ಆಟೋ ಚಾಲಕನ ಅಜಾಗರೂಕತೆ ಮತ್ತು ಚೆಲ್ಲಾಟದಿಂದ ಖಾಸಗಿ ಬಸ್ಸಿನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತವಾಗಿ ಬಸ್ಸಿನಲ್ಲಿದ್ದ ಐದು ಜನ ಮೃತ ಪಟ್ಟಿದ್ದಾರೆ.

      ಇನ್ನುಳಿದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಕೈಕಾಲು ಮುರಿದು ತೀವ್ರ ತರಹದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರ ನಡೆದಿದೆ.

      ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಜೆಟ್ಟಿಅಗ್ರಹಾರದ ಸರಕಾರಿ ಪ್ರೌಢಶಾಲೆಯ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಜಗನ್ನಾಥಪುರ ಕಡೆಯಿಂದ ಅಗ್ರಹಾರದ ಮುಖ್ಯರಸ್ತೆಗೆ ಸೇರಲು ಬಂದಂತಹ ಆಟೋ ವೇಗವಾಗಿ ಬರುತ್ತಿದ್ದ ವಿಜಯಲಕ್ಷ್ಮೀ ಎಂಬ ಖಾಸಗಿ ಬಸ್ಸನ್ನು ನೋಡಿಯೂ ಮುನ್ನುಗ್ಗಿದ್ದಾನೆ. ಅಪಘಾತ ತಡೆಯಲು ಯತ್ನಿಸಿದ ಬಸ್ಸು ನಿಯಂತ್ರಣಕ್ಕೆ ಬರದೇ ಪಲ್ಟಿ ಹೊಡೆದು ಅಪಘಾತವಾಗಿದೆ.

       ಅಪಘಾತದಲ್ಲಿ ಕೊರಟಗೆರೆ ತಾಲೂಕಿನ ಗೇರಹಳ್ಳಿ ಗ್ರಾಮದ ಇಮ್ರಾನ್(18), ಹೊಳವನಹಳ್ಳಿಯ ಅಕ್ರಂಪಾಷ(28), ಕೊರಟಗೆರೆ ಪಟ್ಟಣದ ಮೊಹಮ್ಮದ್ ಸಾಜದ್(19), ಪುಲಮಾಚೀಹಳ್ಳಿಯ ಶಿವಕುಮಾರ್(27) ಮತ್ತು ಮಧುಗಿರಿ ತಾಲೂಕು ಕೋಡಿಗೇನಹಳ್ಳಿಯ ಶ್ರೀನಿವಾಸ್(40) ಎಂಬ ಐದು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

      ಅಪಘಾತವಾಗಿ ಪಲ್ಟಿ ಹೊಡೆದ ಬಸ್ಸಿನಿಂದ ಹೊರಗೆ ಬರಲು ಯತ್ನಿಸುತ್ತಿದ್ದ 30ಕ್ಕೂ ಹೆಚ್ಚು ಗಾಯಾಳುಗಳನ್ನು ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಕೊರಟಗೆರೆ, ತುಮಕೂರು ಮತ್ತು ಬೆಂಗಳೂರು ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ. ಕೈಕಾಲು ಮುರಿದಿರುವ ಗಾಯಾಳು ಮತ್ತು ಮೃತಪಟ್ಟ ಪ್ರಯಾಣಿಕರ ಕುಟುಂಬದ ಸದಸ್ಯರು ತಮ್ಮ ಗೋಳಿನ ಜೊತೆ ಅಪಘಾತ ತಡೆಯಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕಾಲಿಗೆ ಬಿದ್ದಿರುವ ಘಟನೆ ನಡೆದಿದೆ.

ಸ್ಥಳೀಯರ ಆಕ್ರೋಶ:

      ಪಾವಗಡ-ತುಮಕೂರು ಕೇಶಿಪ್ ರಾಜ್ಯ ಹೆದ್ದಾರಿಯೇ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಖಾಸಗಿ ಬಸ್ಸು ಮತ್ತು ಆಟೋಗಳ ಹಾವಳಿ ಹೆಚ್ಚಾಗಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ಶಾಲಾ ವಿದ್ಯಾರ್ಥಿಗಳಿಗೆ ಭದ್ರತೆ ನೀಡುವುದೇ ಕಷ್ಟವಾಗಿದೆ. ವಾಹನದ ಪರವಾನಗಿ ಮತ್ತು ದಾಖಲೆ ಇಲ್ಲದೇ ಸಾಕಷ್ಟು ವಾಹನ ಚಲಿಸುತ್ತಿವೆ. ಸಾರಿಗೆ ಇಲಾಖೆ ಕಾಣೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಅಪಘಾತವಾದ ಸ್ಥಳಕ್ಕೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಧುಗಿರಿ ಶಾಸಕ ವೀರಭದ್ರಯ್ಯ, ತುಮಕೂರು ಜಿಲ್ಲಾಧಿಕಾರಿ ರಾಕೇಶಕುಮಾರ, ಮಧುಗಿರಿ ಎಸಿ ಡಾ.ನಂದಿನಿದೇವಿ, ಬೆಂಗಳೂರು ಐಜಿ ಶರತಚಂದ್ರ, ಪೊಲೀಸ್ ಅಧಿಕ್ಷಕ ಡಾ.ಕೋನವಂಶಿಕೃಷ್ಣ, ಡಿವೈಎಸ್ಪಿ ಧರಣೀಶ್, ಸಿಪಿಐ ನದಾಪ್, ಪಿಎಸೈ ಮಂಜುನಾಥ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 49 times, 1 visits today)