ತುಮಕೂರು:
ದೃಢ ಮನಸ್ಸು ಇದ್ದವರು ಮಾತ್ರ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಸಮಿತಿ ವತಿಯಿಂದ ನಡೆದ ತುಮಕೂರು ದಸರಾ ಆಚರಣೆ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವರ್ಷದ 365 ದಿನದಲ್ಲಿ 9 ದಿನ ಬಿಡುವು ಮಾಡಿಕೊಂಡು ನವರಾತ್ರಿ ಹಬ್ಬದ ಆಚರಣೆಯಲ್ಲಿ ಎಲ್ಲರೂ ತೊಡಗಬೇಕು. ಈ 9 ದಿವಸ ಎಲ್ಲವನ್ನು ಮರೆತು ಇಡೀ ನಾಡು ಹಬ್ಬ ಆಚರಿಸಿ ಹರ್ಷವಾಗಲಿ ಬದುಕಲಿ ಎಂಬುದು ನವರಾತ್ರಿ ಆಚರಣೆಯ ಸಂಕೇತ ಮತ್ತು ಶ್ರೇಷ್ಠತೆ ಎಂದು ಅವರು ಹೇಳಿದರು.
ದೃಢ ಮನಸ್ಸು ಹೊಂದಲು ಯೋಗ, ಧ್ಯಾನಗಳಿಂದ ಮಾತ್ರ ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಕೊಂಚ ಸಮಯ ನಮ್ಮನ್ನು ನಾವು ಮರೆತು ಸಾಧನೆ, ಯೋಗ, ಧ್ಯಾನ ಮಾಡುವ ಮೂಲಕ ನಮ್ಮ ಮನಸ್ಸನ್ನು ಸದಾ ಹೊರತು ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ನಮ್ಮ ಮನಸ್ಸು ಚಿರನೂತನವಾಗಲು ಯೋಗ, ಧ್ಯಾನ, ಹಾಡುಗಾರಿಕೆ ಹಾಗೂ ಚರ್ಚೆಯಲ್ಲಿ ನಮ್ಮನ್ನು ತೊಡಗಿಸಿಕೊಂಡು ಸ್ವಲ್ವ ಹೊತ್ತು ನಮ್ಮನ್ನು ನಾವು ಮರೆಯುವಂತಾಗಬೇಕು, ಇದರಿಂದ ಮನಸ್ಸಿನಲ್ಲಿರುವ ಎಲ್ಲ ದುಗುಡ ದೂರವಾಗಲಿದೆ ಎಂದರು.
ಬದುಕಿನಲ್ಲಿ ಒಳ್ಳೆಯದನ್ನುಪ್ರೋತ್ಸಾಹಿಸಿ ಕೆಟ್ಟದ್ದನ್ನು ದಮನ ಮಾಡುವ ಮೂಲಕ ನವರಾತ್ರಿ ಹಬ್ಬವನ್ನು ಆಚರಿಸಬೇಕು. ಜತೆಗೆ ಕಳೆದು ಹೋಗುವ ಸಂಬಂಧ, ಬಾಂಧವ್ಯ ಮತ್ತೆ ಬೆಸೆಯಲು ಈ ನವರಾತ್ರಿ ಹಬ್ಬ ಅತ್ಯಂತ ಶ್ರೇಷ್ಠವಾದ ಹಬ್ಬ ಎಂದು ಬಣ್ಣಿಸಿದರು.
ನಮ್ಮಲ್ಲಿರುವ ಪ್ರತಿಭೆ, ಕಲೆ, ಸಾಹಿತ್ಯವನ್ನು ನಾವು ಗುರುತಿಸಿಕೊಂಡು ಅದಕ್ಕೊಂದು ಶಾಸ್ತ್ರೀಯ ಚೌಕಟ್ಟು ಕೊಟ್ಟು ಅದನ್ನು ಅಭ್ಯುದಯಕ್ಕೆ ತಂದು ಎತ್ತರಕ್ಕೆ ಬೆಳೆಸುವುದನ್ನು ಸಂಸ್ಕೃತಿ ಮತ್ತು ಸಂಸ್ಕಾರವಂತರು ಎಂದು ಕರೆಯುತ್ತಾರೆ. ನಮಗೆ ಅಗಾಧ ಶಕ್ತಿ, ಪ್ರತಿಭೆಯನ್ನು ಭಗವಂತ ಕೊಟ್ಟಿದ್ದೇನೆ. ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬದುಕು ನಡೆಸಬೇಕು ಎಂದರು.
