ತುಮಕೂರು:
ಹತ್ತಾರು ವರ್ಷಗಳಿಂದ ಪಕ್ಷವನ್ನು ಕಟ್ಟಿಬೆಳೆಸುತ್ತಿರುವ ಯುವ ಕಾಂಗ್ರೆಸ್ ಮುಖಂಡರು, ಕಾರ್ಯ ಕರ್ತರನ್ನು ಅಮಾನತ್ ಮಾಡಿರುವುದನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ, ನಗರದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ನೇತೃತ್ವದಲ್ಲಿ ನೂರಾರು ಯುವ ಕಾಂಗ್ರೆಸ್ ಕಾರ್ಯ ಕರ್ತರು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರಗೆ ಉಪಾಧ್ಯಕ್ಷ ಸ್ಥಾನದಿಂದ ಅಮಾನತ್ತು ಮಾಡಿರುವುದನ್ನು ಖಂಡಿಸಿ, ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿ, ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಮೂಲಕ ವರಿಷ್ಠರಿಗೆ ಮನವಿ ಪತ್ರಸಲ್ಲಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶರತ್‍ಕುಮಾರ್ ನಾತನಾಡಿ, ಆರ್.ರಾಜೇಂದ್ರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಲ ವಾರು ಜನಪರ ಹೋರಾಟಗಳನ್ನು ನಡೆಸಿ, ಪಕ್ಷವನ್ನು ಜಿಲ್ಲೆಯಲ್ಲಿ ಸದೃಢವಾಗಿ ಕಟ್ಟಲು ಶ್ರಮಿಸಿದ್ದಾರೆ. ಎಐಸಿಸಿ ಅಧ್ಯಕ್ಷರ ನಿರ್ದೇಶನದಂತೆ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಏಕಾಎಕಿ ಕಾರಣ ನೀಡದೆ ಪಕ್ಷದ ವರಿಷ್ಠರು ಅಮಾನತ್ತು ಮಾಡಿರುವುದು ಸರಿಯಲ್ಲ. ಅವರೂ ಸೇರಿದಂತೆ ಬೇರೆ, ಬೇರೆ ಜಿಲ್ಲೆಗಳಿಂದ ಅಮಾನತ್ತಾಗಿರುವ ಪಕ್ಷದ ಯುವ ಮುಖಂಡರ ಮೇಲಿನ ಅಮಾನತ್ತು ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಪಕ್ಷದ ನಿಷ್ಠಾವಂತ ಯುವ ಮುಖಂಡರನ್ನು ಲೋಕಸಭಾ ಚುನಾವಣೆಯ ವೇಳೆ ಪಕ್ಷ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಯುವ ಕಾಂಗ್ರೆಸ್ ಜಿಲ್ಲಾ ವಕ್ತಾರ ಸುಮಂತ್ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಪಡೆದು ಅಧಿಕಾರ ಬರಲು ಕಾರಣರಾದವರು ಯುವ ಕಾಂಗ್ರೆಸ್ ಕಾರ್ಯಕರ್ತರು. ಯಾವುದೇ ಸಕಾರಣವಿಲ್ಲದೆ ಅಮಾನತ್ತು ಮಾಡುವ ಮೂಲಕ ಪಕ್ಷ ಯುವ ಪಡೆಯನ್ನು ತುಳಿಯಲು ಹೊರಟಿದೆ ಎಂದು ಆಕ್ಷೇಪಿಸಿ, ಅವರ ಅಮಾನತ್ತನ್ನು ವಿರೋಧಿಸಿ, ಯುವ ಘಟಕವರೆಲ್ಲ ಸಾಮೂಹಿಕ ರಾಜಿನಾಮೆ ನೀಡಿದ್ದಾರೆ ಎಂದರು. ಮುಖಂಡರಾದ ಶಶಿ ಹುಲಿಕುಂಟೆ ಮಠ್, ರವಿ, ವಸಂತ್, ನಾರಾಯಣ ಗೌಡ, ರಾಜೇಶ್ ದೊಡ್ಡಮನೆ, ಅನಿಲ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.