ತುಮಕೂರು:
ಇತಿಚೀನ ದಿನಗಳಲ್ಲಿ ಕೇಬಲ್, ನೀರಿನ ಪೈಪ್, ಗ್ಯಾಸ್ ಸಂಪರ್ಕ, ಮತ್ತಿತರ ತಾಂತ್ರಿಕ ಕಾರಣಗಳಿಂದಾಗಿ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿ ನಿರ್ಮಿಸಿದ ರಸ್ತೆಯನ್ನು ಕೆಲವೇ ದಿನಗಳಲ್ಲಿ ಅಗೆಯುವುದು, ಮತ್ತೆ ತೇಪೆ ಹಾಕುವುದು ಸಾಮಾನ್ಯವಾಗಿದೆ. ಮತ್ತೆ ಮತ್ತೆ ರಸ್ತೆಗಳನ್ನು ಅಗೆದು ವಿರೂಪಗೊಳಿಸುವ ಬದಲು ರಸ್ತೆ ಕಾಮಗಾರಿ ನಡೆಯುವಾಗಲೇ ಭವಿಷ್ಯದ ಬಗ್ಗೆ ಯೋಚಿಸಿ ಪೂರಕ ವ್ಯವಸ್ಥೆಗಳನ್ನು ಒದಗಿಸಿದರೆ ವ್ಯವಸ್ಥಿತ ರಸ್ತೆಯಾಗಿ ರೂಪುಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳನ್ನು ಅಗೆಯದಂತೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನಿಂದ ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್ ರಸ್ತೆಗಳಿಗೆ “ಟೆಂಡರ್ ಶ್ಯೂರ್” ಟಚ್ ನೀಡುವ ಹೊಸ ಯೋಜನೆಯೊಂದನ್ನು ವಿನ್ಯಾಸಗೊಳಿಸಲಾಗಿದೆ.
ಏನಿದು ಟೆಂಡರ್ ಶ್ಯೂರ್?
ಯಾವುದೇ ಕಾರಣಕ್ಕೂ ರಸ್ತೆಗಳನ್ನು ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ವಿನ್ಯಾಸಗೊಳಿಸುವ ಯೋಜನೆಯೇ ಟೆಂಡರ್ ಶ್ಯೂರ್. ಜಗತ್ತಿನ ಬಹುತೇಕ ಪ್ರಮುಖ ನಗರಗಳ ರಸ್ತೆಗಳು ಈ ಟೆಂಡರ್ ಶ್ಯೂರ್ ವಿನ್ಯಾಸವನ್ನು ಹೊಂದಿವೆ.
ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ನಗರದ ವಿವಿಧ ಕಡೆ ಕೈಗೆತ್ತಿಕೊಂಡಿರುವ 17 ಸ್ಮಾರ್ಟ್ ರಸ್ತೆಗಳನ್ನು ಟೆಂಡರ್ ಶ್ಯೂರ್ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾಗುವುದು. ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ|| ಶಾಲಿನಿ ರಜನೀಶ್ ಅವರ ಮಾರ್ಗದರ್ಶನದಲ್ಲಿ, ಕಾಮಗಾರಿ ನಿರ್ವಹಣೆ ಹೊತ್ತಿರುವ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆನ್ಸಿ(ಪಿಎಂಸಿ) ಸಂಸ್ಥೆಯಾದ ಐಪಿಇ ಗ್ಲೋಬಲ್ ಲಿಮಿಟೆಡ್‍ನ ತಜ್ಞರು ಈ ವಿನ್ಯಾಸದ ಯೋಜನೆಯನ್ನು ಸಿದ್ಧಪಡಿಸಿದ್ದಾರೆ.
