ತುಮಕೂರು:
ಪ್ರಕೃತಿಯಲ್ಲಿ ಪ್ರತಿ ರೋಗಕ್ಕೂ, ರೋಗನಿರೋಧಕ ಶಕ್ತಿ ಇರುತ್ತದೆ, ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕಾದ ಹಾಗೂ ಬೆಳೆಸುವ ಮೂಲಕ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಕಾನೂನು ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಸಿದ್ಧಾರ್ಥ ತಾಂತ್ರಿಕ ಕಾಲೇಜಿನಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ ಮತ್ತು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಪ್ರದಾಯಿಕ ಪಶುಚಿಕಿತ್ಸೆ ವಿಷಯದ ಕುರಿತ ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಲು ಉತ್ಪಾದನೆ ರೈತರ ಉಪಕಸಬಾಗಿದ್ದು, ಪ್ರಮುಖ ಕಸುಬಿನಲ್ಲಿ ಹೂಡುತ್ತಿದ್ದ ಬಂಡವಾಳವನ್ನು ಕಡಿಮೆ ಮಾಡುತ್ತಿತ್ತು, ಗರಿಷ್ಠ ಬೆಲೆಯನ್ನು ಉಪಕಸುಬು ದೊರೆಕಿಸಿಕೊಡುತ್ತದೆ. ಹಾಗಾಗಿ ರೈತರಿಗೆ ಉಪಕಸುಬು ನೆಚ್ಚಿಕೊಂಡಿದ್ದಾರೆ, ತುಮಕೂರು ಜಿಲ್ಲೆ ಯಂತಹ ಅರೆ ಬರಪೀಡಿತ ಜಿಲ್ಲೆ 75 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿರುವುದು ಸಂತಸದ ವಿಚಾರವಾಗಿದ್ದು, ಹೈನು ಗಾರಿಕೆ ಲಾಭದಾಯಕವಾಗಬೇಕಾದರೆ, ಕೃತಕ ಗರ್ಭಧಾರಣೆಯಾಗಬೇಕು, ತಳಿ ಉನ್ನತೀಕರಣ ಮಾಡಬೇಕು ಎಂದು ಹೇಳಿದರು.
ಉತ್ಪಾದನಾ ವೆಚ್ಚ ಕಡಿಮೆಯಾದರೆ, ಲಾಭ ಹೆಚ್ಚಳವಾಗುತ್ತದೆ, ಅದಕ್ಕಾಗಿಯೇ ತುಮುಲ್‍ನಿಂದಾಗಿ ತಳಿಗಳನ್ನು ಸಾಕಲು ಅಗತ್ಯ ಔಷಧ ಮತ್ತು ಆಹಾರವನ್ನು ನೀಡಲಾಗುತ್ತಿತ್ತು, ಸೇವೆಯನ್ನು ಬಿಟ್ಟು ವ್ಯವಹಾರವಾದ ನಂತರ ಎಲ್ಲ ಉಚಿತ ಸೇವೆಗಳನ್ನು ನಿಲ್ಲಿಸಲಾಯಿತು, ದೇಶದ ಅಭಿವೃದ್ಧಿಗೆ ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳಬೇಕಿತ್ತು, ಆದರೆ ನಾವು ಅನುಕರಣೆಯಿಂದ ನಮ್ಮ ಮೂಲ ಉತ್ಪಾದಕರು ನಶಿಸಿದರು, ಅದು ನೇಯ್ಗೆ, ಹೈನುಗಾರಿಕೆಯನ್ನು ಅಪೋಶನ ತೆಗೆದುಕೊಂಡಿತು ಎಂದರು.
