ತುಮಕೂರು:

      ಜಿಲ್ಲೆಯನ್ನು ಭವಿಷ್ಯದಲ್ಲಿ ಕ್ರೀಡಾ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಕರ್ನಾಟಕ ಸ್ಟೋಟ್ರ್ಸ್ ಕೋ ಆರ್ಡಿನೇಟ್ ಕಮಿಟಿ ವತಿಯಿಂದ ಕ್ರೀಡಾಸಕ್ತ ಯುವಜನರ ಸಭೆಯನ್ನು ನಗರದ ಉಡ್‍ಲ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

     ಶಿರಾ ಗ್ರೆನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮಣಗೌಡ ಅವರು ಸಭೆಯನ್ನು ಉದ್ದೇಶಿಸಿ ಮೊದಲಿಗೆ ಮಾತನಾಡಿ, ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಪಾಷ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸ್ಟೋಟ್ರ್ಸ್ ಕೋ ಅರ್ಡಿನೇಟ್ ಕಮಿಟಿ ಯುವಜನರನ್ನು ಕ್ರೀಡೆಯತ್ತ ಸೆಳೆಯುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ.ಯುವಜನತೆ ಕ್ರೀಡೆಯತ್ತ ತೊಡಗಿ ಕೊಳ್ಳುವುದರಿಂದ ಸಮಾಜದಲ್ಲಿ ಸಮಾಜ ವಿದ್ರೋಹಿ ಕೃತ್ಯಗಳು ಕಡಿಮೆಯಾಗುವುದರ ಜೊತೆಗೆ,ಉತ್ತಮ ಪ್ರಜೆಗಳನ್ನು ದೇಶಕ್ಕೆ ನೀಡಬಹುದು. ಈ ನಿಟ್ಟಿನಲ್ಲಿ ಯುವಜನರಿಗೆ ಇದೊಂದು ಒಳ್ಳೆಯ ವೇದಿಕೆ.ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

      ಸಭೆಯ ಅಧ್ಯಕ್ಷತೆ ವಹಿಸಿದ್ದ ಮುನೀರ್ ಅಹಮದ್(ಅಮೇರಿಕಾ) ಅವರು ಮಾತನಾಡಿ,ಯುವಜನರು ಕ್ರೀಡೆಯಲ್ಲಿ ಸಾಧನೆ ಮಾಡಲು ಕೆ.ಎಸ್.ಸಿ.ಸಿ. ಒಂದು ಒಳ್ಳೆಯ ವೇದಿಕೆ.ಇಲ್ಲಿ ಕ್ರೀಡೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದ್ದು, ಯುವಜನರು ವೇದಿಕೆ ಸದಸ್ಯತ್ವ ಪಡೆದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಮನವಿ ಮಾಡಿದರು.

      ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಕಾರ್ಯದರ್ಶಿ ಹಾಗೂ ಉದ್ಯಮಿ ನವೀದ್‍ಬೇಗ್ ಮಾತನಾಡಿ,ಕಳೆದ ಆರು ವರ್ಷಗಳಿಂದ ತುಮಕೂರು ಜಿಲ್ಲೆಯನ್ನು ಕ್ರೀಡಾ ಹಬ್ ಆಗಿ ಪರಿವರ್ತಿಸಬೇಕು.ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಉದ್ದಿಮೆಗಳು ಹಾಗೂ ಅಂಕಣಗಳು ಇಲ್ಲಿ ಲಭ್ಯವಿರುವಂತಹ ವಾತಾವರಣ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಇದುವರೆಗೂ ಆಡಳಿತದ ನಡೆಸಿದ ಸರಕಾರಗಳ ಜೊತೆಗೆ ಪತ್ರವ್ಯವಹಾರ ನಡೆಸಲಾಗಿತ್ತು.ಇದರ ಪರಿಣಾಮ ಸಿದ್ದರಾಮಯ್ಯ ಸರಕಾರ ವಿದ್ದಾಗ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಸರಕಾರದಲ್ಲಿ ತುಮಕೂರು ಜಿಲ್ಲೆಗೆ ಕ್ರೀಡೆಗೆ ಉತ್ತೇಜನಕಾರಿ ಯಾದ ಯೋಜನೆಗಳನ್ನು ಬಜೆಟ್‍ನಲ್ಲಿ ಘೋಷಿಸಿದ್ದರು.ಆ ಘೋಷಣೆಗಳು ಕೇವಲ ಕಡತದಲ್ಲಿ ಉಳಿದಿವೆ. ಆದ್ದರಿಂದ ಯುವಜನರು ಕೆ.ಎಸ್.ಸಿ.ಸಿ. ಯೊಂದಿಗೆ ಕೈ ಜೋಡಿಸಿ,ಈ ಹಿಂದಿನ ಬಜೆಟ್ ಘೋಷಣೆಯಂತೆ ಜಿಲ್ಲೆಯನ್ನು ಕ್ರೀಡಾ ಹಬ್ ಆಗಿ ರೂಪಿಸಲು ಸರಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ತುಮಕೂರು ನಗರದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವೊಂದನ್ನು ಸಂಘಟಿಸುವ ಮೂಲಕ ಸರಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದರು.

      ಸಭೆಯಲ್ಲಿ ವಕೀಲರಾದ ಟಿ.ರಾಮಯ್ಯ,ಶ್ರೀಶಕ್ತಿಸಿಂಗ್, ಉದ್ಯಮಿಗಳಾದ ರಿಜ್ವಾನ್ ಪಾಷ,ನಿವೃತ್ತ ಅಧಿಕಾರಿ ಆಶೀಫ್, ವಕ್ಪ್ ಬೋರ್ಡ ನ ಅಬ್‍ಜಲ್ ಅಹಮದ್, ವಿನೋಧಕುಮಾರ್ ಮತ್ತಿತರರ ಮುಖಂಡರು ಭಾಗವಹಿಸಿದ್ದರು.

(Visited 22 times, 1 visits today)