ತುಮಕೂರು:

      ಜಿಲ್ಲೆಯ ಜನರಿಗೆ ಮೊದಲು ಕುಡಿಯುವ ನೀರು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ತಿಳಿಸಿದರು.

      ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಡೆದ ಹೇಮಾವತಿ ನಾಲೆಯಿಂದ ನೀರು ಹರಿಸುವ ಕುರಿತು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸೆಪ್ಟಂಬರ್ 1ರಿಂದ ಡಿಸೆಂಬರ್ 15ರವರೆಗೆ ಜಿಲ್ಲೆಯ ಕುಡಿಯುವ ನೀರಿನ ಕೆರೆಗಳಿಗೆ ನೀರು ಹರಿಸಲಾಗುವುದು. ಸೆಪ್ಟೆಂಬರ್ 1 ರಿಂದ ಸಿ.ಎಸ್.ಪುರ ಕೆರೆಗೆ ನೀರು ಹರಿಸುವ ಮೂಲಕ ಆರಂಭಿಸಲಾಗುವುದು. ಗುಬ್ಬಿ ತಾಲೂಕಿನ ಸಿ.ಎಸ್ ಪುರ ಹಾಗೂ ಇಡಗೂರು ವ್ಯಾಲಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಸುವಂತೆ ಹೇಮಾವತಿ ನಾಲಾ ಇಂಜಿನಿಯರ್ ಬಾಲಕೃಷ್ಣ ಅವರಿಗೆ ಸಚಿವರು ಸೂಚಿಸಿದರು.

      ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ಗೂಳೂರು ಕೆರೆಗೆ ನೀರು ಹರಿಸಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನಾಗವಲ್ಲಿ ಕೆರೆಗೆ ಈಗಾಗಲೇ ನೀರು ಹರಿಯುತ್ತಿದ್ದು, ಗೂಳೂರು ಕೆರೆಯಲ್ಲಿರುವ ಪೈಪ್‍ಲೈನ್ ಸರಿಪಡಿಸಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

      ಶಿರಾ ಶಾಸಕ ಸತ್ಯನಾರಾಯಣ ಮಾತನಾಡಿ ಶಿರಾ ತಾಲೂಕಿನಲ್ಲಿ ಜನರು ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ. ಇವತ್ತಿನವರೆಗೂ ಸಹ ಕಾಲುವೆಗೆ ನೀರು ಹರಿಸಿಲ್ಲ. ತಾಲೂಕುವಾರು ನೀರು ಹಂಚಿಕೆಯ ಆಧಾರದ ಮೇಲೆ ನೀರು ಬಿಟ್ಟರೆ 7 ತಾಲೂಕಿನ ಕೆರೆಗಳು ಭರ್ತಿಯಾದ ನಂತರವೇ ಶಿರಾ ತಾಲೂಕಿಗೆ ನೀರು ಹರಿಯುತ್ತದೆ. ಇದರಿಂದ ಶಿರಾ ತಾಲೂಕಿನ ಕೆರೆ-ಕಟ್ಟೆಗಳು ತುಂಬುವುದಿಲ್ಲ. ಆದ್ದರಿಂದ ವಾರದಲ್ಲಿ 3 ದಿನ ನಮ್ಮ ತಾಲೂಕಿಗೆ ನೀರು ಬಿಡಬೇಕು ಎಂದು ಆಗ್ರಹಿಸಿದರು.

      ಶಿರಾ ತಾಲೂಕಿಗೆ ಸೆಪ್ಟಂಬರ್ 11ರಿಂದ 15 ದಿನಗಳವರೆಗೆ ಕುಡಿಯುವ ನೀರು ಹರಿಸಲು ಯೋಜಿಸಲಾಗಿತ್ತು. ಆದರೆ 26 ಕಿ.ಮೀ. ಅಂತರವಿರುವುರಿದಂದ ಮತ್ತೊಮ್ಮೆ ನೀರು ಹರಿಸುವುದರಿಂದ ಕಾಲುವೆಯಲ್ಲಿ ನೀರು ಹೆಚ್ಚು ಪೋಲಾಗಲಿದೆ. ಆದುದರಿಂದ ಸೆ.11 ರಿಂದ ಅ.20 ರವರೆಗೆ 15 ದಿನಗಳ ಬದಲಿಗೆ 20 ದಿನಗಳ ಕಾಲ ನೀರು ಹರಿಸಲಾಗುವುದು. ಇದರಿಂದ ಶಿರಾ ತಾಲೂಕಿನ ಕಳ್ಳಂಬೆಳ್ಳ, ಮಧುಗಿರಿ, ಕೊರಟಗೆರೆ ತಾಲೂಕಿನ ಕೆರೆ-ಕಟ್ಟೆಗಳು ಭರ್ತಿಯಾಗಿ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದು ಎಂದು ಸಚಿವರು ತಿಳಿಸಿದರು.

