ಮಧುಗಿರಿ :
ಜನರ ರುದ್ರಭೂಮಿ ಸಂವಿಧಾನಬದ್ಧ ಮೂಲಭೂತ ಹಕ್ಕು. ಜಮೀನು ನೀಡುವವರಿದ್ದರೆ ಸಾರ್ವಜನಿಕ ರುದ್ರಭೂಮಿಗಾಗಿ ನಾನೇ ಹಣ ನೀಡುತ್ತೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಭರವಸೆ ನೀಡಿದರು.
ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯಲ್ಲಿ ತಾಲೂಕು ಆಡಳಿತ ಹಾಗೂ ರೆಡ್ಡಿಹಳ್ಳಿ ಗ್ರಾ.ಪಂ.ವತಿಯಿಂದ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೆಡ್ಡಿಹಳ್ಳಿ ಗ್ರಾಮಸ್ಥರು ನಮ್ಮೂರಿಗೆ ರುದ್ರಭೂಮಿಯಿಲ್ಲ ಎಂದು ಮನವಿ ನೀಡಿದಾಗ ಪರಿಶೀಲಿಸಲು ಕಂದಾಯಾಧಿಕಾರಿಗೆ ಸೂಚಿಸಿದರು. ಆದರೆ ಸುತ್ತಮುತ್ತ ಸರ್ಕಾರಿ ಜಮೀನು ಲಭ್ಯವಿಲ್ಲ ಎಂದಾಗ, ಖಾಸಗಿ ಜಮೀನು ನೀಡುವವರು ಇದ್ದರೆ ನಾನೇ ಹಣ ನೀಡುತ್ತೇನೆ ಎಂದು ಭರವಸೆ ನೀಡಿದರು. ತಾಲೂಕಿನಲ್ಲಿ ಸರಿ ಸುಮಾರು 10 ಸಾವಿರದಷ್ಟು ಮಾಶಾನದ ದೊರೆಯದ ಫಲಾನುಭವಿಗಳು ಇದ್ದಾರೆ. ಹಿಂದಿನವರು ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ನಾನು ಚರ್ಚೆ ಮಾಡಲ್ಲ. ಬದಲಿಗೆ ತಾಲೂಕಿನೆಲ್ಲೆಡೆ ಕ್ಯೂಬಿಂಗ್ ಮಾಡಿಸಲಿದ್ದು, ಎಲ್ಲರಿಗೂ ಹಂತ ಹಂತವಾಗಿ ಮಾಶಾಸನ ಕೊಡಿಸುವುದಾಗಿ ಭರವಸೆ ನೀಡಿದರು. ಪೌತಿ ಖಾತೆಗೆ ದಾಖಲಾತಿ ಹೊಂದಿಸದೆ ರೈತರು ಪರದಾಡುತ್ತಿದ್ದು, ಸರಳೀಕರಣದೊಂದಿಗೆ ಪಂಚನಾಮೆ ಮಾಡಿ ಪೌತಿ ಖಾತೆ ಮಾಡಿಕೊಡಲು ಅಧಿಕಾರಿಗಳು ಮುಂದಾಗುವಂತೆ ಸೂಚಿಸಿದರು. ಇಂದು 113 ವಿವಿಧ ಮಾಶಸನವನ್ನು ನೀಡಿದ್ದು, ಎಲ್ಲಾ ಇಲಾಖೆಗಳಿಗೆ ಸಂಬಂದಿಸಿದಂತೆ 210 ಅರ್ಜಿಗಳು ಬಂದಿದ್ದು, ಎಲ್ಲವನ್ನೂ ಆದ್ಯತೆ ಮೇರೆಗೆ ಬಗೆಹರಿಸುವುದಾಗಿ ತಿಳಿಸಿದರು.
ಮಾಶನಸ ಕೊಡಡಿಸುವುದು ದೇವರ ಕೆಲಸದಂತೆ. ಈ ಕಾರ್ಯಕ್ಕೆ ಅಧಿಕಾರಿಗಳಿಗೆ ಕಾರ್ಯಕರ್ತರೂ ಸಹಕಾರ ನೀಡುವಂತೆ ತಾಕೀತು ಮಾಡಿದರು. ಕುಡಿಯುವ ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡ್ತಾನೆ ಎಂದು ಗ್ರಾಮಸ್ಥರು ದೂರು ನೀಡಿದಾಗ ಸ್ಥಳದಲ್ಲೇ ವಾಟರ್‍ಮನ್ ಮಹಲಿಂಗಪ್ಪನನ್ನು ಅಮಾನತ್ತು ಮಾಡುವಂತೆ ತಾ.ಪಂ. ಇಓ ರವರಿಗೆ ಸೂಚಿಸಿದರು. ಹಿಂದಿನಿಂದಲೂ ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡದ ಅಂಗವಿಕಲ ಕಲ್ಯಾಣ ಇಲಾಖೆಯು ಸತ್ತಿದೆಯಾ ಎಂದು ಪ್ರಶ್ನಿಸಿದ ಶಾಸಕರು ತಾ.ಪಂ.ಇಓ ಈ ಬಗ್ಗೆ ಸಭೆ ಕರೆಯಿರಿ ಎಂದರು.
ತಹಶೀಲ್ದಾರ್ ನಂದೀಶ್ ಮಾತನಾಡಿ ಇದು 5ನೇ ಜನಸ್ಪಂದನಾ ಕಾರ್ಯಕ್ರಮ. ಇಲ್ಲಿ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಆಂದೋಲನ ನಡೆಯುತ್ತಿದೆ. ಸಾರ್ವಜನಿಕರು ನಿಮ್ಮ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ರೆಡ್ಡಿಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಮಿಲ್ ಚಂದ್ರು, ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ಎಪಿಎಂಸಿ ಮಾಜಿ ಸದಸ್ಯ ದತ್ತಣ್ಣ, ಜಿಲ್ಲಾ ಜೆಡಿಎಸ್ ಮಹಿಳಾಧ್ಯಕ್ಷೆ ಎಸ್.ಆರ್.ಲಕ್ಷ್ಮಮ್ಮ, ಗ್ರಾ.ಪಂ.ಅಧ್ಯಕ್ಷೆ ರಾಧಮ್ಮ, ಪಿಡಿಓ ರಜನಿ, ಸದಸ್ಯರಾದ ರಮೇಶ್, ರಾಜಣ್ಣ, ಪಾರ್ವತಮ್ಮ, ಸಣ್ಣಹನುಮಕ್ಕ, ಅಂಬಿಕಾ, ರಘು, ಡೇರಿ ಅಧ್ಯಕ್ಷ ನಾಗರಾಜು, ಪ್ರಕಾಶ್‍ರೆಡ್ಡಿ, ಕಂದಾಯಾಧಿಕಾರಿ ವೇಣುಗೋಪಾಲ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.