ನಮ್ಮ ನಾಡು, ತಾಯಿ, ಸಾಹಿತ್ಯ, ಭಾಷೆ ಹಾಗೂ ನಮ್ಮ ಕಲೆಯ ಬಗ್ಗೆ ಅಭಿಮಾನ ಹೊಂದಿರಬೇಕು. ಈ ಕಲೆಗೆ ಶಕ್ತಿ ನೀಡಿದರೆ ನಿಜವಾಗಿಯೂ ಸಂಸ್ಕಾರವಂತರಾಗುತ್ತೇವೆ ಎಂದು ಅವರು ಹೇಳಿದರು.
ನಾವು ಯಾರಿಗಿಂತಲೂ ಕಡಿಮೆ ಇಲ್ಲ. ವಿದೇಶಿಗರು ಬಂದು ನಮ್ಮ ದೇಶವನ್ನು ಹಾಡಿ ಹೊಗಳಿ ಹೋಗಿದ್ದಾರೆ. ಇಡೀ ಪ್ರಪಂಚಕ್ಕೆ ಸಾಂಸ್ಕೃತಿಕ ಕೇಂದ್ರ ಎಂದರೆ ನಮ್ಮ ನಾಡು ಎಂಬುದನ್ನು ಯಾರೂ ಮರೆಯುವಂತಿಲ್ಲ. ಈ ಪರಿಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಬೇಕಾದರೆ ನಮ್ಮನ್ನು ಮತ್ತು ನಮ್ಮ ಮಕ್ಕಳನ್ನು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಬದುಕಿನಲ್ಲಿ ಎಲ್ಲವನ್ನು ವ್ಯಾಪಾರಿ ದೃಷ್ಠಿಯಿಂದ ನೋಡಬಾರದು. ವ್ಯಾಪಾರಿ ದೃಷ್ಠಿಯಿಂದ ನೋಡುವವರನ್ನು ಇಂಗ್ಲೀಷ್‍ನವರು ಎಂದು ಕರೆಯುತ್ತೇವೆ. ನಮ್ಮಿಂದ ಆಗದ ಕೆಲಸನ್ನು ಮತ್ತೊಬ್ಬರು ಮಾಡಲು ಮುಂದಾದರೆ ಅವರಿಗೆ ಪ್ರೋತ್ಸಾಹ ನೀಡಬೇಕು. ಇದರಿಂದ ಈ ಸಂಸ್ಕೃತಿ ಇನ್ನಷ್ಟು ವಿಸ್ತಾರವಾಗಲಿದೆ ಎಂದರು.
ಕಳೆದ 29 ವರ್ಷಗಳಿಂದ ನಿರಂತರವಾಗಿ ತುಮಕೂರು ದಸರಾ ಮಹೋತ್ಸವ ಆಚರಿಸಿಕೊಂಡು ಬಂದಿರುವುದು ಅಭಿನಂದನಾರ್ಹ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, ಎಣ್ಣೆ ಅಹಂಕಾರದ ಸಂಕೇತ, ಬತ್ತಿ ಅಜ್ಞಾನದ ಸಂಕೇತ. ನಮ್ಮಲ್ಲಿರುವ ಅಹಂಕಾರವನ್ನು ಇಂಗಿಸಿ ಅಜ್ಞಾನವನ್ನು ಉರಿಸಿ ಸುಜ್ಞಾನದ ಬೆಳಕನ್ನು ದಶ ದಿಕ್ಕುಗಳಲ್ಲಿ ಬೆಳಗಿಸುವುದೇ ದೀಪ ಹಚ್ಚುವ ಸಂಕೇತವಾಗಿದೆ. ಸಿದ್ದಗಂಗಾ ಶ್ರೀಗಳು ಬೆಳಗಿಸಿದ ನಂದಾದೀಪ ತುಮಕೂರಿನಲ್ಲಿ ಸದಾ ಉರಿಯುತ್ತಿರುತ್ತದೆ ಎಂದು ಅವರು ಹೇಳಿದರು.
ನಮ್ಮಲ್ಲಿ ಭವ್ಯವಾದ ಪರಂಪರೆ ಇದೆ. ನಾವು ಸಮಾನರು. ಬಂಗಾರದಿಂದ ನಾವು ಬದಕಲು ಸಾಧ್ಯವಿಲ್ಲ. ಬಂಗಾರ ಇಲ್ಲದೆ ಬದುಕಬಹುದು. ಆದರೆ ಹಸಿರು ಇಲ್ಲದೆ. ಉಸಿರು ಇಲ್ಲದೆ ಬದಕಲು ಆಗುವುದಿಲ್ಲ. 3 ನಿಮಿಷ ಪ್ರಾಣ ವಾಯು ಇಲ್ಲದಿದ್ದರೆ ಪ್ರಾಣ ಹಾರಿ ಹೋಗುತ್ತದೆ. ಇಡೀ ವಿಶ್ವಕ್ಕೆ ಪ್ರಾಣ ವಾಯು ಕೊಡುವ ವೃಕ್ಷ ಎಂದರೆ ಅದು ಶಮಿ ವೃಕ್ಷ ಎಂದರು.
