ಹಾಸನ:
ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಪ್ರಸಿದ್ಧ ಹಾಸನಾಂಬೆ ದರ್ಶನಕ್ಕೆ ಇಂದು ಅಧಿಕೃತ ತೆರೆ ಬಿದ್ದಿದ್ದು, 9 ದಿನದ ದರ್ಶನಕ್ಕೆ ಇಂದು ಸಂಪೂರ್ಣ ತೆರೆ ಬಿದ್ದಿದೆ.
ನವೆಂಬರ್ 1 ರಿಂದ ಪ್ರಾರಂಭವಾಗಿ ಒಂಬತ್ತು ದಿನಗಳ ಕಾಲ ಹಾಸನಾಂಬೆ ದೇಗುಲದ ಬಾಗಿಲು ತೆರೆದು ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಲಾಯಿತಾದರೂ ಭಕ್ತಾದಿಗಳ ಆಗಮನ ಕಳೆದ ವರ್ಷಕ್ಕಿಂತಲೂ ಕಡಿಮೆಯೇ ಇತ್ತು.
ಒಂಬತ್ತು ದಿನಗಳ ವರೆಗೆ ನಡೆದ ಉತ್ಸವದಲ್ಲಿ ಒಟ್ಟು 12 ಲಕ್ಷಕ್ಕೂ ಮಿಕ್ಕಿ ಜನರು ಹಾಸನಾಂಬೆ ದರ್ಶನ ಮಾಡಿದ್ದಾರೆ ಎಂದು ಜಿಲ್ಲಾ ಆಡಳಿತ ಹೇಳಿದೆ. ಅಂತೆಯೇ ಕಾಣಿಕೆ ಸಂಗ್ರಹದಲ್ಲಿಯೂ ಈ ಬಾರಿ ಕಡಿಮೆ ಆಗಿದೆ ಎನ್ನಲಾಗಿದೆ. ಕಾಣಿಕೆ ಹಣ ಎಣಿಸುವ ಕಾರ್ಯ ಚಾಲ್ತಿಯಲ್ಲಿದೆ.
ಪ್ರತಿಬಾರಿಯಂತೆ ಈ ಬಾರಿಯೂ ಗಣ್ಯರಿಗೆ ವಿಶೇಷ ಪಾಸ್ ವ್ಯವಸ್ಥೆ ಮತ್ತು ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ದರ್ಶನದ ಟಿಕೆಟ್ ನಿಂದ ಒಟ್ಟು 1.14 ಕೋಟಿ ಆದಾಯ ಬಂದಿದೆ. ಲಾಡು ಮಾರಾಟದಿಂದ 13.39 ಲಕ್ಷ ಲಾಭ ಬಂದಿದೆ. ಸೀರೆ ಮಾರಾಟದಿಂದ 56,200 ರೂಪಾಯಿ ಬಂದಿದೆ ಎಂದು ದೇವಾಲಯದ ಆಡಳಿತ ಹೇಳಿದೆ.
ಹಾಸನಾಂಬೆ ಹುಂಡಿ ಹಣ ಎಣಿಕೆ ಕಾರ್ಯವು ಎಸಿ ನಾಗರಾಜ್ ನೇತೃತ್ವದಲ್ಲಿ ಆರಂಭಗೊಂಡಿದ್ದು, ಹುಂಡಿಯಲ್ಲಿ ಒಂದು ಸಾವಿರ ಮುಖಬೆಲೆಯ ಹಳೆ ನೋಟುಗಳು ಪತ್ತೆಯಾಗಿವೆ. ಹರಕೆ ರೂಪದಲ್ಲಿ ಲವ್ ಲೆಟರ್, ಆಸ್ತಿ ವಿಚಾರ, ಆರೋಗ್ಯ ಸಮಸ್ಯೆ ಸೇರಿದಂತೆ ಇತರೆ ರೀತಿಯ ಪತ್ರಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ.