ತುಮಕೂರು :
ಜಿಲ್ಲೆಯ ಮಧುಗಿರಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯಾಪ್ತಿಗೆ ಸೇರಿದ ಸಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಭಾರೀ ವಾಹನಗಳನ್ನು ತಡೆದು ಅಕ್ರಮವಾಗಿ ಲಂಚದ ಹಣ ಪಡೆಯುತ್ತಿದ್ದ ಆರೋಪವಿತ್ತು.
ಈ ಸಂಬಂಧ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ದೂರನ್ನಾಧರಿಸಿ ಸ್ಥಳದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಖಚಿತ ಪಡಿಸಿಕೊಂಡ ಎಸಿಬಿ ಅಧಿಕಾರಿಗಳು ದೂರು ದಾಖಲಿಸಿ ಪಂಚರ ಸಮಕ್ಷಮದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದ ಸ್ಥಳದಲ್ಲಿದ್ದ ಮಧುಗಿರಿ ಎಆರ್ಟಿಓ ಕಚೇರಿಯ ಸರ್ಕಾರಿ ವಾಹನದ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಇನ್ಸ್ಪೆಕ್ಟರ್ ಆರ್.ಸುರೇಂದ್ರ ಕುಮಾರ್ ಮತ್ತು ಸಿಬ್ಬಂದಿಯ ಮೇಲೆ ಎಸಿಬಿ ಡಿವೈಎಸ್ಪಿ ಬಿ.ಉಮಾಶಂಕರ್ ಮತ್ತು ಇನ್ಸ್ಪೆಕ್ಟರ್ ಸುನೀಲ್ ರವರ ತಂಡ ಹಠಾತ್ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ಸಂದರ್ಭದಲ್ಲಿ ಹಣ ಸಂದಾಯ ರಸೀದಿಯ ಮೊತ್ತಕಿಂತ 35,000 ಸಾವಿರ ನಗದು ಹಣ ಹೆಚ್ಚುವರಿಯಾಗಿ ಕಂಡುಬಂದ ಹಿನ್ನೆಲೆಯಲ್ಲಿ ನೆರಳು ಸಾಕ್ಷಿದಾರರು ಮತ್ತು ಪಂಚರ ಸಮಕ್ಷಮ ರಾಷ್ಟ್ರೀಯ ಹೆದ್ದಾರಿ ರಸ್ತೆ ಶಿರಾ ತಾಲ್ಲೂಕಿನ ಜಾಸ್ ಟೋಲ್ ನ ಕಚೇರಿಯ ಬಳಿ ಪಂಚನಾಮೆ ಮಾಡಿ ಹಣ ವಶ ಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣ ಹೆಚ್ಚಿನ ತನಿಖೆಯ ಅಗತ್ಯತೆ ಅನಿವಾರ್ಯತೆ ಇರುವುದರಿಂದ ಮುಂದಿನ ತನಿಖೆ ಮುಂದುವರಿಸಲಾಗಿದ್ದು ತನಿಖೆಯಲ್ಲಿ ದಾಳಿಯ ವೇಳೆ ಸರ್ಕಾರಿ ಬುಲೆರೋ ವಾಹನದಲ್ಲಿ ಸಿಕ್ಕ ಹಣ ಮತ್ತು ವಶಪಡಿಸಿಕೊಂಡ ದಾಖಲಾತಿಗಳು ತಾಳೆಯಾಗದಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ಎಸಿಬಿ ಅಧಿಕಾರಿಗಳ ದಿಡೀರ್ ದಾಳಿ ಮಾಡುವ ರೀತಿ ಕಂಡು ಸಾರಿಗೆ ಇಲಾಖೆಯ ಭ್ರಷ್ಟ ಅಧಿಕಾರಿಗಳು ಆತಂಕಕ್ಕೊಳಗಾಗಿದ್ದಾರೆ. ದಾಳಿಯ ನಂತರ ಸಾರ್ವಜನಿಕ ವಲಯದಲ್ಲಿ ಎಸಿಬಿ ಅಧಿಕಾರಿಗಳ ಬಗ್ಗೆ ಪ್ರಶಂಸನೀಯ ಮಾತುಗಳು ಕೇಳಿಬರುತ್ತಿದೆ.
ಜಿಲ್ಲೆಯ ಹಲವಾರು ಇಲಾಖೆಗಳಲ್ಲಿ ಇಂತಹ ಕಡು ಭ್ರಷ್ಟಾಚಾರ ನಡೆಯುತ್ತಿದ್ದು ಅವುಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎನ್ನುವ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿವೆ.
ಎಸಿಬಿಯ ಡಿವೈಎಸ್ಪಿ ಬಿ.ಉಮಾಶಂಕರ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಸುನೀಲ್ ಮತ್ತು ಸಿಬ್ಬಂಧಿಗಳು ದಾಳಿಯಲ್ಲಿ ಭಾಗವಹಿಸಿದ್ದರು.