ಸ್ತ್ರೀಯನ್ನು ದೇವಿ ಎಂದು ಪೂಜಿಸುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ. ಹಾಗಾಗಿ ನಮ್ಮ ದೇಶದ ಸಂಸ್ಕೃತಿ ಎಲ್ಲಕ್ಕಿಂತ ಶ್ರೇಷ್ಠ ಎಂಬುದನ್ನು ಯಾರೂ ಮರೆಯಬಾರದು ಎಂದ ಅವರು, ಮಹಿಳೆಯರು ಇಲ್ಲದೇ ಜಗತ್ತೇ ಇಲ್ಲ ಎಂದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಮೈಸೂರಿನಲ್ಲಿ ಅರಸರ ಕಾಲದಲ್ಲಿ ನಡೆಯುತ್ತಿದ್ದ ವೈಭವದ ದಸರಾ ಹಬ್ಬವನ್ನು ಪ್ರಸ್ತುತ ದಿನಗಳಲ್ಲಿ ಸರ್ಕಾರಗಳು ಆಚರಿಸಿಕೊಂಡು ಬರುತ್ತಿವೆ. ಇದು ನಮ್ಮೆಲ್ಲರ ಸೌಭಾಗ್ಯ ಎಂದರು.
ಇಡೀ ಪ್ರಪಂಚದಲ್ಲೇ ಸಾಂಸ್ಕೃತಿಕ ಕೇಂದ್ರ ಮೈಸೂರು. ವಿದೇಶಿಗರು ಬಂದು ದಸರಾ ಹಬ್ಬವನ್ನು ಕಣ್ತುಂಬಿಕೊಂಡು ಪ್ರಪಂಚದಾದ್ಯಂತ ಕೊಂಡಾಡುವಷ್ಟರ ಮಟ್ಟಿಗೆ ಸಾಂಸ್ಕೃತಿಕ ಹಿರಿಮೆ-ಗರಿಮೆಯನ್ನು ಮೈಸೂರು ಹೊಂದಿದೆ ಎಂದು ಅವರು ಹೇಳಿದರು. ಜೀವನದಲ್ಲಿ ಮುಂದಿನ ಪೀಳಿಗೆಗೆ ಉತ್ತಮವಾಗಿ ಜೀವನ ಶೈಲಿ ನಡೆಸುವ ನಿಟ್ಟಿನಲ್ಲಿ ಹಬ್ಬಗಳನ್ನು ಆಚರಿಸುವ ಅಗತ್ಯವಿದೆ ಎಂದರು. ಪ್ರಸ್ತುತ ದಿನಗಳಲ್ಲಿ ಅತಿವೃಷ್ಠಿಯಾಗಿ ಊರು-ಊರುಗಳೇ ಕೊಚ್ಚಿ ಹೋಗುತ್ತಿವೆ. ಅದನ್ನು ಸಮತೋಲನವಾಗಿ ಕಾಪಾಡಿಕೊಳ್ಳುವ ಕೆಲಸ ಅತ್ಯಗತ್ಯವಾಗಿ ಆಗಬೇಕಾಗಿದೆ ಎಂದರು.
ಸಮಿತಿಯ ಅಧ್ಯಕ್ಷ ಕೋರಿ ಮಂಜಣ್ಣ ಮಾತನಾಡಿ, ಕಳೆದ 29 ವರ್ಷಗಳಿಂದ ತುಮಕೂರು ದಸರಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಗರದ ಇರುವ ಸುಮಾರು 60-70 ದೇವಾಲಯಗಳಲ್ಲಿನ ದೇವರುಗಳನ್ನು ಕರೆತಂದು ಶಮಿಪೂಜೆ ಮಾಡಿ ಸಾಮೂಹಿಕ ಮೆರವಣಿಗೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಸಮಿತಿಯ ಗೋವಿಂದರಾವ್, ರಮೇಶ್‍ಬಾಬು, ಎಸ್.ಪಿ. ಚಿದಾನಂದ್, ಶ್ರೀನಿವಾಸಪ್ರಸಾದ್, ಸುಮಬಾಬು, ಚೈತ್ರಾ ಮಂಜುನಾಥ್, ಎಲ್. ವಿಜಯಕುಮಾರ್, ಬಿ.ಎಸ್. ಮಂಜಣ್ಣ, ಜಿ. ಮಲ್ಲಿಕಾರ್ಜುನಯ್ಯ, ಎಸ್. ನಾಗಣ್ಣ, ಅನಂತರಾಮಯ್ಯ, ಜಿ.ಕೆ.ಶ್ರೀನಿವಾಸ್, ನಾಗರಾಜಶೆಟ್ಟಿ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೂಡಿಗೆರೆ ಆಳ್ವಾಸ್ ಸಂಸ್ಥೆಯಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು.