ತುರುವೇಕೆರೆ:
ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿದೆಡೆ ಆಯುಧಪೂಜಾ ಹಾಗೂ ವಿಜಯ ದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಕಸಬಾದ ದುಂಡಾ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ವಿಜಯದಶಮಿಯ ಶಮೀಪೂಜಾ ಮಹೋತ್ಸವ ಮಂಗಳವಾರ ಬಹಳ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಆಂಜನೇಯ ಸ್ವಾಮಿ, ಗ್ರಾಮದೇವತೆ ಕೆಂಪಮ್ಮ ಹಾಗು ಶ್ರೀ ಬೊಮ್ಮಲಿಂಗೆಶ್ವರ ಸ್ವಾಮಿ ದೇವರುಗಳನ್ನು ಸೋಮನ ಕುಣಿತ, ನಗಾರಿವಾದ್ಯದೊಂದಿಗೆ ಮೆರವಣಿಗೆ ಹೊರಟು ಊರಾಚೆ ಇರುವ ಬನ್ನಿ ಮಂಟಪಕ್ಕೆ ತರಲಾಯಿತು. ಬನ್ನಿ ಮಂಟಪದಲ್ಲಿ ಎಲ್ಲಾ ದೇವರುಗಳನ್ನು ಕುಳ್ಳಿರಿಸಿ ವಿಶೇಷ ಪೂಜೆ ನಡೆಸಲಾಯಿತು..
ಬನ್ನಿ ಮಂಟಪದ ಎದುರಿಗೆ ನೆಟ್ಟಿದ್ದ ಬಾಳೆಕಂಬಕ್ಕೆ ಬನ್ನಿಪತ್ರೆ ಸಿಕ್ಕಿಸಿ ಶಮೀಪೂಜೆ ನಡೆಸಿದ ತರುವಾಯ ಊರಿನ ಪಟೇಲ ವಂಶಸ್ಥರು ಸಾಂಪ್ರದಾಯದಂತೆ ಕತ್ತಿಯಿಂದ ಬಾಳೆಕಂಬವನ್ನು ಕತ್ತರಿಸಿದರು. ಇದು ಗ್ರಾಮಕ್ಕೆ ಸಹಬಾಳ್ವೆಯ ಸಂಕೇತವಾಗಿದ್ದು ಬಾಳೆಕಂಬ ಕತ್ತರಿಸಿದ ಸಂಧರ್ಬದಲ್ಲಿ ಬಾಳೆ ಕಂಬಕ್ಕೆ ಸಿಕ್ಕಿಸಿ ಪೂಜಿಸಿದ್ದ ಬನ್ನಿಪತ್ರೆಗೆ ಜನ ಮುಗಿಬಿದ್ದರು. ಬನ್ನಿ ಪತ್ರೆಯನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದು ಮುಂಬಾಗಿಲಿಗೆ ಸಿಲುಕಿಸುವುದರಿಂದ ಕುಟುಂಬದಲ್ಲಿ ಸುಖಶಾಂತಿ ಲಭಿಸುವುದೆಂಬುದು ಗ್ರಾಮಸ್ಥರ ನಂಬಿಕೆ. ಶಮೀಪೂಜೆ ನಡೆಯುವ ಸಂಧರ್ಭದಲ್ಲಿ ನೆಂಟರಿಷ್ಟರು ಸೇರಿದಂತೆ ಅಪಾರ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು. ಪಾಲ್ಗೋಂಡಿದ್ದ ನೂರಾರು ಭಕ್ತರಿಗೆ ಫಲಹಾರ ವಿತರಿಸಲಾಯಿತು.
ತದ ನಂತರ ಗ್ರಾಮಕ್ಕೆ ಆಗಮಿಸಿದ ದೇವರುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಇತ್ತೀಚೆಗೆ ಮೀಸಲಿಟ್ಟ ಬನ್ನಿ ಮಂಟಪ ಶಿಥಿಲಾವಸ್ಥೆ ತಲುಪಿದ್ದು ಮಂಟಪದ ಸುತ್ತ ಒತ್ತುವರಿಯಾಗಿರುವುದರಿಂದ ಸಂಪ್ರದಾಯದಂತೆ ಶಮೀಪೂಜೆ ಮಾಡಲು ತೊಡಕಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಂಪ್ರದಾಯದಂತೆ ಹಿಂದಿನಿಂದ ನಡೆಸಿಕೊಂಡು ಬಂದ ಶಮೀಪೂಜೆ ಮುಂದಿನ ದಿನಗಳಲ್ಲಿ ಎಲ್ಲಿ ನಿಂತು ಹೋಗುವುದೋ ಎಂಬ ಚಿಂತೆ ಕಾಡುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.