ಇಂಗ್ಲೀಷ್ ಔಷಧ ಮೊರೆ ಹೋಗುವ ಮೂಲಕ ನಮ್ಮ ಮೂಲವನ್ನು ನಾವೆಲ್ಲರೂ ಮರೆಯುತ್ತಿದ್ದೇವೆ, ರೋಗಕ್ಕೆ ಪ್ರತಿಯಾಗಿ ಔಷಧವೂ ಪ್ರಕೃತಿಯಲ್ಲಿ ದೊರೆಯುತ್ತದೆ ಹಾಗಾಗಿ ಹಿಂದಿನ ಕಾಲಘಟ್ಟಕ್ಕೆ ಮರಳಬೇಕಾದ ಸ್ಥಿತಿಯಲ್ಲಿದ್ದೇವೆ, ನಮ್ಮ ನಡುವೆ ಅನುಕರಣೆಯ ಮನೋಸ್ಥಿತಿಯಿಂದಾಗಿ ಇಂದು ಇಂಗ್ಲೀಷ್ ಔಷಧಕ್ಕೆ ಒತ್ತು ನೀಡುತ್ತಿದ್ದು, ಭಾರತೀಯ ಪರಂಪರೆಯಲ್ಲಿಯೇ ಸಿಗುವ ಪ್ರಕೃತಿ ದತ್ತವಾದ ಔಷಧಗಳನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಜೀವನ ಪದ್ಧತಿಯಲ್ಲಿಯೇ ಎಲ್ಲ ರೋಗಗಳಿಗೂ ಔಷಧವಿದ್ದರೂ, ಇಂದು ಅನುಕರಣೆಯಿಂದಾಗಿ ಅನಗತ್ಯ ತೊಂದರೆ ಗಳನ್ನು ತಂದುಕೊಂಡಿದ್ದೇವೆ, ಇದು ನಿರ್ದಿಷ್ಠ ರೋಗ ತನಿಖೆಯಲ್ಲ, ನಿರ್ದಿಷ್ಠ ರೋಗವನ್ನು ಪತ್ತೆ ಹಚ್ಚದ ಮೇಲೆ ಅದು ಹೋಮಿಯೋಪತಿಯೇ ಅಲ್ಲ ಎಂದರು, ಅನುಕರಣೆಯಿಂದಾಗಿ ನಶಿಸಿರುವ ಪದ್ಧತಿಯನ್ನು ಮತ್ತೆ ಪುನರುಜ್ಜೀನವನ್ನುಗೊಳಿಸಿ ಚಿಕಿತ್ಸೆಯನ್ನು ಪಡೆಯಲು ಮುಂದಾಗಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ ಈಗಿರುವ ಚಿಕಿತ್ಸಾ ಪದ್ಧತಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಇದೆ, ನಮ್ಮ ಸಾಂಪ್ರದಾಯಿಕ ಚಿಕಿತ್ಸ ಪದ್ಧತಿಯಲ್ಲಿಯೇ ಚಿಕಿತ್ಸೆ ನೀಡಲು ಅಗತ್ಯವಾದ ಸಂಶೋಧನೆಯನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್ ಅವರು, ನಗರದ ಶಿರಾಗೇಟ್‍ನಲ್ಲಿ 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಂಡು 2 ವರ್ಷ ಕಳೆದರೂ ಉದ್ಘಾಟನೆಯಾಗದೇ ನೆನೆಗುಂದಿಗೆ ಬಿದ್ದಿದೆ, ಜಿಲ್ಲೆಯಲ್ಲಿ ತಜ್ಞ ವೈದ್ಯರಿದ್ದು, ಆಸ್ಪತ್ರೆಯನ್ನು ಶೀಘ್ರವಾಗಿ ಉದ್ಘಾಟಿಸುವ ಮೂಲಕ ರೈತರಿಗೆ ಉಪಯೋಗವಾಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ಪಶು ವೈದ್ಯಕೀಯ ತಜ್ಞ ಡಾ.ಪಿ.ಮನೋಹರ್ ಉಪಾಧ್ಯ ಅವರು ಉಪನ್ಯಾಸ ನೀಡಿದರು, ಪಶುಇಲಾಖೆ ಉಪನಿರ್ದೇಶಕ ಡಾ.ಎಲ್.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಂ.ನಾಗಭೂಷಣ, ಉಪಾಧ್ಯಕ್ಷ ಡಾ.ಎ.ಸಿ.ದಿವಾಕರ್, ಡಾ.ಮಹದೇವಯ್ಯ, ಡಾ.ಬಿ.ಆರ್.ನಂಜೇಗೌಡ, ಡಾ.ಶಶಿಕಲಾ ಎಚ್, ಡಾ.ಶಶಿಕಾಂತ್ ಬೂದಿಹಾಳ್ ಸೇರಿದಂತೆ ಜಿಲ್ಲೆಯ ಪಶು ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.