ತುಮಕೂರು:
ಕರ್ನಾಟಕದಲ್ಲಿ ಆರಂಭವಾಗುವ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಇನ್ನು ಮುಂದೆ ಕನ್ನಡದ ಮಕ್ಕಳಿಗೆ ಕೊಡಬೇಕೆನ್ನುವ ನೀತಿಯನ್ನು ಸಚಿವ ಸಂಪುಟದಲ್ಲಿ ಪಾಸು ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.
ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿಂದು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಜವಳಿ ನೀತಿಯನ್ನೂ ಪಾಸು ಮಾಡಲಾಗಿದೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊರತು ಪಡಿಸಿ ಬೇರೆ ಎಲ್ಲಾದರೂ ಮೂಲಭೂತ ಕಸಬು ಕೈಗೊಳ್ಳಲು ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ನಗರಕ್ಕೆ ಹೋಗುವ ವಲಸೆ ತಪ್ಪಿಸದಿದ್ದರೆ ರಾಜ್ಯ ಶ್ರೀಮಂತವಾಗಿದೆ ಎಂದು ಭಾವಿಸಲು ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿ ಎಂದರೆ ರಾಜ್ಯದಲ್ಲಿನ ಪ್ರತಿಯೊಬ್ಬ ವ್ಯಕ್ತಿ ಅಭಿವೃದ್ಧಿಯಾಗಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಮಾನತೆ ಬಂದ ದಿನ ನಾವೆಲ್ಲಾ ಅಭಿವೃದ್ಧಿಶೀಲರಾಗುತ್ತೇವೆ. ಪ್ರತಿಯೊಬ್ಬ ವ್ಯಕ್ತಿ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸರ್ಕಾರ ಬಹುದೊಡ್ಡ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕೆಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ಅಲ್ಲದೆ, ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ಘಟಕ ಪ್ರಾರಂಭಕ್ಕೆ ಅಂಗೀಕಾರ ಮಾಡಲಾಗಿದೆ. ವಸಂತನರಸಾಪುರದಲ್ಲಿನ ಘಟಕಕ್ಕೆ ವಿಶೇಷ ಒತ್ತು ನೀಡುವ ಸಲುವಾಗಿಯೂ ಚರ್ಚೆ ನಡೆಸಲಾಗಿದೆ. ಸ್ಥಳೀಯರಿಗೆ ಕೈಗಾರಿಕೆ ನಿವೇಶನ ಅಂಚಿಕೆಯಲ್ಲಿ ರಿಯಾಯಿತಿ ಕೊಡಬೇಕೆಂಬ ಕ್ರಮ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಕಾವೇರಿಯಿಂದ ಗೋದಾವರಿವರೆಗೆ ವಿಸ್ತೀರ್ಣವಾಗಿದ್ದ ಕರುನಾಡು ಕಾಲನಂತರ ಅನೇಕ ಆಡಳಿತಗಳಿಗೆ ಒಳಗಾಗಿ ನಂತರ ನಾವೆಲ್ಲಾ ಹೊಂದಾಗಿದ್ದೇವೆ, ಮೊದಲು ನಾವೆಲ್ಲಾ ಒಂದು ಮನೆಮಕ್ಕಳು ಎಂಬ ಭಾವನೆ ಇರಲಿಲ್ಲ. ಅನೇಕ ಸಾಹಿತಿಗಳು ಹೋರಾಟಗಾರರ ಪರಿಶ್ರಮದಿಂದ ಕನ್ನಡ ನಾಡನ್ನು ಒಂದು ಗೂಡಿಸುವ ಪ್ರಯತ್ನ ಮಾಡಲಾಯಿತು. ಅಂದುಕೊಂಡಷ್ಟು ಮಾಡದೇ ಹೋದರೂ ಸರಿಸುಮಾರು ಶೇ.70 ಅಥವಾ 90ರಷ್ಟು ಪ್ರದೇಶವನ್ನು ಒಂದುಗೂಡಿಸಿಕೊಂಡು ಕನ್ನಡಾಂಬೆಯ ಮಕ್ಕಳು ಎಂದು ಈ ದಿನ ಆಚರಿಸುತ್ತಿದ್ದೇವೆ. 64 ನೇ ಕನ್ನಡ ರಾಜ್ಯೋತ್ಸವ ಬಹಳ ಶುಭದಿನವಾಗಿದೆ ಎಂದು ಅವರು ನುಡಿದರು.