      ತಾಲೂಕುವಾರು ಹಂಚಿಕೆಯಾಗಿರುವ ನೀರನ್ನು ಡಿಸೆಂಬರ್ ಮಾಹೆಯೊಳಗಾಗಿ ಆಯಾ ತಾಲೂಕಿಗೆ ಸಮರ್ಪಕವಾಗಿ ಹರಿಸಬೇಕು. ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಬೇಕು. ನೀರು ಹರಿಸುವ ಮೊದಲ ಹಂತದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ನಂತರ ಜಾನುವಾರು-ಕೃಷಿ ಚಟುವಟಿಕೆ ಕಾರ್ಯಗಳಿಗೆ ನೀರು ಹರಿಸಬೇಕೆಂದರಲ್ಲದೇ ಚಿಕ್ಕನಾಯನಕನಹಳ್ಳಿ ತಾಲೂಕಿನ ದಬ್ಬೆಘಟ್ಟ ಕೆರೆಗೆ ಅಧಿಕೃತವಾಗಿ ಪೈಪ್‍ಲೈನ್ ಅಳವಡಿಸಿ ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಮಾತನಾಡಿ ನಾಲೆಗಳಿಗೆ ನೀರು ಹರಿಸಿದಾಗ ಕೆರೆ-ಕಟ್ಟೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಅಲ್ಲದೇ ಬುಗುಡನಹಳ್ಳಿ ಕೆರೆಗೆ ಕಾರಣಾಂತರದಿಂದ ಅನಿವಾರ್ಯವಾಗಿ ನೀರು ಹರಿಯುವ ಕಾರ್ಯ ಸ್ಥಗಿತಗೊಂಡರೆ ಎಲ್ಲಾ ಶಾಸಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

      ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ 25.3 ಟಿಎಂಸಿ ನೀರು ಹಂಚಿಕೆಯಾಗಿದ್ದು, ಇಲ್ಲಿಯವರೆಗೂ ಅಷ್ಟೇ ನೀರು ಹೇಮಾವತಿ ನಾಲೆಯ ಗೋರೂರು ಜಲಾಶಯದಿಂದ ಈ ಬಾರಿ ಅಷ್ಟೇ ನೀರು ಹರಿಯಬಹುದು ಎಂಬ ನಂಬಿಕೆ ಇದೆ. ಇಲ್ಲಿಯವರೆಗೂ 2 ರಿಂದ 2.5 ಟಿಎಂಸಿ ನೀರು ಹರಿದಿದೆ ಎಂದರು.
ಎತ್ತಿನಹೊಳೆಯಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ತಾಲ್ಲೂಕಿಗೆ ನೀರು ಹಂಚಿಕೆಯಾಗಿದೆ. ನಾಲೆ ನೀರು ಹರಿಯುವ ಸುತ್ತಮುತ್ತಲಿನ ಕೆರೆಗಳಿಗೆ ನೀರು ಹರಿಸಬೇಕೆಂದು ನಮ್ಮ ಒತ್ತಾಯವಾಗಿದೆ. ಈ ಕುರಿತಂತೆ ಬೃಹತ್ ನೀರಾವರಿ ಇಲಾಖೆಯ ಅಧಿಕಾರಿಗಳು ವರ್ಕ್‍ಔಟ್ ಮಾಡುತ್ತಾರೆ. ಅವರಿಂದ ಸಾಧ್ಯವಾಗದಿದ್ದರೆ ಸಣ್ಣ ನೀರಾವರಿ ಇಲಾಖೆಯಿಂದ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

      ಸಭೆಯಲ್ಲಿ ಸಂಸದರಾದ ಜಿ.ಎಸ್.ಬಸವರಾಜು ಹಾಗೂ ನಾರಾಯಣಸ್ವಾಮಿ, ಶಾಸಕರಾದ ಮಸಾಲೆ ಜಯರಾಮ್, ವೀರಭದ್ರಯ್ಯ, ಬಿ.ಸಿ.ನಾಗೇಶ್, ಜ್ಯೋತಿಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೇರಿದಂತೆ ಹೇಮಾವತಿ ನಾಲಾ ಮುಖ್ಯ ಇಂಜಿನಿಯರ್ ಬಾಲಕೃಷ್ಣ ಸೇರಿದಂತೆ ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದರು.

 

(Visited 40 times, 1 visits today)
FacebookTwitterInstagramFacebook MessengerEmailSMSTelegramWhatsapp