ಮಹಾನಗರ ಪಾಲಿಕೆ, ಬೆಸ್ಕಾಂ, ಜಲಮಂಡಳಿ, ಪೊಲೀಸ್ ಇಲಾಖೆಗಳು ಸೇರಿದಂತೆ ಎಲ್ಲ ನಾಗರಿಕ ಸೇವಾ ಸಂಸ್ಥೆಗಳ ಸಮನ್ವಯತೆ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದೆ ನಗರದ ರಸ್ತೆಗಳನ್ನು ಯರ್ರಾಬಿರ್ರಿ ಅಗೆಯುವುದನ್ನು ತಡೆಗಟ್ಟಿ ಪರಿಕಲ್ಪಿತ ರೂಪದಲ್ಲಿ ಸುಂದರವಾಗಿ ನಿರ್ಮಿಸುವುದು ಈ ಟೆಂಡರ್‍ಶ್ಯೂರ್‍ನ ಉದ್ದೇಶವಾಗಿದೆ. ಎಲ್ಲ ಸೇವಾ ಸಂಸ್ಥೆಗಳನ್ನೊಳಗೊಂಡ ಏಕಗವಾಕ್ಷಿ ವ್ಯವಸ್ಥೆಯಡಿ ನಾಗರಿಕ ಸೌಲಭ್ಯ ಒದಗಿಸಲು ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್ ಫೈಬರ್ ಕೇಬಲ್(ಓಎಫ್‍ಸಿ), ಬೀದಿ ದೀಪ, ಸಿಗ್ನಲ್ ದೀಪ, ಸಿಸಿ ಟಿ.ವಿ. ಕೇಬಲ್, ಗ್ಯಾಸ್ ಸಂಪರ್ಕ ಜಾಲ, ಈ ಎಲ್ಲ ಸೌಲಭ್ಯಗಳಿಗೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್(ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ)ವ್ಯವಸ್ಥೆ ಕಲ್ಪಿಸುವ ಮಹತ್ವದ ಯೋಜನೆ ಇದಾಗಿದೆ.
ಈ ಯೋಜನೆಯನ್ನು ಕಾರ್ಯಗತಗೊಳಿಸುವುದರಿಂದ ಯಾವುದೇ ನಾಗರಿಕ ಸೇವಾ ಸೌಲಭ್ಯದ ದುರಸ್ತಿ ಇದ್ದರೂ ರಸ್ತೆ ಅಗೆಯುವ ಪ್ರಮೇಯವೇ ಬರುವುದಿಲ್ಲ. ಸಮಸ್ಯೆ ಇದ್ದಲ್ಲಿ ಡಕ್ಟ್‍ಗಳನ್ನು ತೆರೆದು ದುರಸ್ತಿ ಕಾರ್ಯ ಕೈಗೊಳ್ಳಬಹುದು. ಈ ಸಂಪರ್ಕ ಜಾಲಗಳಿಗೆ ಒಂದರಿಂದ ಮತ್ತೊಂದಕ್ಕೆ ತೊಂದರೆಯಾಗದಂತೆ ಸಂಪರ್ಕ ಕಲ್ಪಿಸಿದ್ದು, ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಜಾಲಗಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗುವುದು.
ಸ್ಮಾರ್ಟ್ ರಸ್ತೆಗಳ ವಿಶೇಷತೆ:/
ಸ್ಮಾರ್ಟ್ ಸಿಟಿ ಲಿಮಿಟೆಡ್ ಕೈಗೊಂಡಿರುವ ನಗರದ ಸ್ಮಾರ್ಟ್ ರಸ್ತೆಗಳು ಟೆಂಡರ್ ಶ್ಯೂರ್ ವಿನ್ಯಾಸದೊಂದಿಗೆ ಪಾದಚಾರಿಗಳಿಗೆ ಸಮರ್ಪಕವಾದ ಫುಟ್‍ಪಾತ್ ಸೌಲಭ್ಯ, ಸೈಕಲ್‍ಗಳಿಗೆ ಪ್ರತ್ಯೇಕ ಮಾರ್ಗ, ದೊಡ್ಡ ವಾಹನ/ ಮಧ್ಯಮ ಗಾತ್ರದ ವಾಹನ/ ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್, ಮಾರ್ಗ ಮಧ್ಯದಲ್ಲಿ ವಾಹನಗಳು ರಸ್ತೆಗೆ ನುಗ್ಗದಂತೆ ತಡೆ ನಿರ್ಮಾಣ, ಇ-ಶೌಚಗೃಹ, ಸ್ಮಾರ್ಟ್ ಬಳಸುವ ಸೈಕಲ್ ಮತ್ತು ಇ-ಆಟೋ ನಿಲುಗಡೆ, ಕುಡಿಯುವ ನೀರಿನ ಘಟಕ, ಎಟಿಎಂ, ಸೆನ್ಸಾರ್ ಆಧರಿತ ಡಸ್ಟ್‍ಬಿನ್, ಮೊದಲಾದ ವಿಶೇಷಗಳನ್ನು ಸ್ಮಾರ್ಟ್ ರಸ್ತೆಗಳು ಹೊಂದಿವೆ.