ಗುಬ್ಬಿ ವೀರಣ್ಣ ಅವರಿಂದ ಮಾಸ್ಟರ್ ಹಿರಣ್ಣಯ್ಯನವರವರೆಗೆ ಚಿಕ್ಕನಾಯಕನಹಳ್ಳಿಯ ಈಶ್ವರಪ್ಪ, ಮಲ್ಲಪ್ಪನವರವರೆಗೆ, ತೀ.ನಂ. ಶ್ರೀಕಂಠಯ್ಯ, ಸಿದ್ಧಲಿಂಗಪ್ಪನವರು ಸೇರಿದಂತೆ ಅನೇಕ ಸಾಹಿತಿಗಳು, ಕಲಾವಿದರು ಸಾಹಿತ್ಯ, ಕಲೆ , ಸಂಸ್ಕ್ರತಿಗೆ ಶಕ್ತಿ ತುಂಬಿ ಕನ್ನಡ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ನಡೆದಾಡುವ ದೇವರು ಲಿಂ.ಡಾ.ಶ್ರೀ.ಶಿವಕುಮಾರ ಸ್ವಾಮೀಜಿ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವೆರಲ್ಲರ ಶ್ರಮದಿಂದಾಗಿ ಹಿಂದುಳಿದ ಜಿಲ್ಲೆಯಂತಿದ್ದ ತುಮಕೂರು ನಾಗರಿಕತೆ ಕಂಡು ಅಭಿವೃದ್ಧಿಯ ಪಥದಲ್ಲಿ ನಡೆಯುತ್ತಿದೆ ಎಂದು ಅವರು ನುಡಿದರು.
ಉತ್ತಮ ಮಳೆಯಿಂದಾಗಿ ಈ ವರ್ಷ ಕರುನಾಡು ಹಸಿರನ್ನುಟ್ಟು ಸಂಪನ್ನಭರಿತವಾಗಿದೆ. ಅನೇಕ ಕಡೆ ಅತೀರೇಖಗಳಾಗಿರಬಹುದು ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಬದುಕುವ ಆಸೆಯನ್ನು ಪೃಕೃತಿ ಇಂದು ನಿರ್ಮಾಣಮಾಡಿದೆ. ಇಡೀ ನಾಡು ಆರೋಗ್ಯಕರವಾಗಿರಬೇಕು.
ಪ್ರಕೃತಿಯ ಸವಲತ್ತುಗಳನ್ನು ನಮ್ಮದು ಎಂದು ಭಾವಿಸಬಾರದು. ನೀರು, ವಿದ್ಯುತ್ ಸೇರಿದಂತೆ ಮತ್ಯಾವುದೇ ಸ್ವತ್ತನ್ನು ಅತಿಯಾಗಿ ಬಳಸುವುದನ್ನು ಕಡಿಮೆ ಮಾಡಬೇಕು. ಮಿತವಾಗಿ ಬಳಸಿದರೆ ಮುಂದಿನ ಪೀಳಿಗೆಗೆ ಉಳಿತಾಯವಾಗಲಿದೆ. ನಗರದ ಜನರು ಮಿತವಾಗಿ ಬಳಕೆ ಮಾಡಿ ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗಬೇಕು. ಗಾಂಧೀಜಿಯಿಂದ ಇಂದಿನ ಪ್ರಧಾನಿ ನರೇಂದ್ರಮೋದಿಯವರೆಗೆ ಸ್ವಚ್ಚತೆಗೆ ಆದ್ಯತೆ ಕೊಡಲಾಗಿದೆ. ಸ್ವಚ್ಚವಾಗಿ ಬಾಳಬೇಕು.
ನೆಮ್ಮದಿ ಜೀವನ ರೂಪಿಸಿಕೊಂಡು ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಅವರು ಕರೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕೆಂದು ನಮ್ಮ ಉದ್ದೇಶವಾಗಿದ್ದು, ಪ್ರಾರಂಭಕ್ಕೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು 260 ಕೋಟಿ ರೂ.ಗಳ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಅದೇ ರೀತಿ ಹಂತ ಹಂತವಾಗಿ ಜಿಲ್ಲೆಯಲ್ಲಿರುಮೆಲ್ಲಾ ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಿದ್ದೇವೆ ಎಂದರು.
ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕಾಗಿದೆ. ಇದಕ್ಕಾಗಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ರೈತರ ಸಹಭಾಗಿತ್ವದಲ್ಲಿ ನಿವೇಶನ ಅಭಿವೃದ್ದಿ ಪಡಿಸುವ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡಲು ಮುಂದಾಗಿದ್ದೇವೆ. ಅಲ್ಲದೇ ಸ್ಥಳಿಯರಿಗೆ ಉದ್ಯೋಗ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರದ ಸೌಲಭ್ಯ ಪಡೆದ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಸ್ಥಳೀಯರಿಗೆ ಪ್ರಾತಿನಿಧ್ಯ ನೀಡುವ ನಿಯಮ ಜಾರಿಗೆ ತರಲಾಗುತ್ತಿದೆ ಅಲ್ಲದೆ ಜವಳಿ ಕ್ಷೇತ್ರದ ಉತ್ತೇಜನಕ್ಕಾಗಿ ನೂತನ ಜವಳಿ ನೀತಿಯನ್ನು ಜಾರಿಗೆ ತಂದಿದ್ದೇವೆ ಎಂದು ಅವರು ತಿಳಿಸಿದರು.
ಹೇಮಾವತಿಯಿಂದ ಜಿಲ್ಲೆಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿದೆ. ಬೆಳೆ ಬೆಳೆಯಲು ನೀರು ನೀಡಲಾಗುವುದು ಎಂದು ಇದೇ ಮೊದಲ ಬಾರಿಗೆ ಅಧಿಸೂಚನೆ ಹೊರಡಿಸಿದ್ದೇವೆ. ತುಮಕೂರು ಜಿಲ್ಲೆಯನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿ ಹಂತಹಂತವಾಗಿ ಅಭಿವೃದ್ಧಿ ಪಡಿಸಲಿದ್ದೇವೆ ಎಂದು ಅವರು ತಿಳಿಸಿದರು.
ತುಮಕೂರು ಮತ್ತು ಬೆಂಗಳೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳನ್ನು ಓಡಿಸುವಂತೆ ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಲಾಗಿದೆ. ಕೈಗಾರಿಕೆಗಳ ಸಿಎಸ್‍ಆರ್ ನಿಧಿಯಿಂದ ಹಣವನ್ನು ಪಡೆದು ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 13000 ಎಕರೆ ಭೂಮಿ ಲಭ್ಯತೆಯಿದ್ದು, ಈ ಭೂಮಿಯಲ್ಲಿ ಅವಕಾಶವಿದ್ದರೆ ವಿಮಾನ ನಿಲ್ದಾಣಕ್ಕಾಗಿ 1000 ಎಕರೆ ಭೂಮಿಯನ್ನು ಮೀಸಲು ಇಡಲು ಚಿಂತನೆ ನಡೆಸಲಾಗಿದೆ.
ಭವಿಷ್ಯದ ಹಿತದೃಷ್ಟಿಯಿಂದ ಜಿಲ್ಲೆಗೆ ವಿಮಾನ ನಿಲ್ದಾಣದ ಅಗತ್ಯತೆಯ ಬಗ್ಗೆ ಚಿಂತಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಮಾರಂಭದಲ್ಲಿ ಶಾಲಾಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು. ತಾಯಿ ಭುವನೇಶ್ವರಿಯ ಮೆರವಣಿಗೆ ಹಾಗೂ ವಿವಿಧ ಇಲಾಖೆಗಳಿಂದ ಏರ್ಪಡಿಸಿದ್ದ ಸ್ತಬ್ದ ಚಿತ್ರ ಮೆರವಣಿಗೆ ಜನಾಕರ್ಷಣೀಯವಾಗಿದ್ದವು.
ಪಥ ಸಂಚಲನ ನಡೆಸಿದ ಎನ್‍ಸಿಸಿ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸೇವಾಧಳದ ತುಕಡಿಗಳಿಗೆ, ಪ್ರಬಂಧ ಸ್ಫರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಹಾಗೂ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಅಂಕ ಪಡೆದ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಕೆ.ಎ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ನಗರ ಶಾಸಕ ಜಿ.ಬಿಜ್ಯೋತಿಗಣೇಶ್, ಪಾಲಿಕೆ ಮೇಯರ್ ಲಲಿತಾರವೀಶ್, ಉಪಮೇಯರ್ ರೂಪಶ್ರೀ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು ಇದ್ದರು.