ತುಮಕೂರು:
ಚುನಾವಣೆಯಲ್ಲಿ ಸೋಲುಗೆಲುವು ಸಾಮಾನ್ಯ, ಕಳೆದ ಲೋಕಸಭಾ ಚುನಾವಣೆಯಲ್ಲಿ 6.5ಲಕ್ಷ ಮತಗಳನ್ನು ನೀಡಿದ ಮತದಾರರಿಗೆ ಧನ್ಯವಾದವನ್ನು ತಿಳಿಸಬೇಕಿತ್ತು, ತಡವಾಗಿ ಬಂದಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮನವಿ ಮಾಡಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಜಿಲ್ಲೆ ಮತದಾರರು ಹಾಗೂ ಮುಖಂಡರು ಸಹಕಾರ ನೀಡಿದ್ದೀರಿ, ಸೋಲನ್ನು ಸ್ಪೂರ್ತಿಯಾಗಿ ಸ್ವೀಕರಿಸಿ, ಪ್ರತಿ ತಾಲ್ಲೂಕಿಗೆ ಹೋಗಿ ಧನ್ಯವಾದ ಹೇಳಬೇಕು ಅದಕ್ಕಾಗಿ ಕಾರ್ಯಕ್ರಮ ರೂಪಿಸುವಂತೆ ಗುಬ್ಬಿ ಶಾಸಕ ವಾಸುಗೆ ಹೇಳಿದ್ದೇ ಏಳು ತಿಂಗಳ ನಂತರ ಜಿಲ್ಲೆಗೆ ಬಂದಿದ್ದೇನೆ, ಪ್ರತಿ ತಾಲ್ಲೂಕಿಗೆ ಹೋಗಿ ಮತದಾರರ ಕಷ್ಟ ಸುಖ ಆಲಿಸುತ್ತೇನೆ ಎಂದು ಹೇಳಿದರು.
ಮೂರು ವರ್ಷಗಳ ಹಿಂದೆಯೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ, ಆದರೆ ವಿಧಿ ಇಲ್ಲಿಗೆ ಬಂದು ನಿಲ್ಲುವಂತೆ ಮಾಡಿತು, ಸೋತೆ ಎನ್ನುವ ಸಿಟ್ಟು ನನಗಿಲ್ಲ, ಪಕ್ಷದಲ್ಲಿ ಸಮರ್ಥ ಯುವ ಮುಖಂಡರಿದ್ದಾರೆ, ಪಕ್ಷವನ್ನು ಸಂಘಟಿಸುವ ಮೂಲಕ ಮತ್ತೆ ಅಧಿಕಾರಕ್ಕೆ ತರಬೇಕಿದೆ, ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ಜನರು ನಮ್ಮೊಂದಿಗೆ ಇದ್ದಾರೆ, ಪಕ್ಷವನ್ನು ಕಟ್ಟುವ ಕೆಲಸವನ್ನು ಮುಖಂಡರು ಮಾಡಬೇಕಿದೆ ಎಂದರು.
ನಾನು ಮುಖ್ಯಮಂತ್ರಿಯಾಗಲೂ ತುಮಕೂರು ಜಿಲ್ಲೆಯ ಕೊಡುಗೆ ಜಾಸ್ತಿ ಇದೆ, 9 ಮಂದಿ ಶಾಸಕರನ್ನು ಪಕ್ಷದಿಂದ ಆರಿಸಿ ಕಳುಹಿಸಿದ್ದರಿಂದ ನಾನು ಮುಖ್ಯಮಂತ್ರಿಯಾದೇ, ಯಾವುದೇ ಜಾತಿಗೆ ಸೀಮಿತವಾಗಿ ನಾನು ಕೆಲಸ ಮಾಡಿಲ್ಲ, ಆದರೂ ನನ್ನನ್ನು ಜಾತಿಗೆ ಸೀಮಿತಮಾಡಲಾಗಿದೆ, ಪಕ್ಷದ ಕಾರ್ಯಕರ್ತರ ಕಷ್ಟಗಳಿಗೆ ಮುಖಂಡರು ಸ್ಪಂದಿಸಬೇಕು, ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ದುಡಿದರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಜನರು ಮನಸ್ಸು ಮಾಡಿದರೆ ಯಾವ ದುಡ್ಡು, ಯಾವ ಸುಳ್ಳು ನಡೆಯೋದಿಲ್ಲ, ಸತ್ಯ ನಾಶ ಮಾಡಲು ಆಗುವುದಿಲ್ಲ, ದೇವರ ಆಟ ಚುನಾವಣೆ ಯಾವಾಗಲಾದರೂ ಬರಬಹುದು, ಕಾರ್ಯಕರ್ತರು ಮತ್ತು ಮುಖಂಡರು ಸಜ್ಜಾಗಿರುವಂತೆ ಸೂಚಿಸಿದ ಅವರು, ಎಲ್ಲ ಟೀಕೆಗಳಿಗೆ ಉತ್ತರಿಸಲು ಹೋಗಬೇಡಿ, ಕಾಲ ಬಂದಾಗ ತಕ್ಕ ಉತ್ತರವನ್ನು ನೀಡೋಣ, ಇನ್ನೊಂದು ಚುನಾವಣೆ ಬರುವುದು ಗ್ಯಾರೆಂಟಿ, ಎಲ್ಲ ಕ್ಷೇತ್ರಗಳಿಗೆ ತೆರಳಿ ಪಕ್ಷವನ್ನು ಸಂಘಟಿಸೋಣ ಎಂದರು.
