ತುಮಕೂರು:

      ಸರ್ಕಾರಿ ಹಿರಿಯ ಪ್ರಾಥಮಿಕ ಆರ್ಯಬಾಲಿಕಾ ಪಾಠಶಾಲೆಗೆ ದಿಢೀರ್ ಭೇಟಿ ನೀಡಿದ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಶಾಲೆಯಲ್ಲಿರುವ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

      ಗುಬ್ಬಿಯಲ್ಲಿ ನಿಗದಿಯಾಗಿದ್ದ ಕಾರ್ಯವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಚಿವರು, ಎಂ.ಜಿ.ರಸ್ತೆಯಲ್ಲಿರುವ ಆರ್ಯಬಾಲಿಕಾ ಪಾಠಶಾಲೆಗೆ ಭೇಟಿ ನೀಡಿ, ಮೊದಲಿಗೆ ಅಡುಗೆ ಮನೆಯನ್ನು ವೀಕ್ಷಿಸಿ, ಅಡುಗೆ ಸಿಬ್ಬಂದಿಯಿಂದ ಮಾಹಿತಿ ಪಡೆದ ನಂತರ ಶಾಲಾ ಕೊಠಡಿಗಳಿಗೆ ತೆರಳಿದ
ತಕ್ಷಣ ಮಕ್ಕಳು ನಲಿ-ಕಲಿ ಎಂಬ ಹಾಡನ್ನು ಸಚಿವರ ಮುಂದೆ ಹಾಡಿದರು. ನಂತರ ಶಿಕ್ಷಕಿಯಿಂದ ಮಾಹಿತಿ ಪಡೆದರು.

      ಮತ್ತೊಂದು ಕೊಠಡಿಗೆ ತೆರಳಿ ವಿದ್ಯಾರ್ಥಿಗೆ ಮಗ್ಗಿ ಹೇಳಲು ಹೇಳಿದರು, ನಂತರ ಕೆಲ ಮಗ್ಗಿಯನ್ನು ಮಧ್ಯೆ ಮಧ್ಯೆ ಕೇಳಿದ ಸಚಿವರು, ಮಧ್ಯಾಹ್ನದ ಊಟ ನೀಡುತ್ತಾರೆ, ಗುಣಮಟ್ಟದಿಂದ ಕೂಡಿರುತ್ತದೆಯೇ? ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಾರೆಯೇ ಎಂದೆಲ್ಲ ಕೇಳಿ ತಿಳಿದುಕೊಂಡ ಅವರು, ಸಹ ವಿದ್ಯಾರ್ಥಿಗಳಿಂದ ಮಗ್ಗಿ ಹೇಳಿದ ವಿದ್ಯಾರ್ಥಿಗೆ ಚಪ್ಪಾಳೆ ಹೊಡೆಸಿದರು.

      ಶಾಲೆಗೆ ಕಲರ್‍ಸ್ಟೈಲಿಶ್ ಮಾಡಿಸಿಕೊಂಡು ಬಂದಿದ್ದ ವಿದ್ಯಾರ್ಥಿಯನ್ನು ಗಮನಿಸಿದ ಸಚಿವರು, ಕೂದಲಿಗೆ ಬಣ್ಣ ಹಚ್ಚಿರುವುದು ಏತಕ್ಕೆ ಎಂದು ಪ್ರಶ್ನಿಸಿದರು. ಅದಕ್ಕೆ ವಿದ್ಯಾರ್ಥಿ ಸ್ಟೈಲ್‍ಗಾಗಿ ಬಣ್ಣ ಹಚ್ಚಿರುವುದಾಗಿ ಸಚಿವರಿಗೆ ಉತ್ತರಿಸಿದ, ಇದಕ್ಕೆ ಸಚಿವರು ಶಾಲೆಯಲ್ಲಿ ಸ್ಟೈಲ್ ಮಾಡುವುದು ಒಳ್ಳೆಯದಲ್ಲ, ಈಗ ಓದಿನ ಕಡೆ ಗಮನಕೊಡು ಓದಿ ದೊಡ್ಡವನಾದ ಮೇಲೆ ಸ್ಟೈಲ್ ಮಾಡು, ಆಗ ಎಲ್ಲರು ಮೆಚ್ಚುತ್ತಾರೆ, ಶಾಲೆಯಲ್ಲಿ ನೀನೊಬ್ಬ ಹೀಗೆ ಬಂದರೆ ಬೇರೆ ವಿದ್ಯಾರ್ಥಿಗಳು ಸ್ಟೈಲ್ ಮಾಡಲು ಮುಂದಾಗುತ್ತಾರೆ ಆಗ ಶಾಲೆಯ ವಾತಾವರಣವೇ ಬದಲಾಗುತ್ತದೆ ಎಂದು ಬುದ್ದಿಮಾತು ಹೇಳಿದರು.

      ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಪ್ಪ ಅವರ ಬಗ್ಗೆ ಶಾಲೆಯ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರು, ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಪಠ್ಯಪುಸ್ತಕ ಬಂದಿರುವ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಹಾಲು ನೀಡುತ್ತಿದ್ದೀರಾ? ಎಂದು ಪ್ರಶ್ನಿಸಿದರು, ಅದಕ್ಕೆ ಉತ್ತರಿಸಿದ ಶಿಕ್ಷಕಿ ಮಕ್ಕಳು ಸಾಯಿ ಮಿಲ್ಕ್ ಪೌಡರ್ ಅನ್ನು ಚೆನ್ನಾಗಿ ಪಡೆದುಕೊಳ್ಳುತ್ತಿದ್ದಾರೆ ಎಂದು ಉತ್ತರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ನ.4ರಂದು ಪಾವಗಡದಲ್ಲಿ 15 ಸಾವಿರ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದು, ನೀವು ಪ್ರಾರಂಭಿಸುವಂತೆ ತಿಳಿಸಿದರು.

(Visited 56 times, 1 visits today)