ಗುಬ್ಬಿ :
ಸರ್ಕಾರಿ ಬಸ್ ಮತ್ತು ದ್ವಿಚಕ್ರವಾಹನ ಮುಖಾಮುಖಿ ಡಿಕ್ಕಿ ಸಂಭವಿಸಿ ದಂಪತಿ ಸಾವನ್ನಪ್ಪಿದ ಧಾರುಣ ಘಟನೆ ಬುಧವಾರ ಮುಂಜಾನೆ ತಾಲ್ಲೂಕಿನ ಎಚ್.ಎಚ್.ಗೇಟ್ ಪೆಟ್ರೋಲ್ ಬಂಕ್ ಬಳಿಯ ರಾ.ಹೆ.206 ರಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ದೊಡ್ಡಎಣ್ಣೆಗೆರೆ ಗ್ರಾಮದ ದಂಪತಿ ಈಶ್ವರಯ್ಯ(35) ಮತ್ತು ಗಾಯತ್ರಿದೇವಿ(30) ಮೃತಪಟ್ಟವರು. ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಈಶ್ವರಯ್ಯ ಕುಟುಂಬ ಸಮೇತ ತಮ್ಮ ಸ್ವಗ್ರಾಮದಿಂದ ಹಬ್ಬ ಮುಗಿಸಿ ಮರಳಿ ಬೆಂಗಳೂರಿನತ್ತ ಬೈಕ್‍ನಲ್ಲಿ ಸಾಗುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ತುಮಕೂರಿನಿಂದ ಮಡಿಕೇರಿಯತ್ತ ಸಾಗಿದ್ದ ಸರ್ಕಾರಿ ಬಸ್ ನೇರ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಈಶ್ವರಯ್ಯ ಸಾವನ್ನಪ್ಪಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದ ಗಾಯತ್ರಿದೇವಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
9 ವರ್ಷದ ಕೀರ್ತಿ ಎಂಬ ಪುತ್ರ ಅದೃಷ್ಟವಶಾತ್ ಗಾಯಗಳಿಂದ ಬದುಕುಳಿದಿದ್ದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.