ಕೊರಟಗೆರೆ :

      ಜಂಪೇನಹಳ್ಳಿ ಕೆರೆಯ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿ ಯೋಜನಾ ವರದಿ ಸಿದ್ಧಪಡಿಸಿ ಕೆರೆ ಏರಿ ಕಾಮಗಾರಿಗೆ ತುರ್ತು ಕ್ರಮಕೈಗೊಂಡು ನೀರು ರಕ್ಷಣೆ ಮಾಡಿ ಎಂದು ಸಣ್ಣ ನೀರಾವರಿ ಇಲಾಖೆ ಎಇ ರಮೇಶ್ ಅವರಿಗೆ ಶಾಸಕ ಡಾ.ಜಿ.ಪರಮೇಶ್ವರ ಸೂಚಿಸಿದರು.

      ಪಟ್ಟಣದ ಹೊರವಲಯದ ಜಂಪೇನಹಳ್ಳಿ ಕೆರೆ ಕೋಡಿ ಬಿದ್ದ ಕಾರಣ ಗುರುವಾರ ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸಿದ ನಂತರ ರೈತರು ಕೆರೆ ಏರಿಯಿಂದ ನೀರು ಜಿನುಗುತ್ತಿರುವ ಬಗ್ಗೆ ಸ್ಥಳೀಯರು ಗಮನ ಸೆಳೆದ ವೇಳೆ ಸ್ಥಳ ಪರಿಶೀಲನೆ ಮಾಡಿದ ಅವರು ಕೂಡಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಏರಿ ದುರಸ್ತಿ ಮಾಡುವಂತೆ ತಿಳಿಸಿದರು.

       ಅಧಿಕಾರಿಗಳ ಜೊತೆ ಕೆರೆ ಏರಿ ಪರಿಶೀಲನೆ ನಡೆಸಿದ ವೇಳೆ ತುರ್ತಾಗಿ ಏರಿಯ ಮೇಲಿರುವ ಬೇಲಿ ತೆರವುಗೊಳಿಸಿ ಅಗತ್ಯ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಪಟ್ಟಣ ಸೇರಿದಂತೆ ಕ್ಷೇತ್ರದ ಆರು ಹೋಬಳಿ ವ್ಯಾಪ್ತಿಯಲ್ಲಿ ವಾರದಿಂದ ಉತ್ತಮ ಮಳೆಯಾಗುತ್ತಿದೆ. ಕ್ಷೇತ್ರದ ಕೆರೆ, ಕಟ್ಟೆಗಳಿಗೆ ಉತ್ತಮ ನೀರು ಹರಿದು ಬರುತ್ತಿದೆ. ರೈತರು ಬಿತ್ತನೆ ಮಾಡಿರುವ ಬೆಳೆಗಳು ಸದ್ಯಕ್ಕೆ ಸಮೃದ್ಧವಾಗಿ ಬೆಳೆದು ನಿಂತಿವೆ. ಕಳೆದ ಏಳು ವರ್ಷದಿಂದ ಆವರಿಸಿದ್ದ ಬರಗಾಲದ ಛಾಯೆ ದೂರವಾಗುವ ನಂಬಿಕೆ ಇದೆ ಎಂದರು.

      ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸುವ ಜಂಪೇನಹಳ್ಳಿ ಕೆರೆ ಅಭಿವೃದ್ಧಿ, ಪುನಶ್ಚೇತನ ಆಗಿಲ್ಲ. ಜೊತೆ ಕೆರೆ ಭೂಒತ್ತುವರಿಗೆ ಬಲಿಯಾಗಿದೆ. ಕೆರೆ ಏರಿ ಮೇಲೆ ಬೃಹದಾಕಾರದ ಬೇಲಿ ಬೆಳೆದಿದ್ದು, ಏರಿ ಬಿರುಕು ಕಾಣಿಸಿಕೊಂಡು ನೀರು ಜಿನುಗುತ್ತಿದೆ. ಈ ಬಗ್ಗೆ ತಕ್ಷಣ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

       ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜನೀಮಾಭಿ, ಉಪಾಧ್ಯಕ್ಷ ವೆಂಕಟಪ್ಪ, ಇಒ ಎಸ್.ಶಿವಪ್ರಕಾಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಓಬಳರಾಜು, ನರಸಿಂಹಪ್ಪ, ಲಕ್ಷ್ಮೀ ನಾರಾಯಣ, ನಾಗರಾಜು, ನಟರಾಜು, ಪುಟ್ಟನರಸಪ್ಪ, ಮುಖ್ಯಾಧಿಕಾರಿ ಲಕ್ಷ್ಮಣ್ ಮುಖಂಡರಾದ ರಮೇಶ್, ಗಣೇಶ್, ಅರಕೆರೆ ಶಂಕರ್, ಮೆಡಿಕಲ್ ಅಶ್ವತ್ಥ್, ದಿನೇಶ್, ವಿನಯ್, ಟಿ.ಡಿ.ಪ್ರಸನ್ನಕುಮಾರ್, ರವಿಕುಮಾರ್, ಚಿಕ್ಕರಂಗಯ್ಯ ಇದ್ದರು.

(Visited 9 times, 1 visits today)