ತುಮಕೂರು :
ಮಹಾತ್ಮಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳ ನಿಷೇಧದ ಬಗ್ಗೆ ಅರಿವು ಮೂಡಿಸಲು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 1ರವರೆಗೆ ಜಿಲ್ಲಾದ್ಯಂತ ಜನಾಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೆ.24ರ ಸಂಜೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲೆಯ ಎಲ್ಲಾ ತಹಶೀಲ್ದಾರ್, ತಾಲ್ಲೂಕು ಪಂಚಾಯತಿ ಇಓ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳ ಕಛೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿ ಹಾಗೂ ನಗರ ಸ್ಥಳೀಯ ಸಂಸ್ಥೆ ಕಛೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿರ್ಬಂಧಿಸಲಾಗುವುದು. ಯಾವುದೇ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಕಡ್ಡಾಯವಾಗಿ ಉಪಯೋಗಿಸಬಾರದು ಎಂದು ತಿಳಿಸಿದರು.
ಈ ಜನಾಂದೋಲನ ಕಾರ್ಯಕ್ರಮದಡಿ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಜಾಥಾ ಕಾರ್ಯಕ್ರಮ, ಬೀದಿ ನಾಟಕ, ಮತ್ತಿತರ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು. ನಗರ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು. ಈ ಎಲ್ಲಾ ಕಾರ್ಯಕ್ರಮಗಳನ್ನು ಕಾಟಾಚಾರಕ್ಕೆ ಏರ್ಪಡಿಸದೆ ಕಟ್ಟುನಿಟ್ಟಾಗಿ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ, ಎಲ್ಲಾ ತಾಲ್ಲೂಕು ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆ ಮುಖ್ಯಸ್ಥರು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಜಾಥಾ ಕಾರ್ಯಕ್ರಮವನ್ನು ಏರ್ಪಡಿಸುವುದಲ್ಲದೆ, ಕರಪತ್ರ/ಬಿತ್ತಿ ಪತ್ರಗಳನ್ನು ಮನೆಮನೆಗೆ ವಿತರಿಸಲು ಕ್ರಮ ಕೈಗೊಳ್ಳಬೇಕು. ಅರಿವು ಕಾರ್ಯಕ್ರಮಗಳಿಗೆ ಸೆಪ್ಟೆಂಬರ್ 25ರಂದೇ ಚಾಲನೆ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾಹಿ ಸೇವಾ ಕಾರ್ಯಕ್ರಮದಡಿ ರೂಪಿಸಿರುವ ಯೋಜನೆಯಂತೆ ಈ ಜನಾಂದೋಲನ ಕಾರ್ಯಕ್ರಮವನ್ನು ಏರ್ಪಡಿಸಬೇಕು ಎಂದು ತಿಳಿಸಿದರು.
ಕುಣಿಗಲ್ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಹೋಟೆಲ್/ಡಾಬಾಗಳಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತಂತೆ ಅರಿವು ಮೂಡಿಸಬೇಕು. ಪ್ಲಾಸ್ಟಿಕ್‍ನಿಂದಾಗುವ ದುಷ್ಪರಿಣಾಮಗಳ ಕುರಿತಂತೆ ವೀಡಿಯೋಗಳನ್ನು ತುಮಕೂರು ನಗರದಲ್ಲಿರುವ ಸ್ಮಾರ್ಟ್ ಸಿಟಿ ಡಿಸ್‍ಪ್ಲೇ ಬೋರ್ಡ್‍ಗಳಲ್ಲಿ ನಿರಂತರವಾಗಿ ಪ್ರಸಾರ ಮಾಡಿ ನಗರದ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇಂದಿನಿಂದ ನಿರಂತರವಾಗಿ ಅಕ್ಟೋಬರ್ 1 ರವರೆಗೆ ನಡೆಯುವ ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆ ನಿಷೇಧ ಕುರಿತ ಸಮಗ್ರ ನಿರಂತರ ಕಾರ್ಯಕ್ರಮಗಳ ಬಗ್ಗೆ ಅಕ್ಟೋಬರ್ 3 ರಂದು ತಹಶೀಲ್ದಾರ್, ಇಓ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಛಾಯಾಚಿತ್ರ ಸಮೇತ ವರದಿ ನೀಡಬೇಕು. ಜನಾಂದೋಲನವು ಜಿಲ್ಲೆಯ ಪ್ರತಿಯೊಂದು ಗ್ರಾಮಪಂಚಾಯತಿ, ಗ್ರಾಮ, ವಾರ್ಡ್, ಮನೆಮನೆಗೆ ತೆರಳಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ವಿಭಿನ್ನ ಪ್ರಚಾರದ ಮೂಲಕ ಅರಿವು ಮೂಡಿಸಬೇಕು. ಅಲ್ಲದೆ ಈ ಜನಾಂದೋಲನದಲ್ಲಿ ಜನಪ್ರತಿನಿಧಿಗಳು ಸ್ವಯಂ ಸೇವಾ ಸಂಸ್ಥೆಗಳು ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡಿನಲ್ಲಿಯೂ ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿವಕುಮಾರ್, ಜಿಲ್ಲಾ ಪಂಚಾಯತಿಯ ಸಿಪಿಓ ಗಾಯಿತ್ರಿ, ತಹಶೀಲ್ದಾರ್ ಯೋಗಾನಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.