ತುಮಕೂರು :
ದೇಶದ ಕೃಷಿ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಿದ ನಂತರ ಕಟ್ಟಡ ನಿರ್ಮಾಣ ವಲಯಕ್ಕೆ ಪ್ರತಿ ನಿತ್ಯ ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ವಲಸೆ ಬರುತ್ತಿದ್ದಾರೆ. ಇತ್ತ ನಿರ್ಮಾಣ ವಲಯದಲ್ಲಿ ಸುಮಾರು 10 ಕೋಟಿಗೆ ಹೆಚ್ಚಿನ ಜನರು ದುಡಿಯುತ್ತಿದ್ದಾರೆ.
80ರ ದಶಕದಿಂದ ನಿರ್ಮಾಣ ವಲಯ ವಿಸ್ತರಣೆಯಾಗುತ್ತ ಬಂದ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಮತ್ತು ಸಾವು ನೋವಿಗೆ ತುತ್ತಾದ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಗೆ ದೇಶಾದ್ಯಂತ ಚಳವಳಿ ಬೆಳೆದು ಬಂದಿತ್ತು. ಕಾರ್ಮಿಕರ ಅಭಿವೃದ್ಧಿಗೆ ಕಲ್ಯಾಣ ಮಂಡಳಿಗಳು ಹಾಗೂ ಸೆಸ್ ಕಾಯ್ದೆ ಕೇಂದ್ರದಲ್ಲಿ 1996ರಲ್ಲಿ ರಾಜ್ಯದಲ್ಲಿ 2006ರಲ್ಲಿ ಜಾರಿಗೆ ಬಂದಿತು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೌಲಭ್ಯಗಳು ಜಾರಿಗೆ ಪ್ರಾರಂಭದಲ್ಲಿದ್ದ ಅಧಿಕಾರಿಗಳು ಸೀಮಿತ ಅಧಿಕಾರದಿಂದ ಸೌಲಭ್ಯಗಳು ಕುಂಟುತ್ತಾ ಸಾಗಿ ಹಾಗೂ ಕಲ್ಯಾಣ ಮಂಡಳಿಗೆ ಪ್ರಭಾರ ಅಧಿಕಾರಿಗಳ ನೇಮಕವಾಗುತ್ತಿದ್ದರಿಂದ ಸಾಮಾಜಿಕ ನ್ಯಾಯ ಕೊಡಲು ಆಗದೆ ಇರುವ ಸಂದರ್ಭದಲ್ಲಿ ಸಿಐಟಿಯು ಸೇರಿದಂತೆ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ಮಂಡಳಿಗೆ ಪೂರ್ಣ ಅವಧಿ ಅಧಿಕಾರಿಗಳ ನೇಮಕಕ್ಕೆ ಒತ್ತಾಯಿಸಿ ಹೋರಾಟ ಸಹ ಮಾಡಲಾಯಿತು.
ಇಂತಹ ಸಂದರ್ಭದಲ್ಲಿ ಬಂದ ರೋಹಿಣಿ ಸಿಂಧೂರಿ ಅವರು ಅಧಿಕಾರ ವಹಿಸಿಕೊಂಡ ನಂತರ ಕಾರ್ಮಿಕ ಪರವಾದ ಮತ್ತು ಸರ್ಕಾರದ ಕರ್ತವ್ಯದ ಭಾಗವಾಗಿ ಮಂಡಳಿ ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ಇದ್ದ ನ್ಯೂನತೆಗಳನ್ನು ಸರಿಪಡಿಸಿ ಕಲ್ಯಾಣ ಮಂಡಳಿ ಸೌಲಭ್ಯಗಳು ತ್ವರಿತವಾಗಿ ಸಿಗುವಂತೆ ಆಡಳಿತಾತ್ಮಕ ತೀರ್ಮಾನಗಳನ್ನು ತೆಗೆದುಕೊಂಡು ಸ್ಪಂದಿಸುತ್ತಿರುವಾಗಲೇ ಏಕಾಏಕಿ ಅವರನ್ನು ಮಂಡಳಿಯಿಂದ ವರ್ಗಾವಣೆ ಮಾಡಿರುವುದನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಫೆಡರೇಷನ್ ಸಿಐಟಿಯು ತೊಂಡಗೆರೆ ಶಾಖೆಯು ಸಭೆ ಸೇರಿ ಕಾರ್ಯದರ್ಶಿ ಗಂಗಾಧರ್, ಅಧ್ಯಕ್ಷ ಜಯರಾಮಯ್ಯ, ಖಜಾಂಚಿ ಲೋಕೇಶ್, ಮುಖಂಡರಾದ ಮಾಗಡ ರಂಗಾಚಾರ್, ಹಿರಿಯಣ್ಣಗೌಡ, ಮೀನಪ್ಪ, ರಾಜೇಶ್, ನರಸಿಂಹಮೂರ್ತಿ, ರಮೇಶ್ ನೇತೃತ್ವದಲ್ಲಿ ಖಂಡನಾ ನಿರ್ಣಯ ಮಂಡಿಸಿ ಹಾಗೂ ಜಿಲ್ಲಾ ಪದಧಿಕಾರಿಗಳಾದ ಜಿಲ್ಲಾಧ್ಯಕ್ಷ ಬಿ.ಉಮೇಶ್, ಗೌರವಾಧ್ಯಕ್ಷ ಟಿ.ಎಂ.ಗೋವಿಂದರಾಜು, ಕಾರ್ಯದರ್ಶಿ ರಾಮಣ್ಣ, ಮುಖಂಡರಾದ ಶ್ರೀಧರ್ ಮಾವಿನಕುಂಟೆ, ಖಲೀಲ್ ಅಹಮದ್, ಶಂಕರಪ್ಪ, ತಿಮ್ಮೇಗೌಡ, ನಾಗರಾಜು, ಭಾಗ್ಯಲಕ್ಷ್ಮಿ ಸೇರಿದಂತೆ ಮುಖಂಡರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ ರೋಹಣಿ ಸಿಂಧೂರಿ ಅವರನ್ನು ಕಲ್ಯಾಣ ಮಂಡಳಿಯಲ್ಲಿ ಮುಂದುವರಿಸುವಂತೆ ಒತ್ತಾಯಿಸಲಾಯಿತು.