ತುಮಕೂರು:

      ಜಿಲ್ಲೆಯ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದ ಬಳಿ ಸಂಭವಿಸಿದ ಬಸ್ ದುರಂತದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

      ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕೊರಟಗೆರೆ ತಾಲ್ಲೂಕಿನ ಜಟ್ಟಿ ಅಗ್ರಹಾರದ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದು, ನಂತರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ನೀಡಿದ ಮಾಹಿತಿಯಂತೆ ಎದುರಿಗೆ ಬಂದ ಆಟೋರಿಕ್ಷಾವನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ತಲೆಕೆಳಗಾಗಿ ಬಿದ್ದದ್ದರಿಂದ ಈ ಅಪಘಾತ ಸಂಭವಿಸಿದೆ ಎಂದರು.

      ವಾಹನಗಳು ವೇಗಮಿತಿ ಇಲ್ಲದೇ, ಖಾಸಗಿ ಬಸ್‍ಗಳು ಓಡಾಡುವ ಸಮಯದ ಅಂತರ ಕಡಿಮೆ ಇರುವುದರಿಂದ ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ವ್ಯವಸ್ಥೆ ರೂಪಿಸಿ ಎಂದು ಅಲ್ಲಿನ ಸ್ಥಳೀಯರು ಕೇಳಿಕೊಂಡರು. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಭೆ ಕರೆಯಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಅಲ್ಲದೇ ಅಪಘಾತಕ್ಕೀಡಾದ ಖಾಸಗಿ ಬಸ್‍ಗೆ ಸೂಕ್ತ ದಾಖಲೆಗಳು ಸರಿಯಾಗಿರುವುದರಿಂದ ಇನ್ಸುರೆನ್ಸ್ ಕ್ಲೇಮ್ ಮಾಡಿಕೊಡಲು ಅನುಕೂಲವಾಗುತ್ತದೆ. ಅಲ್ಲದೇ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಪರಿಹಾರ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.

      ಬಸ್ ದುರಂತದಲ್ಲಿ 6 ಜನ ಮೃತಪಟ್ಟಿದ್ದು, 19 ಜನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪೈಕಿ 6-7 ಜನರಿಗೆ ಮೂಳೆ ಮುರಿದಿದೆ. ಈ ಎಲ್ಲ ಗಾಯಾಳುಗಳಿಗೆ ಉಚಿತವಾಗಿ ಸೇವೆ ಒದಗಿಸಿ ಗುಣವಾಗುವವರೆಗೂ ವೈದ್ಯಕೀಯ ಆರೈಕೆ ಮಾಡಲಾಗುತ್ತದೆ. ಎಲ್ಲ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡುತ್ತೇವೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ವೀರಭದ್ರಯ್ಯ ಅವರಿಗೆ ಸೂಚಿಸಿದರು.

      ಖಾಸಗಿ ಬಸ್‍ಗಳು ಆ ಮಾರ್ಗವಾಗಿ ತುಂಬಾ ಓಡಾಡುತ್ತವೆ. ಈ ಬಸ್ಸುಗಳ ಸಂಚಾರ ಸಮಯದ ಅಂತರ ಕೂಡ ಕಡಿಮೆ ಇರುವುದರಿಂದ ಬಸ್ ನಿಲ್ದಾಣದಲ್ಲಿ ಹೆಚ್ಚು ಹೊತ್ತು ಬಸ್‍ಗಳು ನಿಲ್ಲಲು ಏಜೆಂಟ್‍ಗಳು ಬಿಡದೇ ನಾ ಮುಂದು ತಾ ಮುಂದು ಎಂದು ಹೊರಡುತ್ತವೆ. ಈ ರಸ್ತೆಯಲ್ಲಿ ಹಂಪ್‍ಗಳನ್ನು ಹಾಕಬಾರದೆಂಬ ನಿಯಮವಿರುವುದರಿಂದ ವೇಗವನ್ನು ತಪ್ಪಿಸಲು ಆಗುತ್ತಿಲ್ಲ. ಕೆಲಸಕ್ಕೆ ಹೋಗುವವರಿಗೆ ಬೆಳಗ್ಗೆ 8.30 ರಿಂದ 10 ಗಂಟೆಯವರೆಗೆ ಮಹತ್ವದ ಸಮಯ. ಈ ಸಮಯದಲ್ಲಿ ವೇಗದಿಂದ ಬಸ್ಸುಗಳು ಸಂಚಾರ ಮಾಡುತ್ತವೆ.

      ಇವೆಲ್ಲವೂ ಸಹ ಅಪಘಾತವಾಗಲು ಮುಖ್ಯ ಕಾರಣವಾಗಿವೆ. ಇದನ್ನು ತಡೆಗಟ್ಟಲು ಈ ಸಮಯದಲ್ಲಿ ಸರ್ಕಾರಿ ಬಸ್‍ಗಳನ್ನು ಬಿಡುವ ಕುರಿತು ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದ್ದೇವೆ. ಬಹುಶಃ ನವೆಂಬರ್ 1ರಂದು ನಡೆಯುವ ಜಿಲ್ಲಾಧಿಕಾರಿಗಳು ಹಾಗೂ ಆರ್‍ಟಿಒ ಅಧಿಕಾರಿಗಳ ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

(Visited 111 times, 1 visits today)