ಮಧುಗಿರಿ :
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಗುರುವಾರ ಡಿಕೆಶಿ ಅಭಿಮಾನಿ ಬಳಗ ಮತ್ತು ಕನ್ನಡ ಜಾಗೃತಿ ವೇದಿಕೆ ವತಿಯಿಂದ ಕರೆ ನೀಡಿದ್ದ ಮಧುಗಿರಿ ಬಂದ್ ಬಾಗಶಃ ಯಶಸ್ವಿಯಾಗಿದೆ.
ಬೆಳಗ್ಗೆ 8 ಗಂಟೆಯಿಂದಲೇ ಡಿಕೆಶಿ ಅಭಿಮಾನಿಗಳು ಮತ್ತು ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಪಟ್ಟಣದಾಧ್ಯಂತ ಸಂಚರಿಸಿ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಿ ಬಂದ್ ಸಹಕರಿಸುವಂತೆ ಮನವಿ ಸಲ್ಲಿಸಿ ಕೇಂದ್ರ ಸರ್ಕಾರದ ವಿರುದ್ದ ಘೋಷನೆ ಕೂಗಿದರು.
ಸಣ್ಣಪುಟ್ಟ ಕೇರಿಗಳಲ್ಲಿ ಅಂಗಡಿಗಳು ತೆರೆದಿರುವುದು ಹೊರತುಪಡಿಸಿದರೆ ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು. ವಾಹನ ಸಂಚಾರವೂ ವಿರಳವಾಗಿತ್ತು. ನಂತರ ಪಟ್ಟಣದ ಡೂಂ ಲೈಟ್ ವೃತ್ತದಲ್ಲಿ ಜಮಾಯಿಸಿ ಡಿಕೆಶಿ ಬಂಧನದ ವಿರುದ್ದ ಕಿಡಿ ಕಾರಿದರು.
ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಮಾಜಿ ಸಚಿವ ಡಿಕೆ.ಶಿವಕುಮಾರ್ರವರನ್ನು ತಕ್ಷಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ್ ಬಾಬು, ಎಸ್. ಮೋಹನ್, ಪಕೋಡಿ ರಂಗ, ರಾಜ, ದೇವರಾಜು, ವೆಂಟಾಪುರ ಗೋವಿಂದ ಜಡೇಗೊಂಡನಹಳ್ಳಿ ಸತೀಶ ಇತರರು ಇದ್ದರು.