ಪಾದಚಾರಿ ಮಾರ್ಗ ನೆಲಮಟ್ಟಕ್ಕಿಂತ ಎತ್ತರವಾಗಿದ್ದರೆ, ಸೈಕಲ್ ಮಾರ್ಗ ತುಸು ಕೆಳಗಿರುತ್ತದೆ. ಮಳೆನೀರು ಯಾವುದೇ ಅಡೆತಡೆ ಇಲ್ಲದಂತೆ ಹರಿದು ಹೋಗುವಂತೆ ಯೋಜನೆ ರೂಪಿಸಲಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಪಾದಚಾರಿ ಮಾರ್ಗ, ಯುಟಿಲಿಟಿ ಡಕ್ಟ್, ಬಸ್ ಬೇ, ರಸ್ತೆ ಬದಿ ವ್ಯಾಪಾರದ ಸ್ಥಳಗಳೆಲ್ಲವನ್ನೂ ಅಂತರಾಷ್ಟ್ರೀಯ ಗುಣಮಟ್ಟದಲ್ಲಿರುವಂತೆ ನಿರ್ಮಿಸಲಾಗುವುದು.
ಇದರಿಂದ ರಸ್ತೆಗಳ ಬೇಕಾಬಿಟ್ಟಿ ಅಗೆತವನ್ನು ತಡೆದು ಸುಸ್ಥಿತಿಯನ್ನು ಕಾಯ್ದುಕೊಳ್ಳಲು ಪೂರಕವಾಗಲಿದೆ.
ಹೈಟೆಕ್ ತುಮಕೂರು:
ಕಲ್ಪತರು ನಾಡು ಎಂದೇ ಖ್ಯಾತಿ ಗಳಿಸಿರುವ ತುಮಕೂರು ನಗರಿ ಮತ್ತಷ್ಟು ಹೈಟಕ್ ಆಗಲಿದೆ. ಬೆಂಗಳೂರಿನ ಭವಿಷ್ಯದ ಉಪನಗರಿಯಾಗಲು ತುಮಕೂರು ನಗರ ಎಲ್ಲ ರೀತಿಯಲ್ಲೂ ‘ಸ್ಮಾರ್ಟ್’ ಆಗಲು ಸಜ್ಜಾಗುತ್ತಿದೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ಸ್ಮಾರ್ಟ್ ಸಿಟಿ ಯೋಜನೆ ಅಡಿ ನಗರದ 17 ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕೈಗೆತ್ತಿಕೊಂಡಿರುವ ಸ್ಮಾರ್ಟ್ ರಸ್ತೆಗಳ ಪಟ್ಟಿಗೆ ಮತ್ತಷ್ಟು ರಸ್ತೆಗಳು ಸೇಪರ್ಡೆಯಾಗಲಿವೆ.
ಹೊಸರೂಪ ಪಡೆಯುತ್ತಿರುವ ಈ ಎಲ್ಲ ರಸ್ತೆಗಳು ಒಟ್ಟು 14.75 ಕಿ.ಮೀ. ಉದ್ದವಿದ್ದು, 150.69 ಕೋಟಿ ರೂ. ವೆಚ್ಚದ 5 ಪ್ಯಾಕೇಜ್‍ಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಕಾಮಗಾರಿ ಪೂರೈಸಲು 12 ತಿಂಗಳ ಕಾಲಾವಕಾಶ ನಿಗಧಿ ಮಾಡಲಾಗಿದೆ.
ಈ ರಸ್ತೆಗಳು ಸ್ಮಾರ್ಟ್ ರಸ್ತೆಯಾದ ಬಳಿಕ, ಸಂಚಾರ ವ್ಯವಸ್ಥೆಯ ದಿಕ್ಕನ್ನು ಬದಲಾಯಿಸಲಿದ್ದು , ಸ್ಮಾರ್ಟ್ ರಸ್ತೆಯಿಂದ “ಝೀರೊ ಟ್ರಾಫಿಕ್ ಜಾಮ್” ಆಗಲಿದೆ ಎಂದು ಸ್ಮಾರ್ಟ್ ಸಿಟಿ ಪಿಎಂಸಿಯ ತಾಂತ್ರಿಕ ತಜ್ಞ ಪಿ.ಕೆ ಸೈನಿ ತಿಳಿಸಿದ್ದಾರೆ.
ಸ್ಮಾರ್ಟ್ ಆಗಲಿರುವ ರಸ್ತೆಗಳು:
ಪೈಲೆಟ್ ಪ್ರಾಜೆಕ್ಟ್ ಆಗಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯನ್ನು ಸ್ಮಾರ್ಟ್ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಪ್ಯಾಕೇಜ್-1ರಲ್ಲಿ ಜೆಸಿ ರಸ್ತೆ, ಎಂಜಿ ರಸ್ತೆ, ವಿವೇಕಾನಂದ ರಸ್ತೆ, ಹೊರಪೇಟೆ ರಸ್ತೆ ಹಾಗೂ ಪ್ಯಾಕೇಜ್-2ರಲ್ಲಿ ಮಂಡಿಪೇಟೆ ರಸ್ತೆ, ಮಂಡಿಪೇಟೆ ಒಂದು ಮತ್ತು ಎರಡನೇ ರಸ್ತೆಗಳು, ಖಾಸಗಿ ಬಸ್ ನಿಲ್ದಾಣ ರಸ್ತೆ, ಬಸ್ ನಿಲ್ದಾಣ ಉತ್ತರ ಹಾಗೂ ದಕ್ಷಿಣ ದಿಕ್ಕಿನ ರಸ್ತೆಗಳು, ಮಹಾವೀರ್ ಜೈನ್ ಭವನ್ (ರೈಲ್ವೇ ಸ್ಟೇಷನ್) ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ನಂತರದ ಹಂತಗಳಲ್ಲಿ ಅಶೋಕ ರಸ್ತೆ, ಡೀಸಿ ಕಚೇರಿ ರಸ್ತೆ, ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ, ಡಾ. ರಾಧಾಕೃಷ್ಣನ್ ರಸ್ತೆ, ಬೆಳಗುಂಬ ರಸ್ತೆ ಹಾಗೂ ಬಿಹೆಚ್ ರಸ್ತೆಯನ್ನು ಸ್ಮಾರ್ಟ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಹಲವೆಡೆ ಕಾಮಗಾರಿ ಆರಂಭವಾಗಿವೆ.
ಪ್ರಸ್ತುತ ವಿವಿಧ ರಸ್ತೆಗಳಲ್ಲಿ ಯುಟಿಲಿಟಿ ಡಕ್ಟ್ ನಿರ್ಮಾಣದ ಕೆಲಸ ಆರಂಭವಾಗಿದ್ದು, ಇದರಿಂದ ಸದರಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ.
ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ.
ವಿಳಂಬ ಮಾಡಲಾಗುತ್ತಿದೆ ಎಂಬುದು ನಾಗರೀಕರಿಂದ ದೂರುಗಳು ಕೇಳಿ ಬರುತ್ತಿವೆ. ಕಾಮಗಾರಿಯಿಂದ ಸಾರ್ವಜನಿಕರಿಗೆ ತಾತ್ಕಾಲಿಕ ತೊಂದರೆ ಆಗಬಹುದು. ಸ್ಮಾರ್ಟ್ ರಸ್ತೆಗಳ ಯಶಸ್ವಿ ಅನುಷ್ಠಾನದ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಬೇಕೆಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಮನವಿ ಮಾಡಿದ್ದಾರೆ.