ತುಮಕೂರು:
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ಪಾವಗಡ ತಾಲ್ಲೂಕಿನ ಕಣಿವೆಹಳ್ಳಿ ಗೇಟ್‍ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿ ನಿಲಯದ ಕೊಠಡಿಗಳು, ಭೋಜನಾ ಮಂದಿರ, ಅಡಿಗೆ ಮನೆ ಸ್ವಚ್ಛತೆ ಹಾಗೂ ಮಕ್ಕಳಿಗೆ ವಿತರಿಸಲು ತಯಾರಿಸಲಾಗುತ್ತಿದ್ದ ಆಹಾರದ ಪದಾರ್ಥಗಳ ಶುಚಿ-ರುಚಿಯನ್ನು ಪರಿಶೀಲನೆ ನಡೆಸಿದರು.
ವಸತಿ ಶಾಲೆಯಲ್ಲಿ ಅಡಿಗೆ ಮನೆ ಹಾಗೂ ಶೌಚಾಲಯಗಳ ಸ್ವಚ್ಛತೆ, ಮಕ್ಕಳಿಗೆ ವಿತರಿಸಲಾಗಿರುವ ಕೊಠಡಿಗಳನ್ನು ಸುಸ್ಥಿತಿಯಲ್ಲಿಟ್ಟಿಲ್ಲದಿರುವ ಬಗ್ಗೆ ಪರಿಶೀಲಿಸಿ ಕೂಡಲೇ ಸ್ವಚ್ಛಗೊಳಿಸಲು ಮತ್ತು ಪ್ರತಿದಿನ ಸ್ವಚ್ಛವಾಗಿಡಲು ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಿದರು. ಮಕ್ಕಳಿಗೆ ಕುಡಿಯಲುಶುದ್ಧ ನೀರನ್ನೇ ಪೂರೈಸಬೇಕಲ್ಲದೆ ಅಡಿಗೆಗೂ ಶುದ್ಧ ನೀರನ್ನೇ ಬಳಸಲು ಸೂಚಿಸಲಾಯಿತು. ನಂತರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ನಿಲಯದಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಸೂಚಿಸಿದರು.
ವಸತಿ ಶಾಲೆಯ ಮುಖ್ಯೋಫಾಧ್ಯಾಯರು ಮತ್ತು ಎಲ್ಲಾ ಉಪಾಧ್ಯಾಯರೊಂದಿಗೆ ಚರ್ಚಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ, ಉತ್ತಮವಾಗಿ ಭೋದನೆ ಮಾಡಬೇಕು. ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ತರಗತಿಗಳನ್ನು ನಡೆಸಬೇಕು. ಮಕ್ಕಳ ಆಟೋಟಗಳ ಬಗ್ಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದರಲ್ಲದೆ ಉಪಾಧ್ಯಾಯರುಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವುದಾಗಿ ಭರವಸೆ ನೀಡಿದರು.