ಪಾವಗಡ :
ತಾಲೂಕಿನ ಅಭಿವೃದ್ದಿಗೆ ಯಾರೇ ಆಗಲಿ ರಾಜಕೀಯ ಹೊರತುಪಡಿಸಿ ಸಾಗಬೇಕಿದೆ ಎಂದು ಚಿತ್ರದುರ್ಗ ಸಂಸದರಾದ ಎ.ನಾರಾಯಣ ಸ್ವಾಮಿ ತಿಳಿಸಿದರು.
ಶುಕ್ರವಾರ ತಾಪಂ ಸಭಾಂಗಣದಲ್ಲಿ ದಿಢೀರನೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಮಾತನಾಡಿದ ಅವರು, ಸಮಗ್ರ ಅಭಿವೃದ್ಧಿಗೆ ಯಾವುದೇ ರಾಜಕೀಯ ಬೇಡ. ನಮ್ಮದೇ ಸರ್ಕಾರವಿದೆ. ಅನುದಾನ ತಂದು ಸರ್ವತೋಮುಖ ಅಭಿವೃದ್ದಿಪಡಿಸೋಣ. ಅದನ್ನು ವಿನಾಕಾರಣ ರಾಜಕೀಯ ಮಾಡಿದರೆ ನಾನಂತು ಸುಮ್ಮನೆ ಕೂರುವ ವ್ಯೆಕ್ತಿಯಲ್ಲ ಎಂದು ಎಲ್ಲಾ ಆದಿಕಾರಿಗಳಿಗೆ ಸಂಸದರು ಖಡಕ್ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯ್ತಿ ವೆಬ್‍ಸೈಟ್‍ನ್ನು ಮೋದಲು ಸಿದ್ದಪಡಿಸಬೇಕು.ಎಲ್ಲಾ ಕಾರ್ಯಕ್ರಮಗಳು ವೆಬ್‍ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಪ್ರತಿ ಇಲಾಖೆವಾರು ಕಾರ್ಯಕ್ರಮಗಳು, ಸಮಸ್ಯೆಗಳ ಸ್ಪಷ್ಟಚಿತ್ರಣವನ್ನು ತಾಪಂ ವೆಬ್‍ನಲ್ಲಿ ಸಿಗುವಂತೆ ಮಾಡಬೇಕೆಂದು ಇಒ ನರಸಿಂಹಮೂರ್ತಿರವರಿಗೆ ತಿಳಿಸಿದರು.
ಇದೇ ತಿಂಗಳ 26ರೊಳಗೆ ತಾಲೂಕಿನ ಶಿಥಿಲ ಶಾಲಾ ಕಟ್ಟಡಗಳ ಪೋಟೋ ಸಹಿತ ಮಾಹಿತಿ ನೀಡುವಂತೆ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ ಅವರು ಯಾವುದೇ ವಿದ್ಯಾರ್ಥಿಗಳು ಭಯದ ವಾತವರಣದಲ್ಲಿ ಶಿಥಿಲಕಟ್ಟಡಗಳಲ್ಲಿ ಪಾಠ-ಪ್ರವಚನ ಕೇಳುವಂತಿಲ್ಲ. ಸೂಕ್ತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದೆಂದರು.
ಹೋಬಳಿಗೊಂದು ಉತ್ತಮ ಶಾಲೆಗಳನ್ನು ಗುರುತಿಸಿ ಕಾರ್ಪೋರೆಟ್ ವಲಯದಿಂದ ಆ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿಪಡಿಸಲು ಚಿತಿಂಸಲಾಗಿದ್ದು ಅಂತಹ ಶಾಲೆಗಳ ಪಟ್ಟಿ ನೀಡಬೇಕು ಎಂದರು.
ತಾಲೂಕಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಎಷ್ಟು ಘಟಕಗಳು ಕೆಟ್ಟು ನಿಂತಿವೆ. ಇತರೆ ಸಮಸ್ಯೆಗಳಿಂದ ಎಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ.. ಘಟಕಗಳ ಚಾಲನೆಗೆ ನಿರ್ಲಕ್ಷತೆಯ ಬಗ್ಗೆ ಪ್ರಶ್ನಿಸಿದ ಸಂಸದರು , ಪ್ರತಿ ಶಾಲೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಬೇಕು. ಯಾವುದೇ ವಿದ್ಯಾರ್ಥಿ ಪ್ಲೋರೈಡ್ ನೀರನ್ನು ಸೇವನೆ ಮಾಡದಂತೆ ಗ್ರಾಮೀಣ ಕುಡಿಯುವ ನೀರಿನ ವಿಭಾಗಾಧಿಕಾರಿಗಳಾದ ಬಿ.ಪಿ.ನಾಗರಾಜುರವರಿಗೆ ಕ್ರಮಕೈಗೊಳ್ಳ ಬೇಕೆಂದು ತಿಳಿಸಿದರು.
ತಾಲೂಕಿನ ಪ್ರತಿ ಗ್ರಾಪಂನಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆಯಲ್ಲಿ 20 ರಿಂದ 30 ಸಾವಿರ ಹಣ ಪಡೆಯಲಾಗುತ್ತಿದೆ ಇದರ ಪೂರ್ಣ ಮಾಹಿತಿ ಲಭ್ಯವಿದ್ದು ಯಾವುದೇ ಮನ್ಸೂಚನೆ ಇಲ್ಲದೆ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದ ಅವರು ತಾಲೂಕಿಗೆ ಈಗ ಬೇಕಾಗಿರುವ ಮನೆಗಳ ಪೂರ್ಣ ಪ್ರಮಾಣದ ಪಟ್ಟಿ ನೀಡಿ ಎಂದು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದರ್ ವರದರಾಜುರವರಿಂದ ಆಧಾರ್ ಸಮಸ್ಯೆ ಮತ್ತು ಮಾಸಾಶನ ಬಗ್ಗೆ ಮಾಹಿತಿ ಪಡೆದು ಮುಂದೆ ಇಂತಹ ಸಮಸ್ಯೆ ಎದುರಾಗದಂತೆ ಕ್ರಮಕೈಗೊಳ್ಳುವುದು ಹಾಗೂ ತಾಲೂಕಿನಲ್ಲಿ ಎಷ್ಟು ಕಡೆ ಸರ್ಕಾರಿ ಭೂಮಿ ಇದೆ ಅದನ್ನು ಗುರುತಿಸಿ ವಿಭಜನೆ ಮಾಡಬೇಕು ಜನತೆಗೆ ಹಾಗೂ ವಸತಿ ಸೌಲಭ್ಯಕ್ಕಾಗಿ ಬಳಕೆಯಾಗುವ ಭೂಮಿಯನ್ನು ಗುರುತಿಸಬೇಕೆಂದು ಸಭೆಯಲ್ಲಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯ್ತಿ ನೂತನ ಸಂಭಾಗಣ 75 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ಬಗ್ಗೆ ಸಭೆಯಲ್ಲಿ ತಾಪಂ.ಅದ್ಯಕ್ಷರಾದ ಸೊಗಡು ವೆಂಕಟೇಶ್ ತಿಳಿಸಿದಾಗ ಸಂಸದರ ಕೋಟಾದಿಂದ ಹೆಚ್ಚುವರಿ ಅನುದಾನ ನೀಡಿ ಬೃಹತ್ ಸಂಭಾಗಣ ನಿರ್ಮಾಣ ಮಾಡೋಣವೆಂದು ತಿಳಿಸಿದರು.