ತುರುವೇಕೆರೆ:
ರಾಜ್ಯ ಬಿಜೆಪಿ ಪಕ್ಷದ ಅಭಿವೃದ್ದಿಗಾಗಿ ಸಚಿವ ಶ್ರೀರಾಮುಲುರವರಿಗೆ ರಾಜ್ಯದ ಉಪಮುಖ್ಯ ಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಶಾಸಕ ಮಸಾಲಜಯರಾಮ್ ಸರ್ಕಾರಕ್ಕೆ ಮನವಿ ಮಾಡಿದರು.
ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಾಲ್ಮೀಕಿ ಸಮುದಾಯದ ಮುಖಂಡರ ಮನವಿಯ ಮೇರೆಗೆ ಪಟ್ಟಣದಲ್ಲಿ ನಿರ್ಮಾಣವಾಗುವ ವಾಲ್ಮೀಕಿ ಸಮುದಾಯ ಭವನಕ್ಕೆ ಶಾಸಕರ ಅನುದಾನದಿಂದ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದರು. ವಾಲ್ಮೀಕಿ ಸಮುದಾಯದ ಪರಂಪರೆ ಅತ್ಯಂತ ಪ್ರಾಚೀನವಾಗಿದ್ದು ರಾಜ್ಯದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಜಗತ್ತಿನಾದ್ಯಂತ ನಾಡಿನ ಕೀರ್ತಿಯನ್ನು ಪಸರಿಸುವಂತೆ ಮಾಡಿದವರು ವಾಲ್ಮೀಕಿ ವಂಶಸ್ಥರೆ ಎಂಬುದನ್ನು ಚರಿತ್ರೆ ಹೇಳುತ್ತದೆಂದು ಅಭಿಪ್ರಾಯಪಟ್ಟರು.
ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಮ್ ಮಾತನಾಡಿ ವಾಲ್ಮೀಕಿ ಬರೆದ ರಾಮಾಯಣ ಇಡೀ ಮನುಕುಲಕ್ಕೆ ಮಾದರಿಯಾಗಿದೆ. ರಾಮಾಯಣದಲ್ಲಿ ಕುಟುಂಬದ ಭಾವನಾತ್ಮಕ ಸಂಬಂಧಗಳು ಮತ್ತು ಅದರ ಮೌಲ್ಯಗಳು ಅನಾವರಣಗೊಂಡಿವೆ. ರಾಮಾಯಣದಲ್ಲಿನ ಪ್ರತಿಯೊಂದು ಪಾತ್ರಗಳೂ ಸಮಾಜದಲ್ಲಿನ ಮನುಷ್ಯನ ವಿಭಿನ್ನ ನಡಾವಳಿಗಳ ಪ್ರತೀಕ ಎಂದು ವಿವರಿಸಿದರು.
ಈ ಸಂದ ದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗು ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ಪುರಸ್ಕøತ ಸೋಮಣ್ಣನವರನ್ನು ಅಭಿನಂದಿಸಲಾಯಿತು. ವಿವಿಧ ಜನಪದ ಕಲಾತಂಡಗಳಿಂದ ವಾಲ್ಮೀಕ ಭಾವಚಿತ್ರವನ್ನು ಉಡಿಸಲಮ್ಮ ದೇವಸ್ಥಾನದಿಂದ ವೇದಿಕೆ ಕಾರ್ಯಕ್ರಮದವರೆಗೆ ಮೆರವಣಿಗೆ ನಡೆಯಿತು.
ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಮಹಲಿಂಗಯ್ಯ, ಸದಸ್ಯರಾದ ಭೈರಪ್ಪ, ಸುಶೀಲಮ್ಮ, ಬಿಜೆಪಿ ತಾಲೂಕು ಅಧ್ಯಕ್ಷ ದುಂಡಾರೇಣುಕಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಂಜನ್ ಕುಮಾರ್, ಚಿದಾನಂದ್, ಎಪಿಎಂಸಿ ಅಧ್ಯಕ್ಷ ಪ್ರಸನ್ನಕುಮಾರ್, ಸದಸ್ಯ ಕಾಂತರಾಜು, ಮುಖಂಡ ರಾಮೇಗೌಡ, ಕಡೇಹಳ್ಳಿಸಿದ್ದೇಗೌಡ, ಯು.ಬಿ.ಸುರೇಶ್, ಸಮಾಜಕಲ್ಯಾಣಾಧಿಕಾರಿ ರಾಮಯ್ಯ, ಬಿಇಒ.ರಂಗಧಾಮಯ್ಯ, ಕಸಾಪ ನಂರಾಜು, ಪ್ರಹ್ಲಾದ್, ಸಮುದಾಯದ ಮುಖಂಡರು ಮತ್ತು ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.