ಮಧುಗಿರಿ :
ಬ್ರಿಟೀಷರ ವಿರುದ್ದ ಹೋರಾಡಿ ಅವರ ನಿದ್ದೆಗೆಡಿಸಿದ ಮೈಸೂರು ಹುಲಿ ಟಿಪ್ಪು ಬಗ್ಗೆ ರಾಜಕಾರಣದಿಂದಾಗಿ ಅಪಸ್ವರಗಳು ಎದ್ದಿರುವುದು ವಿಷಾದನೀಯ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಹಜರತ್ ಟಿಪ್ಪುಸುಲ್ತಾನ್ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಿಟೀಷರು ಜಾನ್ಸಿರಾಣಿ ಲಕ್ಷ್ಮೀಬಾಯಿ ಮತ್ತು ಟಿಪ್ಪುಸುಲ್ತಾನ್ ಈ ಇಬ್ಬರಿಗೆ ಹೆದರುತ್ತಿದ್ದರು ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಎಲ್ಲಾ ಧರ್ಮದ ಜನರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದ ಮಹಾನ್ ವ್ಯಕ್ತಿ ಟಿಪ್ಪು ಎಂದು ಬಣ್ಣಿಸಿದ ಅವರು ಕರ್ನಾಟಕ ಮತ್ತು ಮಧುಗಿರಿ ಪಟ್ಟಣದಲ್ಲಿ ಹಿಂದೂ ಮುಸ್ಲೀಂಮರು ಅಣ್ಣ-ತಮ್ಮಂದಿರಂತೆ ಬಹಳಷ್ಟು ಅನ್ಯೋನ್ಯವಾಗಿದ್ದಾರೆ ಎಂದರು.ಸರ್ಕಾರ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಮುದಾಯದ ಮುಖಂಡ ಎಂ.ಆರ್. ಖಲೀಲ್ ಮಾತನಾಡಿ ಕರ್ನಾಟಕ ಭಾರತಕ್ಕೇ ಮಾದರಿಯಾಗಿದ್ದು, ದೇಶಕ್ಕೇ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ಜಯಂತಿಗಳನ್ನು ಆಚರಿಸುವುದು ನಮ್ಮ ಕರ್ತವ್ಯ. ಟಿಪ್ಪು ಕ್ಷಿಪಣಿಯ ಜನಕ. ಆದರೆ ಇಂದು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಇದನ್ನು ಬಿಟ್ಟು ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು ರೂಪಿಸುವುದರ ಮೂಲಕ ಅವರ ಮನಗೆಲ್ಲಬೇಕಿದೆ. ಕರ್ನಾಟಕದ ಜನತೆ ಸುಶಿಕ್ಷಿತರಾಗಿದ್ದು, ಜಯಂತಿ ವಿರೋಧದ ನೆಪದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಸಮಾರಂಭದಲ್ಲಿ ಕೊಟ್ಟಾಶಂಕರ್ ಪ್ರಧಾನ ಭಾಷಣ ಮಾಡಿದರು. ಉಪವಿಭಾಗಾಧಿಕಾರಿ ಚಂದ್ರಶೇಖರ್, ಮುಖ್ಯಾಧಿಕಾರಿ ಲೋಹಿತ್, ತಾ.ಪಂ ಇಓ ಮೋಹನ್ ಕುಮಾರ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಅಲ್ಪ ಸಂಖ್ಯಾತರ ವಸತಿ ನಿಲಯದ ವಿಸ್ತರಣಾಧಿಕಾರಿ ಮರುಳ ಸಿದ್ದೇಶ್ವರ, ಬಿಇಓ ನರಸಿಂಹಯ್ಯ, ಪುರಸಭೆ ಮಾಜಿ ಅಧ್ಯಕ್ಷ ಅಯೂಬ್ ಸದಸ್ಯರಾದ ಎಂ.ಎಲ್. ಗಂಗರಾಜು, ತಿಮ್ಮರಾಯಪ್ಪ, ಲಾಲಾಪೇಟೆ ಮಂಜುನಾಥ್, ಅಲೀಂ, ಮುಖಂಡರಾದ ಅಲ್ತಾಫ್, ರಿಯಾಜ್, ಜೀಲಾನ್, ಷಕೀಲ್, ಖುದ್ದೂಸ್ ಮತ್ತು ಸಮುದಾಯದ ಮುಖಂಡರು ಇದ್ದರು.
ಪೋಟೋ 10 ಮಧುಗಿರಿ 1 : ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಹಜರತ್ ಟಿಪ್ಪುಸುಲ್ತಾನ್ ಜಯಂತಿಯನ್ನು ಶಾಸಕ ಎಂ.ವಿ.ವೀರಭದ್ರಯ್ಯ ಉದ್ಘಾಟಿಸಿದರು.