ದೇಶದಲ್ಲಿ ಆರ್ಥಿಕ ಸಂಕಷ್ಟವಿದೆ, ನೆರೆ ಬಂದು ಎರಡು ತಿಂಗಳಾದರೂ ರಾಜ್ಯಕ್ಕೆ ಪರಿಹಾರ ನೀಡಲಿಲ್ಲ, ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕಿನಿಂದ ಹಣ ಪಡೆದು ಆಡಳಿತ ನಡೆಸುತ್ತಿದೆ, ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾನಿ ಪರಿಹಾರಕ್ಕಾಗಿ 5 ಸಾವಿರ ಕೋಟಿ ಮಧ್ಯಂತರ ಪರಿಹಾರವನ್ನು ನೀಡುವಂತೆ ಮೋದಿ ಅವರಿಗೆ ಪತ್ರ ಬರೆದರೂ ಉತ್ತರ ಬರಲಿಲ್ಲ, ರಾಜ್ಯಕ್ಕೆ ನೆರೆ ಪರಿಹಾರವನ್ನು ನೀಡದೇ ಹೋದರೆ ಅಧಿವೇಶನವನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಮುಖಂಡರಿಗೆ ಕರೆ ನೀಡಿದರು, ಪ್ರತಿಭಟನೆಗೆ ಸ್ಪಂಧಿಸದೇ ಹೋದರೆ ಪಾರ್ಲಿಮೆಂಟ್ ಚಲೋ ಹಮ್ಮಿಕೊಳ್ಳಲಾಗುವುದು ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ ಪಕ್ಷದ ಕಥೆ ಮುಗಿದು ಹೋಯಿತು ಎನ್ನುವ ಕಷ್ಟದಲ್ಲಿದ್ದಾಗಲೇ ಮತ್ತೆ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ, ಸೋತಾಗ ಕುಗ್ಗದೆ ಹಳ್ಳಿ ಹಳ್ಳಿಗೂ ತೆರಳಿ ಪಕ್ಷವನ್ನು ಸಂಘಟಿಸಿದ್ದರಿಂದಲೇ ರಾಜ್ಯದಲ್ಲಿ ಜೆಡಿಎಸ್ ಉಳಿದು ಕೊಂಡಿದೆ, ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ನಾಶವಾಗುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಎರಡೇ ತಿಂಗಳಲ್ಲಿ ತನ್ನ ಜನವಿರೋಧಿ ನೀತಿಯನ್ನು ತೋರಿಸಿದೆ, ನೆರೆಗೆ ಪರಿಹಾರ ನೀಡಿ ಎಂದರೆ ಸಬೂಬು ಹೇಳಿಕೊಂಡು ತಿರುಗಾಡುತ್ತಿದ್ದಾರೆ, ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿಕೊಂಡು ರಾಜ್ಯವನ್ನು ಅನಾಥವಾಗಿಸಿದ್ದೇವೆ, ದೇವೇಗೌಡರು ಗೆದ್ದಿದ್ದರೆ ಚಿತ್ರಣವೇ ಬದಲಾಗುತ್ತಿತ್ತು ಎಂದ ಅವರು, ಪಕ್ಷದ ಭವಿಷ್ಯದ ದೃಷ್ಠಿಯಿಂದ ಸಂಘಟನೆಗೆ ಮುಂದಾಗುವಂತೆ ಕರೆ ನೀಡಿದರು.
ಮಾಜಿ ಸಚಿವ ಶ್ರೀನಿವಾಸ್ ಮಾತನಾಡಿ ನೆರೆಗೆ ತುತ್ತಾಗಿ ರಾಜ್ಯ ಸಂಕಷ್ಟದಲ್ಲಿದ್ದರೆ ಕೇಂದ್ರ ಸರ್ಕಾರ ಇತ್ತ ಕಡೆ ಗಮನಕೊಡುತ್ತಿಲ್ಲ, ರಾಜ್ಯದ ಪ್ರತಿನಿಧಿಗಳಾಗಿ 25 ಸಂಸದರನ್ನು ಗೆಲ್ಲಿಸಿ ನಮ್ಮ ಜವಾಬ್ದಾರಿಯನ್ನು ಮರೆತಿದ್ದರಿಂದಲೇ ರಾಜ್ಯಕ್ಕೆ ಇಂದು ಇಂತಹ ಪರಿಸ್ಥಿತಿ ಎದುರಾಗಿದೆ, ಮೋದಿ, ಅಮಿತ್ ಶಾ ಮುಂದೆ ಹೋಗಿ ಮಾತನಾಡಲು ಆಗದವರನ್ನು ಗೆಲ್ಲಿಸಿ ರಾಜ್ಯ ಇಂದು ಕೈಕಟ್ಟಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ, ಜಿಲ್ಲೆಯಿಂದ ದೇವೇಗೌಡರು ಗೆದ್ದಿದ್ದರೆ ರಾಜ್ಯದ ಪರಿಸ್ಥಿತಿ ಇಂದು ಬೇರೆಯೇ ಇರುತ್ತಿತ್ತು ಎಂದರು.
