ತುಮಕೂರು:
ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ಸು ಕಂಡಿರುವ ಮಹಿಳೆಯರ ವಾರ್ಷಿಕ ಆದಾಯದಲ್ಲಿ ಹೆಚ್ಚಳವಾಗಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಸಮಗ್ರ ಕೃಷಿ ಪದ್ಧತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರೈತರೊಂದಿಗೆ ನಡೆದ ಚರ್ಚೆಯಲ್ಲಿ ರೈತ ಮನವಿಗಳನ್ನು ಆಲಿಸಿ ಮಾತನಾಡಿದ ಅವರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸರ್ಕಾರದಿಂದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಪದ್ಧತಿಯನ್ನು ಅನುಸರಿಸುವ ಮೂಲಕ ಮುಂದಿನ ದಿನಗಳಲ್ಲಿ ಮಹಿಳೆಯರು ಉತ್ಪಾದಿಸುವ ಆಹಾರ ಪದಾರ್ಥ ಹಾಗೂ ಬೆಳೆಯುವ ಬೆಳೆಗೆ ಮಾರುಕಟ್ಟೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಚರ್ಚೆಯಲ್ಲಿ ಕೊರಟಗೆರೆ ತಾಲೂಕಿನ ರೈತ ರವಿಕುಮಾರ್ ಮಾತನಾಡಿ ಸಮಗ್ರ ಕೃಷಿ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಈ ಸೌಲಭ್ಯವನ್ನು ಹೆಚ್ಚು ರೈತರು ಬಳಸಿಕೊಳ್ಳುವಂತಾಗಬೇಕು. ಸಮಗ್ರ ಕೃಷಿ ಪದ್ಧತಿಯ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಅಲ್ಲದೇ ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಬೀಜ, ಗೊಬ್ಬರ ದೊರೆಯಬೇಕು. ಬೆಳೆದ ಬೆಳೆಗಳಿಗೆ ನಿಗಧಿತ ಬೆಲೆ ಸಿಗುತ್ತಿಲ್ಲವಾದ್ದರಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ರೈತ ಮಹಿಳೆಯರಿಗಾಗಿ ನೀಡಲಾಗುತ್ತಿರುವ ಜೇನು ಕೃಷಿ, ಅಣಬೆ ಬೆಳೆಯುವುದು, ಉಪ್ಪಿನಕಾಯಿ ತಯಾರು ಮಾಡುವ ತರಬೇತಿಯಿಂದ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಅನುಕೂಲವಾಗುತ್ತಿದ್ದು, ಇದರಿಂದ ವಾರ್ಷಿಕ ಆದಾಯ ಶೇ.20ರಷ್ಟು ಹೆಚ್ಚಾಗಿದೆ ಎಂದು ರೈತ ಮಹಿಳೆಯೊಬ್ಬರು ತಮ್ಮ ಅನಿಸಿಕೆ ತಿಳಿಸಿದರು.
ಸಮಗ್ರ ಕೃಷಿ ಯೋಜನೆಯಡಿ ತಾವು ಕೃಷಿ ಹೊಂಡ ಸೌಲಭ್ಯ ಪಡೆದುಕೊಂಡಿದ್ದು, ತೆಂಗು ಹಾಗೂ ಮೇವಿನ ಬೆಳೆಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ಸ್ವಂತ ಖರ್ಚಿನಲ್ಲಿ ಮೇವು ಬೆಳೆಯುತ್ತಿದ್ದು, ತುಂತುರು ನೀರಾವರಿ ಸೌಲಭ್ಯವನ್ನು ಬಳಸಿಕೊಂಡು ತರಕಾರಿಗಳನ್ನು ಬೆಳೆಯುತ್ತಿರುವ ಕುರಿತು ರೈತನೊಬ್ಬ ಗಮನಕ್ಕೆ ತಂದಾಗ ಇದಕ್ಕೆ ಪ್ರತಿಕ್ರಿಯಿಸಿದ ಡಾ|| ಶಾಲಿನಿ ರಜನೀಶ್ ಅವರು ಘಟಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 10 ಲಕ್ಷ ರೂ.ಗಳವರೆಗೆ ಸಹಾಯ ಧನ ನೀಡಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವರಿಕೆ ಮಾಡಿದರು.
ನಂತರ ಮಾತನಾಡಿದ ಶಾಲಿನಿ ರಜನೀಶ್ ಸಮಗ್ರ ಕೃಷಿ ಪದ್ಧತಿ ಯೋಜನೆಯು ತಾಂತ್ರಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಉತ್ತಮವಾಗಿದ್ದು, ಎಲ್ಲಾ ವರ್ಗದ ಜನರು ಅಳವಡಿಸಿಕೊಳ್ಳಬಹುದಾಗಿದೆ. ಅಲ್ಲದೇ ರೈತರೇ ಭಾಗವಹಿಸಿ ನಿರ್ವಹಿಸುವ ಒಂದು ವ್ಯವಸ್ಥೆಯಾಗಿದ್ದು, ರೈತರ ಜೀವನಮಟ್ಟದಲ್ಲಿ ಗಣನೀಯ ಸುಧಾರಣೆಯಾಗುತ್ತದೆ. ವರ್ಷವಿಡೀ ಆದಾಯವನ್ನು ನೀಡುತ್ತದೆ. ಕುಟುಂಬದ ವಿವಿಧ ಬೇಡಿಕೆಗಳನ್ನು ಪೂರೈಸುತ್ತದೆ ಎಂದು ತಿಳಿಸಿದರು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಅರಣ್ಯ, ಕೃಷಿ ವಿಜ್ಞಾನ ಕೇಂದ್ರ ಹಾಗೂ ನಬಾರ್ಡ್ ಇಲಾಖೆಗಳನ್ನೊಳಗೊಂಡ ಜಿಲ್ಲಾ ಮಟ್ಟದ ಉಸ್ತುವಾರಿ ತಂಡವನ್ನು ರಚಿಸಲಾಗಿದ್ದು, ಹಣ್ಣು ಮತ್ತು ತರಕಾರಿ ಉತ್ಪನ್ನಗಳನ್ನು ಹಾಪ್ ಕಾಮ್ಸ್/ನಿಂಜ ಕಾರ್ಟ್/ರಿಲಯನ್ಸ್ ಪ್ರೆಷ್ ಸಂಸ್ಥೆಗಳ ಮೂಲಕ ಖರೀದಿಸಿ ಗ್ರಾಹಕರಿಗೆ ವಿತರಿಸುವ ಸೌಲಭ್ಯ ಒದಗಿಸುವ ಬಗ್ಗೆ ಯೋಜಿಸಲಾಗಿದೆ. ಅಲ್ಲದೆ ಸಾವಯವ ಉತ್ಪನ್ನಗಳನ್ನು ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ನಿಯಮಿತ ಮೂಲಕ ಖರೀದಿಸಿ ಗ್ರಾಹಕರಿಗೆ ವಿತರಿಸುವ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಉಪಕಾರ್ಯದರ್ಶಿ ರಮೇಶ್, ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ, ಜಿ.ಪಂ. ಯೋಜನಾ ನಿರ್ದೇಶಕ ಮಾಂಕಾಳಪ್ಪ, ಮತ್ತಿತರರು ಉಪಸ್ಥಿತರಿದ್ದರು.