ತುಮಕೂರು :
ಸ್ಮಾರ್ಟ್‍ಸಿಟಿ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಹಣವನ್ನು ಸಾರ್ವಜನಿಕವಾಗಿ ಸದುಪಯೋಗವಾಗುವಂತೆ ಅಧಿಕಾರಿಗಳು ಬಳಸಬೇಕು ಎಂದು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು.
ನಗರದ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಸ್ಕಿಲ್ ಪಾರ್ಕ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಅಧಿಕಾರಿಗಳು ವ್ಯರ್ಥಮಾಡದೇ ನಗರದ ಅಭಿವೃದ್ಧಿಗೆ ಸದುಪಯೋಗಪಡಿಸಿ ತುಮಕೂರು ನಗರದ ಚಿತ್ರಣವನ್ನು ಬದಲಾಯಿಸಿ ಉತ್ತಮ ನಗರವನ್ನಾಗಿ ನಿರ್ಮಿಸಬೇಕು ಎಂದು ಅವರು ಹೇಳಿದರು.
ಈ ಹಿಂದೆ ಐದು ವರ್ಷಗಳ ಕಾಲ ಸಂಸತ್‍ನ ಸದಸ್ಯನಾಗಿದ್ದಾಗ ತುಮಕೂರು ನಗರವನ್ನು ಇಂಡಸ್ಟ್ರಿಯಲ್ ಹಬ್ ಮಾಡಬೇಕೆಂಬ ಹಂಬಲವಿತ್ತು. ಆದರೆ ಅದು ಆಗ ಕೈಗೂಡಲಿಲ್ಲ. ತುಮಕೂರು ನಗರ ಬೆಂಗಳೂರಿಗೆ ಮುಖ್ಯದ್ವಾರವಾಗಿದ್ದು, ಕೈಗಾರಿಕೀಕರಣದ ಕೇಂದ್ರೀಯ ಸ್ಥಾನವನ್ನಾಗಿ ಮಾರ್ಪಾಡು ಮಾಡಬೇಕು. ವಿದೇಶಿಯರಿಗೆ 100 ಎಕರೆ ಜಮೀನು ಕೊಟ್ಟು ಅವಕಾಶ ನೀಡುವುದಕ್ಕಿಂತ ಸ್ಥಳೀಯರನ್ನು ಗುರ್ತಿಸಿ 2 ಅಥವಾ 5 ಎಕರೆ ಜಮೀನು ಕೊಟ್ಟು ತರಬೇತಿ ನೀಡಿ ತಂತ್ರಜ್ಞಾನ ಬಳಸುವಂತೆ ಮಾಡಿದರೆ ನಮ್ಮ ಜಿಲ್ಲೆಯ ಮಧ್ಯಮ ವರ್ಗದವರು ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿದರು.
ಇಂದು ರೈತ ತಾನು ಬೆಳೆಯುವ ಬೆಳೆಗಳ ರೋಗಗಳ ಬಗ್ಗೆ ಅರಿವಿಲ್ಲದೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾನೆ. ಆದರೆ ಈ ರೀತಿಯಾಗದಂತೆ ಬೆಳೆಗಳಿಗೆ ಹರಡುವ ರೋಗಗಳ ಬಗ್ಗೆ ಅವುಗಳನ್ನು ನಿವಾರಿಸುವ ಸೂಕ್ತ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ರೈತರೇ ಬೆಳೆಯ ರೋಗಗಳನ್ನು ಪತ್ತೆಹಚ್ಚಿ ಔಷಧಿ ಸಿಂಪಡಣೆ ಮಾಡುವಂತೆ ತರಬೇತಿ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಬಗೆಹರಿದಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿರುವ ಜಿಲ್ಲೆ ಇದ್ದರೆ ಅದು ತುಮಕೂರು ಮಾತ್ರ. ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಜೊತೆಗೆ ಎತ್ತಿನಹೊಳೆ ಕೂಡ ಸೇರಿಕೊಳ್ಳಲಿದೆ. ಒಂದು ದಿನವೂ ನಿಲ್ಲಿಸದೇ ಇದೇ ಡಿಸೆಂಬರ್ 31ರವರೆಗೆ ನೀರು ಬಿಡಬೇಕೆಂಬ ಕಟ್ಟುನಿಟ್ಟಿನ ಆಜ್ಞೆ ಇದೆ. ಅದೆ ಪ್ರಕಾರವಾಗಿ ನೀರು ಬಂದರೆ ನಮ್ಮ ಕೆರೆಗಳೆಲ್ಲವೂ ತುಂಬುತ್ತವೆ ಎಂದು ಹೇಳಿದರು.
