ತುಮಕೂರು:

      ಇಂದಿನ ಯುವಕರು ಜಾಗತಿಕ ನಾಗರಿಕರಾಗಿ ಬೆಳೆಯುವುದು ಅನಿವಾರ್ಯವಾಗಿದೆ. ಬದಲಾಗಿರುವ ಕಾಲಕ್ಕೆ ತಕ್ಕಂತೆ ಹೊಸತನ ಮತ್ತು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

      ತುಮಕೂರು ವಿಶ್ವವಿದ್ಯಾನಿಲಯವು ಶನಿವಾರ ಏರ್ಪಡಿಸಿದ್ದ ‘ಯುವ ಸಬಲೀಕರಣ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತವು ತನ್ನಲ್ಲಿರುವ ಯುವಶಕ್ತಿಯ ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದರು.

      ಭಾರತದ ವಿಶ್ವದಲ್ಲೇ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳ್ಳುವ ಅವಕಾಶ ಯುವಕರಷ್ಟು ಬೇರೆ ಯಾರಿಗೂ ಇಲ್ಲ. ಇದನ್ನು ಬಳಸಿಕೊಂಡರೆ ಭಾರತ ವಿಶ್ವಮಟ್ಟದಲ್ಲಿ ಇನ್ನಷ್ಟು ಪ್ರಭಾವಶಾಲಿಯಾಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.

       ಭೌಗೋಳಿಕ ಸೂಚಿಗಳ ದಾಖಲೀಕರಣದಲ್ಲಿ ಮೈಸೂರು ಅರಮನೆಗೆ ವಿಶೇಷ ಆಸಕ್ತಿ ಇದೆ ಎಂದ ಅವರು ಭೌಗೋಳಿಕ ಸೂಚಿ ಗುರುತನ್ನು ಪಡೆದಿರುವ ಸುಮಾರು 250 ವಸ್ತುಗಳು ಭಾರತದಲ್ಲೂ, 40ರಷ್ಟು ವಸ್ತುಗಳು ಕರ್ನಾಟಕದಲ್ಲೂ ಇವೆ. ಅವುಗಳ ಸರಂರಕ್ಷಣೆ ಮತ್ತು ಪ್ರವರ್ಧನೆ ಅಗತ್ಯವಿದೆ ಎಂದರು.

       ಪರಿಸರ ಸಂರಕ್ಷಣೆ ಇಂದಿನ ಬಹುದೊಡ್ಡ ಅನಿವಾರ್ಯತೆ. ಅದು ನಮ್ಮ ಮನೆಗಳಿಂದಲೇ ಆರಂಭವಾಗವೇಕು. ತಾನು ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯ ಸಾಮಗ್ರಿಗಳನ್ನು ಬಳಸುತ್ತೇನೆ ಎಂಬ ಅಭಿಯಾನ ಕುಟುಂಬ ಮಟ್ಟದಿಂದ ಆರಂಭವಾದರೆ ಪ್ಲಾಸ್ಟಿಕ್ ಸಮಸ್ಯೆ ತಾನಾಗಿಯೇ ಬಗೆಹರಿಯುತ್ತದೆ ಎಂದರು.

       ಆರ್ಥಿಕ ಹಿಂಜರಿತದ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದೆ. ಆದರೆ ಅದೊಂದು ಜಾಗತಿಕ ವಿದ್ಯಮಾನ. ಸ್ಥೂಲಮಟ್ಟದಲ್ಲಿ ಅದರ ಪರಿಣಾಮ ಉಂಟಾಗಿದ್ದರೂ, ತಳಮಟ್ಟದಲ್ಲಿ ಅಂತಹ ಋಣಾತ್ಮಕ ಬದಲಾವಣೆಯೇನೂ ಆಗಿಲ್ಲ. ಇದನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬಲ್ಲದು ಎಂದು ವಿದ್ಯಾರ್ಥಿಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

      ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಮಾತನಾಡಿ ಭೌಗೋಳಿಕ ಸೂಚಿಗಳ ದಾಖಲೀಕರಣದ ಅಭಿಯಾನಕ್ಕೆ ಸಂಬಂಧಿಸಿದಂತೆ ತುಮಕೂರು ವಿಶ್ವವಿದ್ಯಾನಿಲಯವು ಮೈಸೂರು ರಾಜಮನೆತನದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಿದೆ ಎಂದರು.

      ಮೈಸೂರು ಸಂಸ್ಥಾನದೊಂದಿಗೆ ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಯದುವೀರ ಒಡೆಯರ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿರುವುದು ಒಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್ ಉಪಸ್ಥಿತರಿದ್ದರು.

(Visited 22 times, 1 visits today)