ತುಮಕೂರು:
ನಗರ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿದ್ದ ಬೃಹತ್ ಗಾತ್ರದ ಬೇವಿನ ಮರವೊಂದು ಉರುಳಿ ಬಿದ್ದು, ಸಿಬ್ಬಂದಿಯೊಬ್ಬರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಗುರುವಾರ ಬೆಳಿಗ್ಗೆ 11.43ರ ಸಮಯದಲ್ಲಿ ಬೇವಿನ ಮರವು ಉರುಳಿ ಬಿದ್ದಿದ್ದರಿಂದ ಕಾಲೇಜಿನ ಸಿಬ್ಬಂದಿ ಬಬಿತಾ ಎಂಬುವರ ಭುಜಕ್ಕೆ ಗಾಯವಾಗಿದೆ, ಮರ ಅಪ್ಪಿತಪ್ಪಿ ಕಾಲೇಜಿನ ಗ್ರಂಥಾಲಯದ ಮೇಲಾಗಲಿ ಅಥವಾ ಸಿಬ್ಬಂದಿ ಕೊಠಡಿ ಮೇಲಾಗಲಿ ಉರುಳಿ ಬಿದ್ದಿದ್ದರೆ ಭಾರೀ ಅನಾಹುತ ನಡೆಯುವ ಸಾಧ್ಯತೆ ಇತ್ತು.
ಗ್ರಂಥಾಲಯದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಸಿಬ್ಬಂದಿ ಕೊಠಡಿಯಲ್ಲಿ ಉಪನ್ಯಾಸಕರು ಇದ್ದರು, ಮರದ ಬಳಿ ಕುಳಿತು ಓದುತ್ತಿದ್ದ ವಿದ್ಯಾರ್ಥಿಗಳು ಇಂದು ಆ ಕಡೆ ಹೋಗದೇ ಇದ್ದರಿಂದ ಅನಾಹುತ ತಪ್ಪಿದಂತಾಗಿದೆ.
ಮರ ಉರುಳಿದ್ದರಿಂದ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಎಬಿಎಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಲೇಜಿನ ಕೊಠಡಿಗಳು ಹಾಳಾಗಿದ್ದು, ಕಟ್ಟಡ ನವೀಕರಣ ಮಾಡಬೇಕು,2014ರಲ್ಲಿ ಆರಂಭಗೊಂಡ ಈ ಕಾಲೇಜಿಗೆ ಸ್ವಂತ ಸ್ಥಳವಿಲ್ಲದೆ ಇರುವುದರಿಂದ ಕಟ್ಟಡ ನಿರ್ಮಾಣ ಮಾಡಲು ಆಗಿಲ್ಲ, 1500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಗೋಡೆಗಳು ಕುಸಿತಗೊಳುವ ಆತಂಕ ನಿರ್ಮಾಣವಾಗಿದೆ, ಎರಡು ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಕೊಠಡಿಗಳು ನೆನೆದಿದ್ದು, ಕಟ್ಟಡ ಗೋಡೆಗಳು ಕುಸಿಯುವ ಸಾಧ್ಯತೆ ಇದೆ ಹಾಗಾಗಿ ತರಗತಿಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟಿಸಿದರು.
ಕಾಲೇಜಿನ ಪ್ರಾಂಶುಪಾಲ ಜೆ.ಗಂಗಾಧರ್ ಮಾತನಾಡಿ ಕಾಲೇಜಿನಲ್ಲಿ ರೈತಾಪಿ ವರ್ಗದ, ಬಡ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಕಟ್ಟಡ ಹಳೆಯದಾಗಿರುವುದರಿಂದ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುವವರೆಗೂ ಬೇರೆ ಕಡೆ ಮಕ್ಕಳಿಗೆ ತರಗತಿಯನ್ನು ನಡೆಸಲು ಅವಕಾಶ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಂಸದ ಜಿ.ಎಸ್.ಬಸವರಾಜು ಜಿಲ್ಲಾಧಿಕಾರಿಗಳೊಂದಿಗೆ ದೂರುವಾಣಿಯಲ್ಲಿ ಮಾತನಾಡಿ ಕಾಲೇಜಿಗೆ ಸ್ಥಳ ಮಂಜೂರಾತಿ ಮಾಡಿಕೊಡುವಂತೆ ಕೇಳಿಕೊಂಡರು ಅದಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿದ ನಂತರ ಅವರು ವಿದ್ಯಾರ್ಥಿಗಳಿಗೆ ಕಾಲೇಜನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿ ಕಟ್ಟಿಕೊಡುವುದಾಗಿ, ಅಲ್ಲಿಯವರೆಗೆ ಬೇರೆ ಕಡೆ ತರಗತಿಯನ್ನು ನಡೆಸಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು.
ಈ ವೇಳೆ ಪಾಲಿಕೆ ಸದಸ್ಯೆ ಗಿರಿಜಾಧನಿಯಾಕುಮಾರ್,ಸೇರಿದಂತೆ ಇತರರಿದ್ದರು.