ನಮ್ಮ ಜಿಲ್ಲೆ ಚಿಕ್ಕದು, ಜನಸಂಖ್ಯೆ ಕಡಿಮೆ ಇದೆ ಎಂದು ತುಂಬಾ ಶ್ರಮಪಟ್ಟು ನಾನು ಜಿಲ್ಲೆಯನ್ನು ಸ್ಮಾರ್ಟ್‍ಸಿಟಿಗೆ ಸೇರಿಸಿದೆ. ನಗರಪಾಲಿಕೆಯ ಆಯುಕ್ತರು ಕಟ್ಟುನಿಟ್ಟಿನಿಂದ ಕೆಲಸ ಮಾಡುತ್ತಿದ್ದು, ತುಮಕೂರು ನಗರವನ್ನು ಸ್ಮಾರ್ಟ್‍ಸಿಟಿ ಮಾಡಲು ಉತ್ತಮ ಹೆಜ್ಜೆ ಇಟ್ಟಿದ್ದಾರೆ. ನಾವು ಅವರಿಗೆ ಪ್ರೋತ್ಸಾಹ ನೀಡಬೇಕು. ನಾನು ಸಹ ಕೇಂದ್ರದಿಂದ ಆಗಬೇಕಾಗಿರುವ ಸಹಾಯವನ್ನು ಮಾಡುತ್ತೇನೆ ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಲು ಸದಾ ನನ್ನ ಪ್ರೋತ್ಸಾಹವಿದೆ.
ನಗರೀಕರಣ ಒಬ್ಬರಿಂದ ಆಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕರೂ ಸಹ ಇದರಲ್ಲಿ ತೊಡಗಿಕೊಳ್ಳಬೇಕು ಎಂದರಲ್ಲದೆ, ಗಿಡಮರಗಳನ್ನು ಕಡಿಯದಂತೆ ಜನರಿಗೆ ಅರಿವು ಮೂಡಿಸಬೇಕು. ಎಷ್ಟು ಸಾಧ್ಯವೋ ಅಷ್ಟು ಗಿಡಮರಗಳನ್ನು ಬೆಳೆಸಬೇಕು. ವಾರ್ಡ್‍ಗಳಲ್ಲಿ ಭಾನುವಾರದಂದು ಗಿಡ-ಮರಗಳನ್ನು ನೆಡುವ ಕೆಲಸ ಮಾಡೋಣ. 3 ವರ್ಷ ನಾವು ಗಿಡ ನೆಟ್ಟು ನೋಡಿಕೊಂಡರೆ ಅದು 300 ವರ್ಷ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.
ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಯಾವ ಊರಿಗೆ ಹೋದರೂ ಒಂದು ಪಾರ್ಕ್ ಮಾಡಿ ಎಂದು ಹೇಳುತ್ತಿದ್ದರು. ಅವರ ಕಾಲದಲ್ಲಿ ಮಾಡಿದಂತಹ ಪಾರ್ಕ್‍ಗಳು, ಬಡಾವಣೆಗಳನ್ನು ಇಂದು ಯಾರು ಮಾಡಲು ಸಾಧ್ಯವಿಲ್ಲ ಅವರಿಗೆ ಒಂದು ದೃಷ್ಠಿಕೋನ ಇತ್ತು ಎಂದು ಅವರು ಹೇಳಿದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಸ್ಕಿಲ್ ಎಂಬ ಪದ ಇಂದು ಒಂದು ಫ್ಯಾಷನ್ ವರ್ಡ್ ಆಗಿದೆ. ಕೇವಲ ಹೆಸರಿಗೆ ಮಾತ್ರ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಯಕ್ರಮಗಳನ್ನು ಮಾಡಿ ಕೈ ಬಿಡುವ ಕೆಲಸವಾಗುತ್ತಿದೆ. ಅದನ್ನು ಫಾಲೋ ಅಪ್ ಮಾಡುವ ಕೆಲಸವನ್ನು ಯಾರು ಮಾಡುತ್ತಿಲ್ಲ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಸ್ಕಿಲ್ ಪಾರ್ಕ್ ಅಡಿಯಲ್ಲಿ ನಾವು ಆಗ್ರೊಬೇಸ್ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸ್ಟಾರ್ಟ್‍ಅಪ್ ಕಂಪನಿಗೆ ಹೆಚ್ಚಿನ ಉತ್ತೇಜನ ಕೊಡಬೇಕು. ಸ್ಕಿಲ್ ಪಾರ್ಕ್‍ನಲ್ಲಿ ನಗರದ ಸಾಮಾನ್ಯ ಜನರಿಗೆ ಉಪಯೋಗವಾಗುವ ತಂತ್ರಜ್ಞಾನವನ್ನು ಬಳಸಿ, ಅವರಿಗೆ ತರಬೇತಿ ನೀಡಿ ತಂತ್ರಜ್ಞಾನವನ್ನು ಅವರೇ ಬಳಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು. ಸರ್ಕಾರಿ ಯೋಜನೆಗಳಲ್ಲಿ ಇಂದು ಹೆಚ್ಚಿನದಾಗಿ ಕಳಪೆ ಕಾರ್ಯ ನಡೆಯುತ್ತಿದೆ ಆದರೆ ಆ ರೀತಿ ಆಗದೆ ಜಿಲ್ಲೆಯ ಮಧ್ಯಮ ವರ್ಗದ ಜನರಿಗೆ ಉದ್ಯೋಗ ನೀಡಿ ಅವರನ್ನು ಉದ್ಯೋಗಶೀಲರಾಗುವಂತೆ ಮಾಡಬೇಕು ಎಂದರು.
ರೈತರು ಕಡಿಮೆ ಬಂಡವಾಳವನ್ನು ಹಾಕಿ ಹೆಚ್ಚಿನ ಲಾಭ ಪಡೆಯುವ ತಂತ್ರಜ್ಞಾನ ಬಳಸುವಂತೆ ಮಾಡಬೇಕು. ಯಾವುದೇ ರೀತಿಯ ಕಳಪೆ ಇಲ್ಲದೇ ಆಗ್ರೊ ಬೇಸನ್ನು ಪ್ರತ್ಯೇಕ ಸ್ಕಿಲ್ ಪಾರ್ಕ್ ಮಾಡಿ ಜಿಲ್ಲೆಯ ಜನರಿಗೆ ಉಪಯೋಗವಾಗುವಂತೆ ಮಾಡುವುದು ಸ್ಕಿಲ್ ಸಿಟಿಯ ಉದ್ದೇಶವಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಸ್ಕಿಲ್ ಯೋಜನೆಗಳ ಬಗ್ಗೆ ಪಿಪಿಟಿ ಪ್ರದರ್ಶನ ನೀಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಸ್ಮಾರ್ಟ್‍ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್, ಅಭಿವೃದ್ಧಿ ರೆಸಲ್ಯೂಷನ್‍ನ ಕುಂದರಹಳ್ಳಿ ರಮೇಶ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.