ದೇವೇಗೌಡರನ್ನು ಬಿಟ್ಟರೆ ಬೇರೆಯವರು ಗೆಲ್ಲೋದಿಲ್ಲ ಎಂಬ ಹುಂಬ ಭರವಸೆಯಿಂದ ಮಾಜಿ ಪ್ರಧಾನಿ ಅವರನ್ನು ಸೋಲಿಸಿದ ಅಪಕೀರ್ತಿಗೆ ಜಿಲ್ಲೆಯ ಮತದಾರರು ಹಾಗೂ ಪಕ್ಷದ ಮುಖಂಡರು ಹೊತ್ತುಕೊಂಡಿದ್ದೇವೆ, ದೇವೇಗೌಡರು ಗೆದ್ದಿದ್ದರೆ ಜಿಲ್ಲೆ ಅಭಿವೃದ್ಧಿಯಾಗುತ್ತಿತ್ತು, ಮುಂದಿನ ಚುನಾವಣೆಯಲ್ಲಿ ದೇವೇಗೌಡರನ್ನು ನಿಲ್ಲಿಸಿ ಗೆಲ್ಲಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ, ಛಲವಾದಿ ದೇವೇಗೌಡರು ಪಕ್ಷವನ್ನು ಮತ್ತೆ ಕಟ್ಟುತ್ತಾರೆ, ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ ಜೆಡಿಎಸ್ ಪಕ್ಷ ಭದ್ರವಾಗಿದ್ದು, ಜಿಲ್ಲೆಯಲ್ಲಿ ಯಾರು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ, ಕಾರ್ಯ ಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೇ ಪಕ್ಷವನ್ನು ಸಂಘಟಿಸಬೇಕು ಎಂದ ಅವರು ಮುಂದಿನ 15 ದಿನದೊಳಗಾಗಿ ಎಲ್ಲ ತಾಲ್ಲೂಕು ಘಟಕಗಳನ್ನು ಪುನರ್‍ರಚಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ತಿಳಿಸಿದರು ಅವರು ಚುನಾವಣೆ ಯಾವಾಗ ಬಂದರೂ ಎದುರಿಸುವಷ್ಟು ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎಲ್ಲ ಮುಖಂಡರೊಂದಿಗೆ ಪಕ್ಷವನ್ನು ಸಂಘಟಿತಗೊಳಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿದರು. ಶಾಸಕ ಸತ್ಯನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಚೌಡರೆಡ್ಡಿ, ತಿಪ್ಪೇಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಸುಧಾಕರ್ ಲಾಲ್, ಜಿ.ಪಂ ಅಧ್ಯಕ್ಷೆ ಲತಾ, ಮೇಯರ್ ಲಲಿತಾ, ತುಮುಲ್ ಅಧ್ಯಕ್ಷ ಮಹಾಲಿಂಗಪ್ಪ, ಮುಖಂಡರಾದ ಗೋವಿಂದರಾಜು, ಬೋರೇಗೌಡ, ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಉಪಾಧ್ಯಕ್ಷ ದೇವರಾಜು, ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಎಸ್‍ಸಿ ಘಟಕದ ಅಧ್ಯಕ್ಷ ಶಿವಕುಮಾರ್, ಸಿ.ಆರ್.ಉಮೇಶ್, ಬೆಳ್ಳಿ ಲೋಕೇಶ್, ಹಾಲನೂರು ಅನಂತ್ ಕುಮಾರ್, ಸಾಯಿರಾಭಾನು, ಲಕ್ಷ್ಮಮ್ಮ ವೀರಣ್ಣಗೌಡ, ಲೀಲಾವತಿ ಸೇರಿದಂತೆ ಇತರರಿದ್ದರು.
ಕಾರ್ಯಕ್ರಮದ ಉದ್ಘಾಟನೆ ವೇಳೆ ಮಳೆ ಆಗಮಿಸಿದ್ದರಿಂದ ಕಾರ್ಯಕರ್ತರು ಹಾಗೂ ಮುಖಂಡರುಗಳು ಕುರ್ಚಿಗಳ ಆಶ್ರಯ ಪಡೆದರು, ಮಾಜಿ ಪ್ರಧಾನಿ ದೇವೇಗೌಡ ಅವರು ಛತ್ರಿ ಆಶ್ರಯ ಪಡೆದರು.