡಿದ್ದಾರೆ. ಇದರಿಂದ ಮಧುಗಿರಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಎನ್.ಗಂಗಣ್ಣ, ಮಧುಗಿರಿ ಪುರಸಭೆ ಮುಖ್ಯಾಧಿಕಾರಿ ಲೋಹಿತ್, ಮಧುಗಿರಿ ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.